Advertisement

State Government ಎಲ್ಲ ಡ್ಯಾಂಗಳ ಕ್ರಸ್ಟ್‌ ಗೇಟ್‌ಗಳ ಸ್ಥಿತಿಗತಿ ಪರಿಶೀಲಿಸಲಿ: ಎಚ್‌ಡಿಕೆ

08:38 PM Aug 11, 2024 | Team Udayavani |

ಮಂಡ್ಯ: ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಲಾಕ್‌ ತುಂಡಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಉಕ್ಕು, ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯ ಸರಕಾರ ಎಲ್ಲ ಜಲಾಶಯಗಳ ಕ್ರಸ್ಟ್‌ ಗೇಟ್‌ಗಳ ಸ್ಥಿತಿಗತಿಗಳನ್ನು ಪರಿಶೀಲಿಸಬೇಕು ಎಂದು ಹೇಳಿದರು.

Advertisement

ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಇದು ದೊಡ್ಡ ಅನಾಹುತ. 19ನೇ ಕ್ರಸ್ಟ್‌ ಗೇಟ್‌ ತೆರೆದುಕೊಂಡು ಭಾರೀ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಇದರಿಂದ ಜಲಾಶಯದ 60 ಟಿಎಂಸಿ ನೀರು ಖಾಲಿಯಾಗುತ್ತದೆ. ಉತ್ತಮ ಮಳೆಯಾಗಿ ಜಲಾಶಯ ತುಂಬಿತ್ತು. ಈ ನೀರನ್ನೇ ನಂಬಿಕೊಂಡಿದ್ದ ರೈತರಿಗೆ ತೊಂದರೆಯಾಗಿದೆ ಎಂದರು.

ನಾರಾಯಣಪುರ, ಆಲಮಟ್ಟಿ ಅಣೆಕಟ್ಟುಗಳಲ್ಲಿ ಸ್ಟಾಪ್‌ ಲಾಕ್‌ಗೇಟ್‌ ಅಳವಡಿಸಲಾಗಿದೆ. ತುಂಗಭದ್ರಾ ಅಣೆಕಟ್ಟೆಯಲ್ಲಿ ಸ್ಟಾಪ್‌ ಲಾಕ್‌ ಗೇಟ್‌ ಅಳವಡಿಸಿಲ್ಲ. ಅದಕ್ಕಾಗಿ ನೀರು ನಿಲ್ಲಿಸಲು ಸಾಧ್ಯವಾಗಿಲ್ಲ. ಇದು ರೈತರ ವಿಚಾರದಲ್ಲಿ ಚೆಲ್ಲಾಟವಾಡಿದ ಹಾಗೆಯೇ ಎಂದು ಕಿಡಿಕಾರಿದರು.

ಟಿಬಿ ಡ್ಯಾಂ ಬೋರ್ಡ್‌ ಟೆಕ್ನಿಕಲ್‌ ವಿಚಾರದಲ್ಲಿ ಕಾಟಾಚಾರದ ವರದಿ ಕೊಟ್ಟಿವೆ. ಅದಕ್ಕಾಗಿ ಇಂತಹ ಪರಿಸ್ಥಿತಿ ಬಂದಿದೆ. ಕೆಆರ್‌ಎಸ್‌ ಜಲಾಶಯ ವಿಚಾರದಲ್ಲಿ ಸರಕಾರ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಕೆಆರ್‌ಎಸ್‌ ಡ್ಯಾಂನಲ್ಲೂ ಸ್ಟಾಪ್‌ ಲಾಕ್‌ಗೇಟ್‌ ಇಲ್ಲ. ಆ ಅಣೆಕಟ್ಟು ಕಟ್ಟುವಾಗ ಸ್ಟಾಪ್‌ ಲಾಕ್‌ ಇಲ್ಲದ ಕಾರಣ, ಹಾಕಿರಲಿಲ್ಲ. ತುಂಗಭದ್ರಾ ಅಣೆಕಟ್ಟೆಯ ಪರಿಸ್ಥಿತಿ ಗಮನಿಸಿದರೆ ದೂರದೃಷ್ಟಿಯಿಂದ ಕೆಆರ್‌ಎಸ್‌ಗೆ ಸ್ಟಾಪ್‌ ಲಾಕ್‌ ಹಾಕಬೇಕು ಎಂದರು.

ಸಿಎಂ ಕುರ್ಚಿ ಅಲ್ಲಾಡಲ್ಲ. ಅದರ ಮೇಲೆ ಕುಳಿತಿರುವವರು ಅಲ್ಲಾಡ್ತಾರೆ
ವಿಧಾನಸೌಧದಲ್ಲಿರುವ ಸಿಎಂ ಕುರ್ಚಿ ಅಲ್ಲಾಡಲ್ಲ. ಅದರ ಮೇಲೆ ಕುಳಿತಿರುವವರು ಅಲ್ಲಾಡುತ್ತಾರೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ನಾವು ಪಾದಯಾತ್ರೆಯನ್ನು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮಾಡಿದ್ದೇವೆ. ಈ ಸರ್ಕಾರದ ಭ್ರಷ್ಟಾಚಾರ ತಿಳಿಸಲು ಪಾದಯಾತ್ರೆ ಮಾಡಿದ್ದೇವೆ. ಮುಂದೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಯಲಿದೆ. ಕರ್ನಾಟಕದ ಖಜಾನೆ ಸಂಪದ್ಬರಿತವಾದ ಖಜಾನೆಯಾಗಿದೆ.ಈ ಖಜಾನೆಯನ್ನು ಈ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಕಿಡಿಕಾರಿದರು.

ಅಭಿವೃದ್ಧಿ ಕೆಲಸಗಳನ್ನು ಸರ್ಕಾರ ಮಾಡುತ್ತಿಲ್ಲ. ರಾಜ್ಯದ ಅಧಿಕಾರದ ಕುರ್ಚಿ ಭದ್ರವಾಗಿಯೇ ಇರುತ್ತೆ. ಕೆಂಗಲ್‌ ಹನುಮಂತಯ್ಯ ಕಟ್ಟಿರುವ ವಿಧಾನಸೌಧ ಕುರ್ಚಿ ಗಟ್ಟಿಯಾಗಿದೆ. ಕುರ್ಚಿಯಲ್ಲಿ ಕೂರೋರು ಭದ್ರವಾಗಿ ಇರಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next