ಬೆಂಗಳೂರು: ರಾಜ್ಯ ಸರ್ಕಾರ ಪಾಪರ್ ಆಗಿದ್ದು, ಆರ್ಥಿಕ ಸ್ಥಿತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ವೇತ ಪತ್ರ ಹೊರಡಿಸಲಿ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸುವ ಅಗತ್ಯವಿಲ್ಲ. ಮೂರು ತಿಂಗಳು ಅಧಿಕಾರಕ್ಕಾಗಿ ಬಜೆಟ್ ಮಂಡನೆ ಮಾಡಿದರೂ, ಅದು ಜಾರಿಗೆ ಬರುವುದಿಲ್ಲ. ಚುನಾವಣೆಗೆ ಭರವಸೆ ನೀಡುವ ಬಜೆಟ್ ಮಂಡಿಸುವುದು ಬೇಡ. ಮೊದಲು ರಾಜ್ಯ ಸರ್ಕಾರದ ಸಾಧನೆಯ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಆಗ್ರಹಿಸಿದ್ದಾರೆ.
ಮಹದಾಯಿ ವಿಷಯದಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾರಣ ಮಾಡುವುದನ್ನು ಬಿಡಲಿ. ಕಾಂಗ್ರೆಸ್ ಹಾಗೂ ಬಿಜೆಪಿ ಒಟ್ಟಾಗಿ ಪ್ರಯತ್ನ ಮಾಡಿದರೆ ಮಾತ್ರ ವಿವಾದ ಬಗೆ ಹರಿಯಲಿದೆ. ಸರ್ವ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾ ಕಾಂಗ್ರೆಸ್ ಮುಖಂಡರೊಂದಿಗೆ ಮಾತನಾಡುವುದಾಗಿ ಹೇಳಿದ್ದರು. ಆದರೆ, ಅವರೊಂದಿಗೆ ಮಾತುಕತೆ ನಡೆಸದೇ ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ.
ಕರ್ನಾಟಕಕ್ಕೆ ಮಹದಾಯಿ ನೀರು ಬಿಡುವುದಿಲ್ಲ ಎಂದು ಸೋನಿಯಾ ಗಾಂಧಿ ಕೂಡ ಹೇಳಿದ್ದರು. ಈ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಲು ಕಾಂಗ್ರೆಸ್ ಪಕ್ಷವೇ ಕಾರಣ. ಈಗ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಗೋವಾ ಕಾಂಗ್ರೆಸ್‌ನವರನ್ನು ಒಪ್ಪಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಲಿ. ಪ್ರಧಾನಿ ಮೋದಿಯನ್ನು ಟೀಕಿಸಲು ಮಹದಾಯಿ ವಿಷಯ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜ್ವಲಂತ ವಿವಾದಗಳನ್ನು ಜೀವಂತವಾಗಿಡಲು ಬಯಸುತ್ತಿದ್ದಾರೆ. ವೀರಶೈವ ಲಿಂಗಾಯತ ವಿವಾದ ಹುಟ್ಟು ಹಾಕಿದ್ದರು. ತಜ್ಞರ ಸಮಿತಿ ಆರು ತಿಂಗಳು ಸಮಯ ಕೇಳಿದ್ದರಿಂದ ವಿವಾದ ಸತ್ತು ಹೋಯಿತು. ಇಡೀ ದೇಶದಲ್ಲಿ ಬಿಜೆಪಿ ಮಣ್ಣು ಮುಕ್ಕಿಸಿದ ಬಿಜೆಪಿ ಕರ್ನಾಟಕದಲ್ಲಿ ಮಣ್ಣು ಮುಕ್ಕಿಸಲು ಬರುವುದಿಲ್ಲವೇ ? ಕರ್ನಾಟಕದಲ್ಲಿಯೂ ಕಾಂಗ್ರೆಸ್ ಮಣ್ಣು ಮುಕ್ಕಿಸುತ್ತೇವೆ ಎಂದು ಹೇಳಿದರು.