Advertisement

ನಾಲ್ಕು ದಿನಗಳ ಕೃಷಿ ಮೇಳಕ್ಕೆ ಅದ್ದೂರಿ ತೆರೆ

11:34 AM Nov 15, 2021 | Team Udayavani |

ಬೆಂಗಳೂರು: ನಾಲ್ಕು ದಿನಗಳ ಕಾಲ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ನಡೆದ ಕೃಷಿ ಮೇಳ-2021ಕ್ಕೆ ಭಾನುವಾರ ಅದ್ಧೂರಿ ತೆರೆ ಬಿತ್ತು. ಸಮಾರೋಪದಲ್ಲಿ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ವಿಜೇತರಿಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಪ್ರಶಸ್ತಿ ಪ್ರದಾನ ಮಾಡಿ ಕೃಷಿ ಮಾಡಲು ಹುರಿದುಂಬಿಸಿದರು.

Advertisement

ಇನ್ನು ಭಾನುವಾರವಾಗಿದ್ದರಿಂದ ಮತ್ತು ಮಳೆ ಬಿಡುವು ನೀಡಿದ್ದರಿಂದ ಲಕ್ಷಾಂತರ ಜನರು ಕೃಷಿ ಮೇಳದ ಅನುಭವ ಪಡೆದರು. ಕೃಷಿ ಉಪಕರಣಗಳು, ನೂತನ ತಳಿಗಳು, ಆಧುನಿಕ ತಂತ್ರಜ್ಞಾನ, ಬಿತ್ತನೆ-ಬೀಜ, ತಾರಸಿ ಕೃಷಿ ಸೇರಿದಂತೆ ನೂತನ ಕೃಷಿ ಮಾದರಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಪ್ರತಿ ಮಳಿಗೆಗಳ ಮುಂದೆ ಜನರು ಕಿಕ್ಕಿರಿದು ತುಂಬಿದ್ದರು.

ಇದನ್ನೂ ಓದಿ:- ಮಕ್ಕಳ ಮನಸ್ಸು ನಿಷ್ಕಲ್ಮಷ: ಸಿದ್ಧಲಿಂಗ ಸ್ವಾಮೀಜಿ

ಅದೇ ರೀತಿ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಬೆಳೆದಿರುವ ರಾಗಿ, ಭತ್ತ, ಜೋಳ, ನವಣೆ, ಸಾಮೆ, ಆರ್ಕ, ಬರಗು, ಸುಗಂಧ ದ್ರವ್ಯಗಳ ಗಿಡಗಳು, ಔಷಧೀಯ ಸಸ್ಯಗಳು, ಹೈಡ್ರೋಫೋನಿಕ್ಸ್‌ ತಂತ್ರಜ್ಞಾನ, ಇಸ್ರೇಲ್‌ ಕೃಷಿ ಪದ್ಧತಿ, ಜೇನು ಕೃಷಿ ಸೇರಿದಂತೆ ಎಲ್ಲೆಡೆಯೂ ಜನ ಸಾಗರವೇ ತುಂಬಿತ್ತು. ಎಳೆ ಬಿಸಿಲು ಮತ್ತು ತುಸು ತಂಗಾಳಿ ಬೀಸುತ್ತಿದ್ದರಿಂದ ಜನರು ಆರಾಮಾಗಿ ಮೇಳವನ್ನು ಸಖತ್‌ ಎಂಜಾಯ್‌ ಮಾಡಿದರು.

ಜಾತ್ರೆಯಂತಾದ ಮೇಳ: ಮೊದಲ ಮೂರು ದಿನ ಜಿಟಿ ಜಿಟಿ ಮಳೆಯಲ್ಲೇ ನಡೆದ ಮೇಳ, ಕೊನೆಯ ದಿನವಾದ ಭಾನುವಾರ ಮಾತ್ರ ಜಾತ್ರೆಯ ಕಳೆ ಬಂದಿತ್ತು. ಮೇಳದ ಪ್ರತಿ ಬೀದಿಗಳಲ್ಲಿ ಕಡಲೆಪುರಿ, ಆಟಿಕೆಗಳು, ವಸ್ತ್ರಗಳು, ಬ್ಯಾಗ್‌ಗಳು, ಮನೆಬಳಕೆ ವಸ್ತುಗಳು, ಬಲೂನುಗಳು, ಭಜ್ಜಿ-ಬೋಂಡ, ಸ್ವೀಟ್‌ ಕಾರ್ನ್ ಸೇರಿದಂತೆ ಹತ್ತಾರು ಬಗೆಯ ತಿಂಡಿ-ತಿನಿಸುಗಳ ಮಾರಾಟವಾಗುತ್ತಿತ್ತು. ನಗರದ ಜನತೆಗೆ ಒಂದು ರೀತಿಯಲ್ಲಿ ಜಾತ್ರೆಯ ಅನುಭವ ಪಡೆದರು.

