Advertisement

ಕೋವಿಡ್-19 ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ: ಡಿ.ಕೆ.ಶಿವಕುಮಾರ್‌

08:36 AM May 12, 2020 | Sriram |

ಬೆಂಗಳೂರು:ಕೋವಿಡ್-19 ಪರಿಸ್ಥಿತಿ ನಿರ್ವಹಣೆ ವಿಚಾರದಲ್ಲಿ ಕರ್ನಾಟಕ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಆರೋಪಿಸಿದ್ದಾರೆ.

Advertisement

ಸೋಮವಾರ ನೈರುತ್ಯ ರೈಲ್ವೇ ವಿಭಾಗೀಯ ವ್ಯವಸ್ಥಾಪಕ ಅಶೋಕ್‌ ವರ್ಮಾ ಅವರನ್ನು ಭೇಟಿ ಮಾಡಿ, ಕರ್ನಾಟಕಕ್ಕೆ ವಾಪಸ್‌ ಮರಳಲು ಇಚ್ಚಿಸುವವರಿಗೆ ರೈಲು ಸೇವೆ ಕಲ್ಪಿಸಲು ಟಿಕೆಟ್‌ ದರವನ್ನು ಕಾಂಗ್ರೆಸ್‌ ಪಕ್ಷ ಭರಿಸಲಿದೆ ಎಂದು ಮನವಿ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಮಸ್ಯೆ ಆರಂಭವಾದ ಒಂದೂವರೇ ತಿಂಗಳ ಹಿಂದೆಯೇ ಕೇರಳ ಸರ್ಕಾರ 20 ಸಾವಿರ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್‌ ಪ್ರಕಟಿಸಿತು. ಈ ವಿಚಾರವಾಗಿ ವಿಶೇಷ ಅಧಿವೇಶನ ಕರೆದು ಎಲ್ಲ ವರ್ಗದ ಜನರಿಗೆ, ಉದ್ಯೋಗಿಗಳಿಂದ ಹಿಡಿದು, ಉದ್ಯೋಗದಾತರು, ಅಸಂಘಟಿತ ಕಾರ್ಮಿಕರು, ರೈತರು, ಕೈಗಾರಿಕೆಗಳು ಎಲ್ಲರ ಹಿತ ಕಾಯಲು ನೆರವಾಗುವಂತೆ 50 ಸಾವಿರ ಕೋಟಿ ವಿಶೇಷ ಪ್ಯಾಕೇಜ್‌ ನ್ನು ಬಜೆಟ್‌ ನಲ್ಲಿ ಪ್ರಕಟಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ. ಸರ್ಕಾರದ ಬಳಿ ದುಡ್ಡಿದೆ. ಬಜೆಟ್‌ ಪುನರ್‌ ಪರಿಶೀಲಿಸಿ ಅನುದಾನವನ್ನು ನೀಡಲು ಹೆಚ್ಚು ಸಮಸ್ಯೆ ಇಲ್ಲ. ಆಡಳಿತ ಪಕ್ಷದ ನಾಯಕರು ತಮ್ಮ ಜೇಬಿನಿಂದ ದುಡ್ಡು ಹಾಕುವ ಅಗತ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ಯಾವ ವರ್ಗಕ್ಕೆ ಎಷ್ಟು ಕೊಡಬೇಕು ಎಂಬುದನಷ್ಟೇ ತೀರ್ಮಾನಿಸಬೇಕಿದೆ ಎಂದರು.

ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿರುವ 1.70 ಲಕ್ಷ ಕೋಟಿ ಪ್ಯಾಕೇಜ್‌ ಇವತ್ತಿನವರೆಗೂ ಯಾರಿಗೆ ತಲುಪಿದೆ ಎಂಬುದು ಸರಿಯಾಗಿ ತಿಳಿದಿಲ್ಲ. ಕೆಲವರ ಖಾತೆಗೆ 2 ಸಾವಿರ ಹಾಕಲಾಗಿದೆ ಎಂಬುದು ಬಿಟ್ಟರೆ ಬೇರೆ ಏನೂ ಆಗಿಲ್ಲ. ಕೇಂದ್ರ ಸರ್ಕಾರ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ನೀಡಿ, ಯಾರು ಹೊರಗಡೆಯಿಂದ ಬಂದಿದ್ದಾರೋ ಅವರಿಗೆ ಸರಿಯಾಗಿ ಆಹಾರ ಕಿಟ್‌, ಹಣ ನೀಡಿದ್ದರೆ, ಅವರೇಕೆ ಲಕ್ಷಾಂತರ ಸಂಖ್ಯೆಯಲ್ಲಿ ವಾಪಸ್‌ ಹೋಗುತ್ತಿದ್ದರು? ಅವರನ್ನು ಸರಿಯಾಗಿ ನೋಡಿಕೊಳ್ಳದೇ, ಆಹಾರ ಕಿಟ್‌ ಗಳನ್ನು ತಮ್ಮ ಕಾರ್ಯಕರ್ತರಿಗೆ ಹಂಚಿದ ಪರಿಣಾಮ ಇಂದು ಈ ಸ್ಥಿತಿ ನಿರ್ಮಾಣವಾಗಿದೆ. ಈ ಸರ್ಕಾರ ಕೋವಿಡ್‌ ವಿಚಾರದಲ್ಲೂ ರಾಜಕಾರಣ ಮಾಡಿದೆಯೇ ಹೊರತು, ನಿಜವಾದ ಶ್ರಮಿಕರ ನೆರವಿಗೆ ಧಾವಿಸಲಿಲ್ಲ ಎಂದು ಆರೋಪಿಸಿದರು.

