ಬೆಂಗಳೂರು: ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ರಾಜ್ಯ ಮುಖ್ಯಚುನಾವಣಾಧಿಕಾರಿಗಳು ಮತ್ತು ರಾಜ್ಯ ಸರ್ಕಾರದ ನಡುವಿನ “ಪತ್ರ ಸಂಘರ್ಷ’ ಇದೀಗ ಕೇಂದ್ರ ಚುನಾವಣಾ ಆಯೋಗದ ಅಂಗಳ ತಲುಪಿದೆ.
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿ ಮೂವರು ಜಿಲ್ಲಾಧಿಕಾರಿಗಳನ್ನು ಜ.22ರಂದು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿತ್ತು.
ಇದನ್ನು ಆಕ್ಷೇಪಿಸಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಂಗಳವಾರ (ಜ.23) ಪತ್ರ ಬರೆದಿದ್ದರು. ಅದೇ ದಿನ ಸಂಜೆ ವರ್ಗಾವಣೆಗೆ ಸಮ್ಮತಿ ಕೋರಿ ರಾಜ್ಯ ಸರ್ಕಾರ ಪತ್ರ ಬರೆದಿತ್ತು.
ಆದರೆ, ರಾಜ್ಯ ಸರ್ಕಾರ ಪತ್ರ ಬರೆದಿದ್ದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಅಲ್ಲ. ಬದಲಿಗೆ ನೇರವಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ ಎನ್ನಲಾಗಿದೆ. ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿರುವಾಗ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ
ಗಳನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡುವಂತಿಲ್ಲ. ಒಂದೊಮ್ಮೆ ವಿಶೇಷ ಕಾರಣಗಳಿಗಾಗಿ ವರ್ಗಾವಣೆ ಮಾಡಬೇಕಾದರೆ ಚುನಾವಣಾ ಆಯೋಗದ ಸಮ್ಮತಿ ಪಡೆದುಕೊಳ್ಳಬೇಕು ಎನ್ನುವ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲೇಖೀಸಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದು. ಈಗ ಸಮ್ಮತಿ ಕೋರಿ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.