Advertisement

ವರ್ಷದ ‘ತಿಥಿ’ಗೂ ಕೈ ಸೇರದ ಅಂತ್ಯಸಂಸ್ಕಾರ ಸಹಾಯಧನ

02:05 AM Aug 03, 2020 | Hari Prasad |

ಕುಂದಾಪುರ: ಬಡವರು ಮೃತಪಟ್ಟಾಗ ಸರಕಾರದಿಂದ ಅಂತ್ಯಸಂಸ್ಕಾರ ನಡೆಸಲು ಸಹಾಯಧನ ಒದಗಿಸುವ ಯೋಜನೆ ರಾಜ್ಯದಲ್ಲಿದೆ.

Advertisement

ಆದರೆ ಅನುದಾನ ಬಿಡುಗಡೆಗೆ ಸರಕಾರ ನಿರ್ಲಕ್ಷ್ಯ ತೋರುತ್ತಿದ್ದು, ಮೃತರ ವರ್ಷದ ತಿಥಿ ಬಂದರೂ ಈ ಹಣ ಕುಟುಂಬಿಕರ ಕೈಸೇರದ ಪರಿಸ್ಥಿತಿ ಸದ್ಯದ್ದು.

ಆಪ್ತರನ್ನು ಕಳೆದುಕೊಂಡ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ನಿಗದಿತ ಸಮಯದಲ್ಲಿ ಅರ್ಜಿ ಸಲ್ಲಿಸಿ, ತಿಂಗಳುಗಟ್ಟಲೆ ಕಾದರೂ ಸಹಾಯಧನ ಸಿಗುತ್ತಿಲ್ಲ.

ಮೃತರ ಅಂತ್ಯಸಂಸ್ಕಾರ ನಡೆಸುವುದಕ್ಕೂ ಆರ್ಥಿಕ ತತ್ವಾರವಿರುವ ಬಡ ಕುಟುಂಬಗಳಿಗೆ ಸಕಾಲದಲ್ಲಿ ಅನುಕೂಲವಾಗಲೆಂದು ರೂಪಿಸಿರುವ ಯೋಜನೆ ಇದು. ಆದರೆ ಇದರಡಿ ಸಹಾಯಧನ ಹಂಚಿಕೆ ಪ್ರಕ್ರಿಯೆ ವಿಳಂಬವಾಗಿರುವ ಸಾಕಷ್ಟು ಪ್ರಕರಣಗಳಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿಯೇ 8,096 ಕುಟುಂಬಗಳಿಗೆ ಇನ್ನೂ ಈ ಹಣ ಸಿಕ್ಕಿಲ್ಲ.

ನಾಲ್ಕು ವರ್ಷಗಳಿಂದ ಬಾಕಿ
ಉಡುಪಿ, ದಕ್ಷಿಣ ಕನ್ನಡ ಮಾತ್ರವಲ್ಲ, ಇಡೀ ರಾಜ್ಯದಲ್ಲಿಯೇ ಈ ಸಮಸ್ಯೆ ಇದೆ. ವಿವಿಧ ಜಿಲ್ಲೆಗಳಲ್ಲಿ ಗಿರಿಜನ ಯೋಜನೆಯಡಿ 2016ರಿಂದ, ವಿಶೇಷ ಘಟಕದಡಿ 2017ರಿಂದ ಫಲಾನುಭವಿ ಕುಟುಂಬಗಳಿಗೆ ಸಹಾಯಧನ ಸಿಗಲು ಬಾಕಿ ಇದೆ. ಇತರ ವರ್ಗದವರಿಗೆ ಒಂದು ವರ್ಷದಿಂದ ಈ ಅನುದಾನ ಸಿಕ್ಕಿಲ್ಲ. ಕಳೆದ ಮಾರ್ಚ್‌ನಲ್ಲಿ ಒಂದು ಕಂತು ಬಿಡುಗಡೆಯಾಗಿದ್ದರಿಂದ ಕೆಲವರಿಗೆ ಲಭಿಸಿದೆ.

Advertisement


ಏನಿದು ಯೋಜನೆ?