Advertisement

ರಾಜ್ಯಪಾಲರ ಭೇಟಿ - ಬೆಳೆಗಳ ವೀಕ್ಷಣೆ ನಿಷೇಧ: ಮಧ್ಯಾಹ್ನ 2.30ಕ್ಕೆ ರಾಜ್ಯಪಾಲರ ಕಾರ್ಯಕ್ರಮದ ಸಮಯ ನಿಗದಿಯಾಗಿತ್ತು. ಭೇಟಿ ವೇಳೆ ಈ ಬಾರಿ ಬಿಡುಗಡೆ ಮಾಡಿರುವ ಹತ್ತು ನೂತನ ತಳಿಗಳ ಬೆಳೆಯನ್ನು ಕೂಡ ರಾಜ್ಯಪಾಲರು ವೀಕ್ಷಣೆ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಶಿಷ್ಟಾಚಾರ ಪಾಲನೆ ಮಾಡುವ ಉದ್ದೇಶದಿಂದ ಭದ್ರತಾ ಸಿಬ್ಬಂದಿ ಮಧ್ಯಾಹ್ನ ಒಂದು ಗಂಟೆಯಿಂದಲೇ ತೋಟದ ಬೆಳೆಗಳ ವೀಕ್ಷಣೆಗೆ ಪ್ರವೇಶ ನಿಷೇಧಿಸಿದರು. ಸುಮಾರು ಎರಡು ಗಂಟೆಗಳ ಸಮಯ ಸಾರ್ವಜನಿಕರ ವೀಕ್ಷಣೆಗೆ ನಿಷೇಧ ಹೇರಿದ್ದರಿಂದ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.

8 ಲಕ ಜನ, ವರ್ಚುಯಲ್‌ನಲ್ಲಿ 38 ಲಕ್ಷ ಜನ ಭೇಟಿ:- 

ಮೇಳಕ್ಕೆ ಭಾನುವಾರ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2.64 ಲಕ್ಷ ಜನರು ಭೌತಿಕವಾಗಿ ಮತ್ತು 18.29 ಲಕ್ಷ ಜನರು ವರ್ಚುಯಲ್‌ ವೇದಿಕೆಯಲ್ಲಿ ಮೇಳವನ್ನು ವೀಕ್ಷಣೆ ಮಾಡಿದ್ದಾರೆ. ಒಟ್ಟಾರೆ ನಾಲ್ಕು ದಿನಗಳಲ್ಲಿ ಭೌತಿಕವಾಗಿ 8 ಲಕ್ಷ ಹಾಗೂ ವರ್ಚುಯಲ್‌ನಲ್ಲಿ 38.11 ಲಕ್ಷ ಮಂದಿ ಮೇಳವನ್ನು ವೀಕ್ಷಣೆ ಮಾಡಿದ್ದಾರೆ. ಈ ಮೂಲಕ ಕೃಷಿ ವಿಶ್ವವಿದ್ಯಾಲಯದ ನಿರೀಕ್ಷೆಗೂ ಮೀರಿ ದೊಡ್ಡ ಸಂಖ್ಯೆಯಲ್ಲಿ ಜನರು ಮೇಳವನ್ನು ವೀಕ್ಷಣೆ ಮಾಡಿದ್ದಾರೆ.

ಮೊದಲನೇ ದಿನ ಭೌತಿಕವಾಗಿ 60 ಸಾವಿರ ಮತ್ತು ಆನ್‌ಲೈನ್‌ನಲ್ಲಿ 1.55 ಸಾವಿರ, 2ನೇ ದಿನ ಮೇಳಕ್ಕೆ 1.76 ಲಕ್ಷ ಭೇಟಿ, ಆನ್‌ಲೈನ್‌ನಲ್ಲಿ 5.2 ಲಕ್ಷ, 3ನೇ ದಿನ 3 ಲಕ್ಷ ಮತ್ತು ಆನ್‌ಲೈನ್‌ನಲ್ಲಿ 12.96 ಲಕ್ಷ ಜನ ಭೇಟಿ ನೀಡಿದ್ದರು. ಕಳೆದ ವರ್ಷ ವರ್ಚುವಲ್‌ ವೇದಿಕೆಯಲ್ಲಿ ಮೇಳ ನಡೆಸಲಾಗಿತ್ತು. ಆನ್‌ಲೈನ್‌ನಲ್ಲಿ ಕೇವಲ 1.25 ಲಕ್ಷ ಮಂದಿಯಷ್ಟೇ ಭಾಗವಹಿಸಿದ್ದರು. ಇನ್ನು 2019ರಲ್ಲಿ ನಡೆದಿದ್ದ ಕೃಷಿ ಮೇಳದಲ್ಲಿ 14 ಲಕ್ಷ ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next