ಕಾರ್ಮಿಕರಿಗೆ ಅಳಿಲು ಸೇವೆ:
ನಾಳೆಯಿಂದ ರೈಲು ಸೇವೆ ಆರಂಭವಾಗುತ್ತಿದ್ದು, ರಾಜ್ಯದಿಂದಲೂ ಒಂದು ರೈಲು ದೆಹಲಿಗೆ ಹೋಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂಪಾಯಿ ಠೇವಣಿ ಮಾಡಿದ್ದು, ನಮ್ಮ ದೇಶವನ್ನು ಕಟ್ಟುತ್ತಿರುವ ಕಾರ್ಮಿಕರು, ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ವಾಪಸ್‌ ಕರೆತರಲು ಕಾಂಗ್ರೆಸ್‌ ಕೂಡ ಅಳಿಲು ಸೇವೆ ಮಾಡಲು ನಿರ್ಧರಿಸಿದೆ. ಹೀಗಾಗಿ ನೈರುತ್ಯ ರೈಲ್ವೇ ವಿಭಾಗೀಯ ವ್ಯವಸ್ಥಾಪಕ ಅಶೋಕ್‌ ವರ್ಮಾ ಅವರನ್ನು ಭೇಟಿ ಮಾಡಿ ವಾಪಸ್‌ ಊರಿಗೆ ಹೋಗಲು ಹಾಗೂ ಹೊರ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್‌ ಕರೆತರಲು ಅಗತ್ಯ ರೈಲು ಸೇವೆ ನೀಡಿ. ಅದಕ್ಕೆ ತಗಲುವ ವೆಚ್ಚವನ್ನು ಕಾಂಗ್ರೆಸ್‌ ಭರಿಸಲಿದೆ ಎಂದು ಮನವಿ ಮಾಡಲಾಗಿದೆ. ಇದಕ್ಕೆ ಅಧಿಕಾರಿಗಳು ಸ್ಪಂದಿಸಿದ್ದು, ಮೇಲಾಧಿಕಾರಿಗಳ ಜತೆ ಚರ್ಚಿಸಿ ಮಾಹಿತಿ ನೀಡಲಾಗುವುದು ಎಂದಿದ್ದಾರೆ. ಅವರು ಹೇಳಿದಾಗ ಪಕ್ಷದಿಂದಲೇ ಹಣ ಕಟ್ಟಲಾಗುತ್ತದೆ.

Advertisement

ರಾಜ್ಯಕ್ಕೆ ಆಗಮಿಸಲು ಅರ್ಜಿ ಹಾಕಿರುವವರ ಮಾಹಿತಿ ನಮ್ಮ ಬಳಿ ಇದೆ. ಕೆಲವರಿಗೆ ಮಾತ್ರ ಸರ್ಕಾರ ಅನುಮತಿ ನೀಡಿದೆ. ಈ ವಿಚಾರದಲ್ಲಿ ಸರ್ಕಾರ ಜನರಲ್ಲಿ ಆತಂಕ ಮೂಡಿಸಬಾರದು. ಹೊರ ರಾಜ್ಯಗಳಲ್ಲಿ ಇರುವವರು ಇಲ್ಲಿಗೆ ಬಂದು ತಮ್ಮ ಕುಟುಂಬವನ್ನು ಭೇಟಿ ಮಾಡಿ ಮತ್ತೆ ವಾಪಸ್‌ ಹೋಗುತ್ತಾರೆ. ಅದೇ ರೀತಿ, ಇಲ್ಲಿಂದ ತಮ್ಮ ಊರಿಗೆ ಹೋದವರು ಕೆಲ ದಿನಗಳ ನಂತರ ವಾಪಸ್‌ ಬರುತ್ತಾರೆ. ಇಲ್ಲಿ ಅವರು ಉದ್ಯೋಗ, ವ್ಯವಹಾರ, ಮನೆ, ಬದುಕು ಎಲ್ಲವನ್ನು ಕಟ್ಟಿಕೊಂಡಿದ್ದಾರೆ. ಆದರೂ ಆತಂಕದಿಂದ ತಮ್ಮ ಊರಿಗೆ ಹೋಗಲು ಮನಸ್ಸು ಮಾಡಿದ್ದಾರೆ. ಅವರ ಇಚ್ಛೆಗೆ ಸ್ಪಂದಿಸಿ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು.

ಈ ವೇಳೆ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಷಿ ಜಿ.ಎ ಬಾವಾ, ಸಂಸದ ಡಿಕೆ ಸುರೇಶ್‌, ರಾಜ್ಯಸಭೆ ಸದಸ್ಯ ಎಲ್‌.ಹನುಮಂತಯ್ಯ, ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌ ಸುದರ್ಷನ್‌, ಮಾಜಿ ಸಂಸದ ವಿ.ಎಸ್‌ ಉಗ್ರಪ್ಪ ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next