Advertisement

State Government ಎಸ್‌ಸಿ, ಎಸ್‌ಟಿ ಕಾಸು ಮತ್ತೆ ಗ್ಯಾರಂಟಿಗೆ!

01:09 AM Jul 06, 2024 | Team Udayavani |

ಬೆಂಗಳೂರು: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ.

Advertisement

ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ರಾಜ್ಯ ಅಭಿವೃದ್ಧಿ ಪರಿಷತ್‌ ಸಭೆಯಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಗೆ ನಿಗದಿ ಯಾಗಿದ್ದ ಹಣವನ್ನು ಗ್ಯಾರಂಟಿ ಯೋಜನೆ ಗಳಿಗೆ ವರ್ಗಾಯಿಸಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಸರಕಾರದ ಈ ನಡೆ ಮತ್ತೊಮ್ಮೆ ವಿಪಕ್ಷಗಳ ಟೀಕೆಗೆ ಆಹಾರವಾಗಿದೆ.

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಕಾರ್ಯಕ್ರಮಗಳಿಗಾಗಿ ಈ ವರ್ಷ 39,121.46 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಅನುಮತಿ ನೀಡಲಾಗಿದೆ. ಈ ಪೈಕಿ ಪರಿಶಿಷ್ಟ ಜಾತಿಗೆ 27,673.93 ಕೋಟಿ ರೂ., ಪರಿಶಿಷ್ಟ ಪಂಗಡಕ್ಕೆ 11,445.51 ಕೋಟಿ ರೂ. ಮೀಸಲಿಡ ಲಾಗಿದೆ. ಆದರೆ ಈ ಪೈಕಿ 14,730.53 ಕೋಟಿ ರೂ.ಗಳನ್ನು ಸರಕಾರದ 5 ಗ್ಯಾರಂಟಿ ಯೋಜನೆಗೆ ವರ್ಗಾಯಿಸಲಾಗಿದೆ.

ಇದರ ಜತೆಗೆ ಭಾಗ್ಯಲಕ್ಷ್ಮಿ ಯೋಜನೆಗೆ 70.29 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಒಟ್ಟು 14,800.82 ಕೋಟಿ ರೂ. ಹಣವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಶೇಷ ಉಪಯೋಜನೆಯಿಂದ ಅನ್ಯ ಕಾರ್ಯಕ್ಕೆ ಹಂಚಿಕೆ ಮಾಡಲಾಗಿದೆ.

ವಿವಾದ; ಸಿಎಂ ಸಮರ್ಥನೆ
ಡಿಸಿಎಂ ಡಿ.ಕೆ. ಶಿವಕುಮಾರ್‌, ಸಮಾಜ ಕಲ್ಯಾಣ ಸಚಿವ ಡಾ| ಎಚ್‌.ಸಿ. ಮಹದೇವಪ್ಪ, ಕಾನೂನು ಸಚಿವ ಎಚ್‌.ಕೆ. ಪಾಟೀಲ್‌, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ಶಾಸಕರು ಭಾಗಿಯಾಗಿದ್ದ ಸಭೆಯಲ್ಲೇ ಈ ನಿರ್ಧಾರ ತೆಗೆದುಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಆದರೆ ಸಿಎಂ ಸಿದ್ದರಾಮಯ್ಯ ಈ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ಹಣವನ್ನು ನಾವು ಅದೇ ವರ್ಗದ ಜನತೆಗೆ ನೀಡುತ್ತೇವೆ. ಇದಕ್ಕಾಗಿ ಕಳೆದ ಬಾರಿ ಕಾಯ್ದೆಯ 7 (ಸಿ) ಗೆ ತಿದ್ದುಪಡಿ ಮಾಡಲಾಗಿದೆ. 7 (ಡಿ)ಗೆ ತಿದ್ದುಪಡಿ ತರುವಂತೆಯೂ ಆಗ್ರಹ ವ್ಯಕ್ತವಾಗಿದೆ. ಕಳೆದ ಬಾರಿ ನಿಗದಿಯಾಗಿದ್ದ ಹಣದಲ್ಲಿ 90 ಕೋಟಿ ರೂ. ಉಳಿಕೆಯಾಗಿದ್ದು, ಏಕೆ ಖರ್ಚು ಮಾಡಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ ಎಂದರು.

