Advertisement
ಕಲಿಕೆಯಲ್ಲಿ ನಾವೀನ್ಯತೆ ಅಳವಡಿಕೆ, ಶಾಲಾ ವನ, ಸ್ವಚ್ಛ ಪರಿಸರ ನಿರ್ಮಾಣ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಅಳವಡಿಸಿದ ಪರಿಣಾಮ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಒಲಿದು ಬಂದಿದೆ.
Related Articles
Advertisement
ಶಾಲಾ ವನ ನಿರ್ಮಾಣ ಮಾಡಿ, ರಾಸಾಯನಿಕ ಗೊಬ್ಬರ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದ್ದಾರೆ. ಶಾಲಾ ವನಕ್ಕೆ ರಕ್ಷಣಾ ಗೋಡೆ, ಹಸಿರು ಸೊಪ್ಪು ಬೆಳೆಯುವಿಕೆ, ಸುಂದರ, ಸ್ವಚ್ಛ ಪರಿಸರ ನಿರ್ಮಾಣ ಮಾಡಿದ್ದಾರೆ. ಪ್ರತಿ ಶುಕ್ರವಾರ ಸಾಂಸ್ಕೃತಿಕ ಸಂಜೆ ನಾವೀನ್ಯತಾ ಕಾರ್ಯಕ್ರಮ, ತಾಯಂದಿರ ಸಭೆ, ಪಾಲಕರ ಸಭೆ, ಶಾಲೆಗೆ ಬನ್ನಿ ಶನಿವಾರ, ವಿಶಿಷ್ಟ ಪರಿಹಾರ ಬೋಧನೆ ಇತ್ಯಾದಿ ಅಂಶಗಳನ್ನು ಹಂದಿಗನೂರು ಶಾಲೆಯಲ್ಲಿ ಅಳವಡಿಸಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
30 ವರ್ಷಗಳ ಸಾರ್ಥಕ ಸೇವೆ: ಹಾನಗಲ್ಲ ತಾಲೂಕು ಮಲ್ಲಿಗಾರ ಓಣಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ 1992ರಲ್ಲಿ ಕೊಟ್ರಪ್ಪ ಮೇಲ್ಮುರಿ ಅವರು, ಸಿಆರ್‌ಪಿ ಆಗಿ 7 ವರ್ಷ ಸೇವೆ ಸಲ್ಲಿಸಿದ್ದಾರೆ. ಬಳಿಕ ತಾಲೂಕಿನ ಕೊರಡೂರು ಶಾಲೆ, ಸದ್ಯ ಹಂದಿಗನೂರು ಶಾಲೆ ಮುಖ್ಯಾಧ್ಯಾಪಕರಾಗಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಲ್ಲಿಗಾರ ಶಾಲೆಯಲ್ಲಿ ಹೆಚ್ಚಾಗಿ ಲಮಾಣಿ ಸಮುದಾಯದ ಮಕ್ಕಳೇ ಕಲಿಯುತ್ತಿದ್ದರು. ಶಾಲೆಯ ಶೋಚನೀಯ ಸ್ಥಿತಿ ಕಂಡು ಶಾಲೆಗೆ ಒಂದು ಹೊಸ ರೂಪ ಕೊಡಲು ಸಂಕಲ್ಪ ಮಾಡಿದರು. ಊರ ಹಿರಿಯರ, ಶಿಕ್ಷಣ ಪ್ರೇಮಿಗಳ ಸಭೆ ನಡೆಸಿ, ದಾಖಲಾತಿ, ಹಾಜರಾತಿ ಅಂದೋಲನ ಕೈಗೊಂಡು ಸಮೀಪದ ಸಾತೇನಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿಂದ ಮಕ್ಕಳನ್ನು ತಮ್ಮ ಶಾಲೆಗೆ ದಾಖಲು ಮಾಡಿಕೊಂಡು ಮಕ್ಕಳ ಸಂಖ್ಯೆಯನ್ನು 60ಕ್ಕೆ ಹೆಚ್ಚಿಸಿದರು. ಅರಳೇಶ್ವರ, ಕೊರಡೂರ ಶಾಲೆಯಲ್ಲಿ ಸೇವೆ ಸಲ್ಲಿಸಿ 2014ರಿಂದ ಬಡ್ತಿ ಮುಖ್ಯೋಪಾಧ್ಯಾಯರಾಗಿ ಹಂದಿಗನೂರ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯಲ್ಲಿ ಉತ್ತಮ ಪರಿಸರ ಸಂರಕ್ಷಣೆ ಮಾಡಿ ಮೂರು ಬಾರಿ ಜಿಲ್ಲಾ ಪರಿಸರ ಮಿತ್ರ ಪ್ರಶಸ್ತಿ ಪಡೆದಿದ್ದಾರೆ. ವಿದ್ಯಾಗಮ ಕಾರ್ಯಕ್ರಮದಲ್ಲೂ ಶಾಲೆಯ ಪ್ರಗತಿ ಕಂಡು ಇಲಾಖೆ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದರು.
ಶಿಕ್ಷಕರಿಗೆ ಪ್ರಶಸ್ತಿ ಬರುವುದು ಕಡಿಮೆ. ಈ ಸಲದ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಇದರಿಂದ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಮಕ್ಕಳ ಕಲಿಕೆ, ಸಾಧನೆಯಲ್ಲೇ ನಾವು ಸಂತಸ ಕಾಣುತ್ತೇವೆ. ನಮ್ಮ ಕೈಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಕರೆ ಮಾಡಿ ಅಭಿನಂದಿಸುತ್ತಿದ್ದಾರೆ. ಬಹಳ ಸಂತೋಷವಾಗುತ್ತಿದೆ. -ಕೊಟ್ರಪ್ಪ ಮೇಲ್ಮುರಿ, ಪ್ರಶಸ್ತಿಗೆ ಭಾಜನ ಶಿಕ್ಷಕ