Advertisement
16 ವರ್ಷಗಳಿಂದ ಈ ಹೆದ್ದಾರಿಗೆ ಡಾಮರು ಕಾಮಗಾರಿ ಕೈಗೊಂಡಿಲ್ಲ. ಪ್ರತೀ ವರ್ಷ ಜಾತ್ರೆಯ ಸಮಯದಲ್ಲಿ ನಡೆಸುವ ತೇಪೆ ಕಾರ್ಯಕ್ಕೆ ಸೀಮಿತವಾಗಿದೆ. ದಿನೇ ದಿನೇ ರಸ್ತೆಯೂ ಹದಗೆಡುತ್ತಿದ್ದು, ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ. ಹಲವು ಸಮಯದಿಂದ ಅಭಿವೃದ್ಧಿ ಆಗುತ್ತದೆ ಎಂದು ಹೇಳಲಾಗುತ್ತಿದೆಯಾದರೂ ಇದುವರೆಗೂ ಅದರ ಯಾವುದೇ ಲಕ್ಷಣ ಕಂಡಿಲ್ಲ.
Related Articles
Advertisement
ಹೆದ್ದಾರಿಯ ಕೆಲವೆಡೆ ತಗ್ಗುಗಳು, ಉಬ್ಬುಗಳು ಕಂಡುಬರುತ್ತವೆ. ರಸ್ತೆ ಬದಿ ಮಣ್ಣು ಕೊಚ್ಚಿ ಹೋಗಿ ತಗ್ಗುಗಳಿಂದ ಕೂಡಿದೆ. ಇದು ದ್ವಿಚಕ್ರವಾಹನ ಸಂಚಾರಕ್ಕೆ ಸಂಕಷ್ಟ ಉಂಟುಮಾಡಿದ್ದು, ಕೆಲವು ಸವಾರರ ಬೆನ್ನು ನೋವಿಗೆ ಕಾರಣವಾಗಿವೆ. ಈ ರಾಜ್ಯ ಹೆದ್ದಾರಿ ಅಗಲ ಕಿರಿದಾಗಿದ್ದು. ಕೆಲವೆಡೆ 4 ಮೀ. ಅಗಲವೂ ಇಲ್ಲ. ಇದು ಪಂಚಾಯತ್ ಕಚ್ಚಾ ರಸ್ತೆಯಂತಿದೆ. ಕಳಸಗುರಿ ಬಸ್ ತಂಗುದಾಣ ಸಮೀಪ ರಸ್ತೆ ಬದಿಯಲ್ಲಿ ಪೈಪ್‌ಲೈನ್‌ಗೆ ಅಗೆದು ಹಾಕಲಾಗಿದ್ದು, ಹೊಂಡವನ್ನು ಮುಚ್ಚದೇ ಇರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಮಾಹಿತಿ ನೀಡದ ಖಾಲಿ ಫಲಕಗಳು :
ಪೊಳಲಿ ದೇವಸ್ಥಾನಕ್ಕೆ ಹೋಗುವ ಈ ರಾಜ್ಯ ಹೆದ್ದಾರಿಯಲ್ಲಿ ಸಾಗಿದರೆ ರಸ್ತೆ ಬದಿಯಲ್ಲಿ ಕಿಲೋ ಮೀಟರ್ ಸೂಚಿಸುವ ಫಲಕಗಳಿವೆ. ಆದರೆ ಊರು, ದೂರದ ಬಗ್ಗೆ ಯಾವುದನ್ನು ಬರೆಯದೇ ಬಣ್ಣ ಬಳಿದು ಬಿಡಲಾಗಿದೆ. ಇದರಿಂದ ದೇಗುಲ ಎಷ್ಟು ದೂರದಲ್ಲಿದೆ ಎಂಬುವುದು ದೂರದಿಂದ ಬಂದ ಯಾತ್ರಿಗಳಿಗೆ, ವಾಹನ ಚಾಲಕರಿಗೆ ತಿಳಿಯುವುದಿಲ್ಲ.
ರಸ್ತೆಯ ಬದಿ ಬೆಳೆದ ಗಿಡಗಂಟಿಗಳು :
ಈ ರಸ್ತೆ ಬದಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ಕಟಾವು ಮಾಡಿಲ್ಲ. ಇದು ತ್ಯಾಜ್ಯ ಎಸೆದು ಹೋ ಗುವವರಿಗೆ ಪೂರಕವಾಗಿದೆ. ಪ್ಲಾಸ್ಟಿಕ್ ತೊಟ್ಟೆಗಳು, ಚೀಲಗಳ ರಾಶಿ ಕಂಡುಬರುತ್ತಿದ್ದು, ಮಾಂಸದ ತ್ಯಾಜ್ಯ ದುರ್ನಾಥ ಬೀರುತ್ತಿದೆ.