Advertisement

ಗೃಹಲಕ್ಷ್ಮಿ ಯೋಜನೆಯಲ್ಲಿ 22.45 ಲಕ್ಷ ಪರಿಶಿಷ್ಟ ಜಾತಿ ಹಾಗೂ 8.66 ಲಕ್ಷ ಪರಿಶಿಷ್ಟ ಪಂಗಡದ ಫ‌ಲಾನುಭವಿಗಳಿಗೆ ತಲಾ 2,000 ರೂ.ಗಳಂತೆ ವಾರ್ಷಿಕ 24,000 ರೂ. ನೀಡಲು 7,881.91 ಕೋಟಿ ರೂ.ಗಳನ್ನು ಎಸ್‌ಸಿಎಸ್‌ಪಿ, ಟಿಎಸ್‌ಪಿಯಿಂದ ವರ್ಗಾಯಿಸಲಾಗುತ್ತಿದೆ. ಗೃಹ ಜ್ಯೋತಿಗೆ ಸಂಬಂಧಪಟ್ಟಂತೆ 2,585.93 ಕೋಟಿ ರೂ. ಹಣ ಬಳಕೆ ಮಾಡಲಾಗುತ್ತಿದೆ. ಸರಕಾರದ ಈ ನಿರ್ಧಾರವನ್ನು ಬಿಜೆಪಿ ಬಲವಾಗಿ ಖಂಡಿಸಿದೆ.

ವಿದ್ಯಾರ್ಥಿಗಳಿಗೆ ಬಂಪರ್‌ ಘೋಷಣೆ
-ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌
-ಹಾಸ್ಟೆಲ್‌ನಲ್ಲಿ ಹೈಟೆಕ್‌ ಲೈಬ್ರರಿ, ಎಲ್ಲ ರೀತಿಯ ಪುಸ್ತಕಗಳ ವ್ಯವಸ್ಥೆ
-ಇಂಥ ವಿದ್ಯಾರ್ಥಿಗಳಿಗೆ ತಿಂಗಳಿಗೆ 15 ಸಾವಿರ ರೂ. ಸಹಾಯಧನ
-ಪ. ಜಾತಿ, ಪಂಗಡದ ವಿದ್ಯಾರ್ಥಿ ಗಳಿಗೆ ಲ್ಯಾಪ್‌ಟಾಪ್‌: 300 ಕೋಟಿ ರೂ. ವೆಚ್ಚ ಸಾಧ್ಯತೆ
-ಪಿಜಿ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್‌ ಒದಗಿಸುವ ಬಗ್ಗೆ ಪರಿಶೀಲನೆ
-ಖಾಲಿ ಇರುವ ಹೋಬಳಿ ಗಳಲ್ಲೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಲು ಸೂಚನೆ

ಬಿಜೆಪಿ ಅಧಿಕಾರ ದಲ್ಲಿರುವ ಯಾವು ದಾದರೂ ಒಂದು ರಾಜ್ಯದಲ್ಲಿ ಇಂಥ ಯೋಜನೆ ಅನುಷ್ಠಾನ ಮಾಡಿದ್ದಾರೆಯೇ? ಇಂಥ ಯೋಜನೆ ಯಾವಾಗ ಜಾರಿಗೆ ತರುತ್ತೀರಿ ಎಂದು ಮೊದಲು ಪ್ರಧಾನಿ ನರೇಂದ್ರ ಮೋದಿ ಯವರನ್ನು ಪ್ರಶ್ನೆ ಮಾಡಿ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಸುಮಾರು 15 ಸಾವಿರ ಕೋಟಿ ರೂ.ಗಳಷ್ಟು ದಲಿತರ ಹಣವನ್ನು ಅನ್ಯ ಉದ್ದೇಶಕ್ಕೆ ವೆಚ್ಚ ಮಾಡುತ್ತಿ¨ªಾರೆ. ಗ್ಯಾರಂಟಿ ಹೆಸರಿನಲ್ಲಿ ತೆರಿಗೆ ಹೆಚ್ಚಳ ಮಾಡಿ ಸಾರ್ವಜನಿಕರ ಸುಲಿಗೆ ಮಾಡಿದವರು ಈಗ ದಲಿತರಿಗೆ ಮೀಸಲಿಟ್ಟ ಹಣವನ್ನೂ ಲೂಟಿ ಮಾಡಿದ್ದಾರೆ. ಗ್ಯಾರಂಟಿ ಸೋಗಿನಲ್ಲಿ ಇನ್ನೆಷ್ಟು ದಿನ ಈ ಬೃಹನ್ನಾಟಕ ಸ್ವಾಮಿ?
-ವಿ. ಸುನಿಲ್‌ ಕುಮಾರ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next