Advertisement

ಭ್ರಷ್ಟಾಚಾರದಲ್ಲಿ ರಾಜ್ಯ ಸರ್ಕಾರ ನಂ.1: ಡಿಕೆಶಿ

01:40 PM Aug 30, 2021 | Team Udayavani |

ಹುಬ್ಬಳ್ಳಿ: ಕೋವಿಡ್‌ ವೇಳೆ ನಡೆದ ಭ್ರಷ್ಟಾಚಾರ ರಾಷ್ಟ್ರದಲ್ಲೇ ರಾಜ್ಯ ಸರ್ಕಾರ ಮೊದಲ ಸ್ಥಾನದಲ್ಲಿದೆ. ಚಿಕಿತ್ಸೆ, ಔಷಧಿ, ಶವಸಂಸ್ಕಾರಕ್ಕೂ ಕ್ಯೂ ನಿಲ್ಲಿಸಿದರು. ಮೃತಪಟ್ಟವರಿಗೂ ಪರಿಹಾರ ನೀಡಲಿಲ್ಲ. ಕೇಂದ್ರ 20 ಲಕ್ಷ ಕೋಟಿ ರೂ. ಹಾಗೂ ರಾಜ್ಯ ಸರ್ಕಾರದ ವಿವಿಧ ಪರಿಹಾರ ನೀಡಲಿಲ್ಲ. ಸಂಕಷ್ಟದ ಸಂದರ್ಭದಲ್ಲಿ ಆಸ್ತಿ ತೆರಿಗೆ ಸೇರಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿ ಜನರನ್ನು ಕಿತ್ತು ತಿನ್ನುವ ಸರ್ಕಾರವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿಯಿದ್ದರೆ ಕೋವಿಡ್‌ನ‌ಂತಹ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ದರ, ತೆರಿಗೆ ಹೆಚ್ಚಳ ಮಾಡುತ್ತಿರಲಿಲ್ಲ.ಕೋವಿಡ್‌ ಸಂದರ್ಭದಲ್ಲಿ ಪ್ರತಿಯೊಂದು ಖರೀದಿಯಲ್ಲೂ ಭ್ರಷ್ಟಾಚಾರವಾಗಿದೆ. ಲಾಕ್‌ಡೌನ್‌ನಿಂದಾಗಿ ವಿವಿಧ ಸಮಾಜ, ಕಾರ್ಮಿಕರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಪರಿಹಾರ ಘೋಷಣೆ ಮಾಡಿತು. ಇದೊಂದು ಜನಪರ ಸರ್ಕಾರವಾಗಿದ್ದರೆ ಯಾವ ಸಮಾಜಕ್ಕೆ, ಯಾರಿಗೆ ಎಷ್ಟು ಪರಿಹಾರ ನೀಡಲಾಗಿದೆ ಎನ್ನುವ ಪಟ್ಟಿಯನ್ನು ಬಿಡುಗಡೆ ಮಾಡಲಿ. ಕೇವಲ ಭಾವನಾತ್ಮಕ ವಿಷಯಗಳ ಮೇಲೆ ಜನರನ್ನು ವಂಚಿಸುವಕೆಲಸ ಮಾಡುತ್ತಿದೆ ಎಂದರು.

ಬಿಎಸ್‌ವೈ ಕಣ್ಣೀರಿಗೆ ಕಾರಣವೇನು?: ರಾಜ್ಯದಲ್ಲಿ ಉತ್ತಮ ಆಡಳಿತವಿದ್ದರೆ ಎರಡೇ ವರ್ಷಕ್ಕೆ ಮುಖ್ಯಮಂತ್ರಿ ಬದಲಾವಣೆ ಮಾಡಿದ್ದು ಯಾವ ಕಾರಣಕ್ಕೆ? ಬಹಳ ಕಷ್ಟಪಟ್ಟು ಅವರಿವರಿಗೆ ಆಮಿಷವೊಡ್ಡಿ ಸರ್ಕಾರ ರಚಿಸಿದವರಿಂದ ಏಕೆ ರಾಜೀನಾಮೆ ಪಡೆಯಲಾಯಿತು. ರಾಜೀನಾಮೆ ನೀಡುವ ಮೊದಲು ಮುಖ್ಯಮಂತ್ರಿಗಳು ಬಹಿರಂಗವಾಗಿ ಗಳಗಳನೇ ಅತ್ತಿದ್ದು ಏಕೆ ಎನ್ನುವುದನ್ನು ಪಕ್ಷದ ನಾಯಕರು ಜನರಿಗೆ ತಿಳಿಸಬೇಕು. ಸಿಎಂ ಬದಲಾವಣೆ ಪಕ್ಷದ ಆಂತರಿಕ ವಿಚಾರವಾದರೂ ಕೋವಿಡ್‌ ಸಂದರ್ಭದಲ್ಲಿ ನಡೆದ ಭ್ರಷ್ಟಾಚಾರಕ್ಕೂ ರಾಜೀನಾಮೆ ಪಡೆದಿರುವುದಕ್ಕೂ ಏನಾದರೂ ಸಂಬಂಧವಿದೆಯಾ ಎಂದು ರಾಜ್ಯದ ಜನರು ಪ್ರಶ್ನಿಸುತ್ತಿದ್ದಾರೆ. ಕೇಂದ್ರ, ರಾಜ್ಯದಲ್ಲಿನ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಸುಳ್ಳು ಭರವಸೆಗಳಿಂದ ಜನರು ಎಚ್ಚೆತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next