ಚರಂಡಿಗೆ ಆದ್ಯತೆ ಅಗತ್ಯ :
ಈ ರಾಜ್ಯ ಹೆದ್ದಾರಿ ಬದಿಯಲ್ಲಿ ಚರಂಡಿಗಳೇ ಇಲ್ಲ, ಒಂದೆಡೆ ಗುಡ್ಡ ಪ್ರದೇಶವಾದ ಕಾರಣ ಇಲ್ಲಿ ಚರಂಡಿಗಳಿಗೆ ಆದ್ಯತೆ ನೀಡಬೇಕು. ಚರಂಡಿಗಳಿಲ್ಲದೇ ರಸ್ತೆಯ ಮಣ್ಣು ಕೊಚ್ಚಿ ಹೋಗಿ ಹೊಂಡಗುಂಡಿಗಳು ಸೃಷ್ಟಿಯಾಗುತ್ತಿವೆ.
ಮೂಲ್ಕಿಯಿಂದ ಕಟೀಲು- ಬಜಪೆ- ಗುರುಪುರ ಕೈಕಂಬ ತನಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆದು ವಿಸ್ತರಣೆಗೊಂಡಿದೆ. ಆದರೆ ಪೊಳಲಿ ದ್ವಾರದಿಂದ ಅಡ್ಡೂರು ತನಕ ರಾಜ್ಯ ಹೆದ್ದಾರಿ ಯಾಕೆ ಅಭಿವೃದ್ಧಿ ಕಂಡಿಲ್ಲ ಎಂಬುವುದು ಸಾರ್ವಜನಿಕರಲ್ಲಿ ಸಂಶಯಕ್ಕೆ ಕಾರಣವಾಗಿದೆ.
ಟೆಂಟರ್ ಪ್ರಕ್ರಿಯೆ ವಿಳಂಬ :
5 ಕೋ.ರೂ. ಅನುದಾನದಲ್ಲಿ ಈ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ವಾಹನ ಸುಗಮ ಸಂಚಾರಕ್ಕೆ ತೊಂದರೆಯಾಗುವುದನ್ನು ಗಮನಿಸಿದ್ದೇನೆ. ಕೊರೊನಾದಿಂದಾಗಿ ಈ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿ ಕೊಂಚ ವಿಳಂಬವಾಗಿದೆ. ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಮಂಗಳೂರು ನಗರ ಹಾಗೂ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಅತೀ ಪ್ರಮುಖ ರಸ್ತೆ ಇದಾಗಿದೆ. ಈ ರಾಜ್ಯಹೆದ್ದಾರಿ ವಿಸ್ತರಣೆ, ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಾಗುವುದು. -ಡಾ| ಭರತ್ ಶೆಟ್ಟಿ ವೈ., ಶಾಸಕರು
ಶೀಘ್ರ ಕಾಮಗಾರಿ ಆರಂಭ :
ಪೊಳಲಿ ದ್ವಾರದಿಂದ ಅಡ್ಡೂರು ಸೇತುವೆ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಲೋಕೋಪಯೋಗಿ ಇಲಾಖೆಯ 5 ಕೋ.ರೂ. ಅನುದಾನದಲ್ಲಿ ಸುಮಾರು 3 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. 5.5 ಮೀ. ಇದ್ದ ರಸ್ತೆಯನ್ನು 7 ಮೀಟರ್‌ಗೆ ವಿಸ್ತರಿಸಲಿದೆ. ಗುಡ್ಡ ಇರುವ ಕಾರಣ ಹೆಚ್ಚು ತಡೆಗೋಡೆಗಳ ನಿರ್ಮಾಣ, ಮೋರಿಗಳು, ತಿರುವುಗಳನ್ನು ತೆಗೆದು ನೇರ ಮಾಡಲಾಗುವುದು . – ಯಶವಂತ್, ಎಕ್ಸಿಕ್ಯೂಟಿವ್ ಎಂಜಿನಿಯರ್ ಲೋಕೋಪಯೋಗಿ ಇಲಾಖೆ
– ಸುಬ್ರಾಯ ನಾಯಕ್ ಎಕ್ಕಾರು