Advertisement

Siddaramaiah ನಾಯಕತ್ವದಲ್ಲಿ ರಾಜ್ಯ ಸರ್ಕಾರ ಸ್ಥಿರವಾಗಿದೆ: ಆರ್‌.ವಿ. ದೇಶಪಾಂಡೆ

08:34 PM Oct 29, 2023 | Team Udayavani |

ಕಾರವಾರ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸ್ಥಿರವಾಗಿದೆ. ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಸರ್ಕಾರ ಚೆನ್ನಾಗಿಯೇ ನಡೆಯುತ್ತಿದ್ದು, ಯಾವ ಶಾಸಕರಿಗೂ ಅಸಮಾಧಾನವಿಲ್ಲ ಎಂದು ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

Advertisement

ಗೃಹ ಸಚಿವ ಪರಮೇಶ್ವರ್‌ ನೇತೃತ್ವದಲ್ಲಿ ಕೆಲ ಶಾಸಕರು ಸಭೆ ನಡೆಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ಇದರ ಅರ್ಥ ಸಿಎಂ, ಡಿಸಿಎಂ ಬದಲಾವಣೆ ಮಾಡುತ್ತಾರೆ ಎಂದಲ್ಲ. ಗೃಹ ಸಚಿವರು ಸಭೆ ನಡೆಸಿ ಸರ್ಕಾರ ಮತ್ತು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯ ಸಲಹೆಗಳನ್ನು ಕೊಡಬಹುದು ಎಂದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಯಲ್ಲಿ ನಾಲ್ಕನ್ನು ಜಾರಿಗೆ ತಂದಿದ್ದೇವೆ. ಬಿಜೆಪಿ ಸರ್ಕಾರ ಹೋದ ನಂತರ ಸರ್ಕಾರದಲ್ಲಿ ಹಣಕಾಸಿನ ಪರಿಸ್ಥಿತಿ ಸರಿ ಇರಲಿಲ್ಲ. ನಾವು ಗ್ಯಾರಂಟಿ ಕೊಟ್ಟ ನಂತರ ಸಾಕಷ್ಟು ಹಣ ನೀಡಬೇಕು. ಈ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಇರುತ್ತದೆ. ಈ ಬಗ್ಗೆ ಚರ್ಚೆ ಸಹ ಸಿಎಂ ಜೊತೆ ಮಾಡಿದ್ದೇವೆ.

ನವೆಂಬರ್‌, ಡಿಸೆಂಬರ್‌ ಒಳಗಾಗಿ ಪ್ರತಿ ಕ್ಷೇತ್ರದಲ್ಲಿ ಅಭಿವೃದ್ಧಿ ಚಟುವಟಿಕೆಗಾಗಿ ಹಣವನ್ನು ಸಿಎಂ ಕೊಡಲಿದ್ದಾರೆ. ಸರ್ಕಾರ ಬಲ ಪಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ. ನಾವೆಲ್ಲ ಒಟ್ಟಾಗಿ ಇದ್ದೇವೆ ಎಂದರು.

ಆಪರೇಷನ್‌ ಕಮಲದ ಮಾಹಿತಿ ಇಲ್ಲ: ಆಪರೇಷನ್‌ ಕಮಲ ರಾಜ್ಯದಲ್ಲಿ ಮತ್ತೆ ಪ್ರಾರಂಭ ಮಾಡಿದ್ದಾರೆ ಎನ್ನುವ ಬಗ್ಗೆ ತನಗೆ ಯಾವ ಮಾಹಿತಿಯೂ ಇಲ್ಲ ಎಂದು ದೇಶಪಾಂಡೆ ಹೇಳಿದರು.

Advertisement

ಆಪರೇಷನ್‌ ಕಮಲದ ಬಗ್ಗೆ ಯಾವ ಶಾಸಕರು ನನ್ನ ಬಳಿ ಹೇಳಿಲ್ಲ. ಬಿಜೆಪಿ ಅವರ ಬಳಿ ಮೆಜಾರಿಟಿ ಇಲ್ಲ. ಅವರ ಬಳಿ ಏನು ಮೆಜಾರಿಟಿ ಇದೆ ಎಂದು ಸರ್ಕಾರ ಮಾಡಲು ಹೋಗುತ್ತಾರೆ. ನಮ್ಮ ಶಾಸಕರನ್ನು ಟಚ್‌ ಮಾಡಲು ಸಾಧ್ಯವಿದೆಯೇ? ಯಾವ ಕಾರಣಕ್ಕೂ ಸರ್ಕಾರವನ್ನ ಬೀಳಿಸಲು ಸಾಧ್ಯವಿಲ್ಲ ಎಂದು ದೇಶಪಾಂಡೆ ಹೇಳಿದ್ದಾರೆ.

ಮಂತ್ರಿ ಸಿಕ್ಕಿಲ್ಲ ಎನ್ನುವುದು ಬೇಸರವಿಲ್ಲ: ಸರ್ಕಾರ ರಚನೆಯಾದ ನಂತರ ಮಂತ್ರಿ ಮಂಡಲ ಆಯ್ಕೆ ಮಾಡುವುದು ಪಕ್ಷಕ್ಕೆ ಬಿಟ್ಟ ವಿಚಾರ. ನನಗೆ ಮಂತ್ರಿ ಸಿಕ್ಕಿಲ್ಲ ಎನ್ನುವುದು ಬೇಸರವಿಲ್ಲ ಎಂದು ದೇಶಪಾಂಡೆ ಹೇಳಿದರು.
ನಾನು ಮಂತ್ರಿಯಾಗಬೇಕು ಎನ್ನುವುದು ಜನರ ಬಯಕೆ ಇದೆ ಎನ್ನುತ್ತಾರೆ. ಆದರೆ ಅದು ಬೇರೆ ವಿಚಾರ. ರಾಜಕೀಯ ಪಕ್ಷವಾಗಿ ಒಂದು ಮಂತ್ರಿ ಮಂಡಲ ರಚನೆ ಮಾಡುವಾಗ ಹಲವಾರು ಕಾರಣದಿಂದ ಮಂತ್ರಿ ಆಯ್ಕೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಈ ಬಾರಿ ನನಗೆ ಅವಕಾಶ ಸಿಕ್ಕಿಲ್ಲ. ಆದರೆ ಜಿಲ್ಲೆಯಲ್ಲಿ, ರಾಜ್ಯದಲ್ಲಿ ಅಭಿವೃದ್ಧಿ ಆಗಬೇಕಾಗಿದೆ ಎಂದರು.

ಲೋಕಸಭಾ ಅಭ್ಯರ್ಥಿ ಕುರಿತು ಮಾತನಾಡಿದ ಅವರು, ಇಂದು ಎಚ್‌.ಕೆ. ಪಾಟೀಲ್‌ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಚರ್ಚೆ ನಡೆಯಲಿದೆ. ಯಾರನ್ನು ಆಯ್ಕೆ ಮಾಡಬೇಕು ಎಂದು ನಂತರ ನಿರ್ಧಾರ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next