ಬಡತನ ರೇಖೆಗಿಂತ ಕೆಳಗಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ಸದಸ್ಯರು ಸಾವನ್ನಪ್ಪಿದರೆ ಶವಸಂಸ್ಕಾರಕ್ಕಾಗಿ ಸರಕಾರ ಹಣ ನೀಡುವ ಯೋಜನೆ ಇದು. ಆರಂಭದಲ್ಲಿ 1 ಸಾವಿರ ನೀಡುತ್ತಿದ್ದರೆ, 2015ರಿಂದ 5 ಸಾ. ರೂ. ನೀಡಲಾಗುತ್ತಿದೆ. ಹಿಂದೆ ಮೃತಪಟ್ಟ ಒಂದು ತಿಂಗಳೊಳಗೆ ಅರ್ಜಿ ಸಲ್ಲಿಸಬೇಕಿದ್ದರೆ, ಈಗ 2 ತಿಂಗಳಿಗೆ ವಿಸ್ತರಿಸಲಾಗಿದೆ. ಅರ್ಜಿಯ ಬಗ್ಗೆ ಖಚಿತಪಡಿಸಿಕೊಂಡು ತಹಶೀಲ್ದಾರ್‌ ಹಣ ಬಿಡುಗಡೆ ಮಾಡುತ್ತಾರೆ.

ಬಾಕಿ: ಬಂಟ್ವಾಳ ಗರಿಷ್ಠ
ಯೋಜನೆಯಡಿ ಉಡುಪಿಯ ಕುಂದಾಪುರ ತಾಲೂಕಿನಲ್ಲಿ ಗರಿಷ್ಠ 1,220 ಕುಟುಂಬಗಳಿಗೆ 61 ಲಕ್ಷ ರೂ. ಸಹಾಯಧನ ಬಿಡುಗಡೆಗೆ ಬಾಕಿ ಇದೆ. ಉಡುಪಿ ತಾಲೂಕಿನಲ್ಲಿ 460 ಕುಟುಂಬಗಳು, ಕಾರ್ಕಳ ಮತ್ತು ಹೆಬ್ರಿಯಲ್ಲಿ 283, ಕಾಪುವಿನಲ್ಲಿ 170, ಬ್ರಹ್ಮಾವರದಲ್ಲಿ 154 ಹಾಗೂ ಬೈಂದೂರು ತಾಲೂಕಿನ 150 ಕುಟುಂಬಗಳಿಗೆ ಸಿಗಬೇಕಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಗರಿಷ್ಠ 1,518 ಕುಟುಂಬಗಳಿಗೆ ಸಹಾಯಧನ ಸಿಗಲು ಬಾಕಿಯಿದೆ. ಬೆಳ್ತಂಗಡಿ ತಾಲೂಕಿನ 1,247 ಕುಟುಂಬಗಳು, ಮಂಗಳೂರಿನ 1,122, ಪುತ್ತೂರಿನ 601, ಮೂಡುಬಿದಿರೆಯ 430, ಕಡಬದ 428, ಸುಳ್ಯದ 313 ಕುಟುಂಬಗಳಿಗೆ ಸಹಾಯಧನ ಸಿಗಲು ಬಾಕಿಯಿದೆ.

‘ಅಂತ್ಯಸಂಸ್ಕಾರ ಸಹಾಯನಿಧಿ’ ಇರುವುದೇ ಆರ್ಥಿಕವಾಗಿ ಕಷ್ಟದಲ್ಲಿರುವ ಸಂತ್ರಸ್ತ ಕುಟುಂಬಗಳಿಗೆ ಸಹಾಯವಾಗಲು. ಈ ಹಣ ಹಂಚಿಕೆಯಲ್ಲಿ ಇಷ್ಟು ವಿಳಂಬ ಸರಿಯಲ್ಲ. ಈ ಬಗ್ಗೆ ಆದಷ್ಟು ಶೀಘ್ರ ಪರಿಶೀಲಿಸಿ, ಆದ್ಯತೆಯ ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುವುದು.
– ಡಾ| ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ

‘ಅಂತ್ಯಸಂಸ್ಕಾರ ಸಹಾಯನಿಧಿ’ಯಡಿ ಉಡುಪಿ ಜಿಲ್ಲೆಯಲ್ಲಿ ಬಾಕಿ ಇರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು, ತ್ವರಿತಗತಿಯಲ್ಲಿ ಅನುದಾನ ಹಂಚಿಕೆಗೆ ಪ್ರಯತ್ನಿಸಲಾಗುವುದು.
– ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next