Advertisement
ಒಂದು ಕಡೆ ಕೇಂದ್ರ ಸರ್ಕಾರ ಭಾರತೀಯ ವೈದ್ಯ ಪದ್ಧತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಳ್ಳುತ್ತಿದ್ದರೆ, ಇನ್ನೊಂದು ಕಡೆ ರಾಜ್ಯ ಸರ್ಕಾರ ಸರಿಸುಮಾರು ಒಂದೂವರೆ ದಶಕಗಳಿಂದ ವಿವಿಧ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಿಂದ ಆಯುಷ್ ವೈದ್ಯರ ಸೇವೆ ಪಡೆಯುತ್ತಿದ್ದರೂ, ನಮಗೆ ಸೇವಾ ಭದ್ರತೆ ಯಾಗಲಿ, ಸಮರ್ಪಕ ವೇತನವಾಗಲಿ, ವಿವಿಧ ಸೌಲಭ್ಯಗಳನ್ನಾಗಲಿ ನೀಡುತ್ತಿಲ್ಲ ಎಂಬ ಅಳಲು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಲುತ್ತಿರುವ ಆಯುಷ್ ವೈದ್ಯರದ್ದಾಗಿದೆ.
Related Articles
Advertisement
ಎಂಬಿಬಿಎಸ್ ಹಾಗೂ ಸರ್ಕಾರದಿಂದ ನೇಮಕಗೊಂಡ ಆಯುಷ್ ವೈದ್ಯರೊಂದಿಗೆ ಸರಿಸಮಾನ ವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ವೇತನ ಮತ್ತು ಸೌಲಭ್ಯ, ಸೇವಾ ಸೌಲಭ್ಯಗಳಲ್ಲಿ ವ್ಯತ್ಯಾಸವಿದೆ. ಜತೆಯಲ್ಲಿದ್ದುಕೊಂಡೇ ಅವರಷ್ಟೇ ಸೇವೆ ನೀಡಿದರೂ, ಹೇಳಿಕೊಳ್ಳುವುದಕ್ಕೆ ವೈದ್ಯರು ಆದರೆ, ಅದೇ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರರಿಗೆ ಇರು ವಷ್ಟು ವೇತನ ಪಡೆದು ಬದುಕಬೇಕಾದ ಸ್ಥಿತಿ ಆಯುಷ್ಯ ವೈದ್ಯರದ್ದಾಗಿದೆ.
ಕಾರ್ಮಿಕ ಇಲಾಖೆ ಅಧಿಸೂಚನೆಯಂತೆ ಆಯುಷ್ ವೈದ್ಯರಿಗೆ ಕನಿಷ್ಠ 40 ಸಾವಿರ ರೂ. ವೇತನ ನೀಡಬೇಕೆಂದು 2017ರಲ್ಲಿಯೇ ಸೂಚಿಸಿ ದ್ದರೂ ಇದುವರೆಗೂ ಅದು ಅನುಷ್ಠಾನಗೊಂಡಿಲ್ಲ. ರಾಜ್ಯ ಸರ್ಕಾರ 2020ರಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆಯುಷ್ ವೈದ್ಯರ ವೇತನ ಮಾಸಿಕ 40 ಸಾವಿರ ರೂ.ಗಳಿಗೆ ಹೆಚ್ಚಿಸಲಿದ್ದು, ಅದಕ್ಕೆ ವಾರ್ಷಿಕ 16 ಕೋಟಿ ರೂ. ವ್ಯಯವಾಗಲಿದೆ ಎಂದು ತಿಳಿಸಿದೆ. ಅಷ್ಟೇ ಅಲ್ಲ, ಇದೇ ವರ್ಷ ಮಾರ್ಚ್‌ನಲ್ಲಿ ನಡೆದ ಅಧಿವೇಶನದಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ನರ್ಸಿಂಗ್ ಹೋಂಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಆಧಾರಿತ ಆಯುಷ್ ವೈದ್ಯರಿಗೆ ಮಾಸಿಕ 40 ಸಾವಿರ ರೂ.ವೇತನ ನಿಗದಿಪಡಿಸಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿಕೆ ನೀಡಿದ್ದರೂ ಈ ದಿನದವರೆಗೂ ಆಯುಷ್ ವೈದ್ಯರು ಪಡೆಯುತ್ತಿರುವ ಮಾಸಿಕ 23 ಸಾವಿರ ರೂ. ವೇತನದಲ್ಲಿ ಒಂದು ರೂಪಾಯಿಯೂ ಹೆಚ್ಚಳವಾಗಿಲ್ಲ.
2008ರಿಂದಲೇ ಸೇವೆ ಸಲ್ಲಿಸುತ್ತಿರುವ ಸುಮಾರು 686 ಆಯುಷ್ ವೈದ್ಯರಿಗೆ ಇಂದಿಗೂ ಸೇವಾಭದ್ರತೆಯ ಯಾವ ಭರವಸೆಯೂ ಇಲ್ಲ.
ಎನ್‌ಎಚ್‌ಎಂ ಯೋಜನೆಯಡಿಯಲ್ಲಿಯೇ ನೇಮಕಗೊಂಡು ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ನೆರೆಯ ಗೋವಾ, ಆಂಧ್ರಪ್ರದೇಶ, ಮಧ್ಯಪ್ರದೇಶ ಇನ್ನಿತರೆ ಕಡೆಗಳಲ್ಲಿ 50-80 ಸಾವಿರ ರೂ.ಗಳವರೆಗೆ ವೇತನ ನೀಡಲಾಗುತ್ತದೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಮಾಸಿಕ 23 ಸಾವಿರ ರೂ. ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಕರ್ನಾಟಕ ಆಯುಷ್ ವೈದ್ಯಾಧಿಕಾರಿಗಳ ಸಂಘದ ಡಾ|ಸುರೇ ಶಾಚಾರ್ಯ ಹಾಗೂ ಡಾ| ಮಹಾವೀರ ಹಾವೇರಿ ಅವರ ಪಶ್ನೆಯಾಗಿದೆ.
ವೈದ್ಯರು ಇಲ್ಲದ ಸಂದರ್ಭದಲ್ಲಿ ಸರ್ಕಾರ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಗುತ್ತಿಗೆಯಡಿ ನೇಮಿಸಿಕೊಂಡು ಕಳೆದ 15 ವರ್ಷಗಳಿಂದ ಸೇವೆ ಪಡೆದಿದೆ. ಆಡಳಿತಾತ್ಮಕ ವಿಷಯಗಳನ್ನು ಹೊರತು ಪಡಿಸಿ ಉಳಿದೆಲ್ಲ ಸೇವೆಗಳನ್ನು ಸಮಾನವಾಗಿ ನೀಡಿದ್ದೇವೆ. ಕೋವಿಡ್ ಸಂದರ್ಭದಲ್ಲೂ ಸೇವೆ ಸಲ್ಲಿಸಿದ್ದು, ಸೇವಾ ಭದ್ರತೆಯೂ ಇಲ್ಲ, ಸಮರ್ಪಕ ವೇತನವೂ ಇಲ್ಲವೆಂದರೆ ಹೇಗೆ. ಮಾಸಿಕ ವೇತನವನ್ನು 23 ಸಾವಿರ ರೂ.ನಿಂದ 60 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ●ಡಾ|ಸಿ.ದೇವಿಪ್ರಸಾದ, ಅಧ್ಯಕ್ಷರು, ಕರ್ನಾಟಕ ಆಯುಷ್ ವೈದ್ಯಾಧಿಕಾರಿಗಳ ಸಂಘ
-ಅಮರೇಗೌಡ ಗೋನವಾರ