Advertisement
ಮಾನವ ಸಂಪನ್ಮೂಲ ಪೂರೈಸುವ ಸಂಸ್ಥೆಯವರು ಸಿಬಂದಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಪ್ರತಿ ತಿಂಗಳು ಸಕಾಲಕ್ಕೆ ವೇತನ ಪಾವತಿ ಮಾಡುತ್ತಿಲ್ಲ. ಸಿಬಂದಿಗೆ ನೀಡಬೇಕಾದ ತಮ್ಮ ಪಾಲಿನ ಪಿಎಫ್, ಇಎಸ್‌ಐ ವಂತಿಗೆಯನ್ನು ಸರಿಯಾಗಿ ತುಂಬುತ್ತಿಲ್ಲ. ಎಂಟು ತಾಸುಗಳಿಗಿಂತ ಹೆಚ್ಚು ಕೆಲಸ ಮಾಡಿದ್ದಕ್ಕೆ ಭತ್ತೆ ನೀಡುತ್ತಿಲ್ಲ ಮುಂತಾದ ದೂರುಗಳು ಹೊರಗುತ್ತಿಗೆ ಸಿಬಂದಿಯಿಂದ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.
Related Articles
ಸರಕಾರ ವಿವಿಧ ಕೆಲಸಗಳಿಗೆ ನಿಗದಿಪಡಿಸಿದ ಕನಿಷ್ಠ ವೇತನ ದರವನ್ನು ಗುತ್ತಿಗೆ ಸಂಸ್ಥೆ ನೀಡಬೇಕು. ಕಾರ್ಮಿಕರ ಕೆಲಸದ ಸ್ವರೂಪದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದಲ್ಲಿ ಈ ಕುರಿತು ಸ್ಪಷ್ಟ ನಿರ್ಣಯಕ್ಕೆ ಬರಲು ಆಯಾ ಇಲಾಖೆಗಳ ಹಂತದಲ್ಲಿ ಅಧಿಸೂಚನೆಯಲ್ಲಿ ನಮೂದಾಗಿರುವ ಕೆಲಸದ ಸ್ವರೂಪಗಳನ್ನು ಅಧ್ಯಯನ ಮಾಡಿ, ಆಯಾ ಸ್ವರೂಪದ ಕೆಲಸಗಳಿಗೆ ವೇತನ ಅನ್ವಯಿಸಿಕೊಳ್ಳಬೇಕು. ಗುತ್ತಿಗೆದಾರ ಸಂಸ್ಥೆ ಪ್ರತಿವರ್ಷ ಎಪ್ರಿಲ್‌ನಲ್ಲಿ ಏರಿಕೆಯಾಗುವ ವ್ಯತ್ಯಸ್ಥ ತುಟ್ಟಿಭತ್ತೆ ದರಗಳನ್ನು ಸೇರಿಸಿ ಪಾವತಿಸಬೇಕು. ವಿರಾಮವು ಒಳಗೊಂಡಂತೆ ದಿನಕ್ಕೆ ಎಂಟು ತಾಸುಗಳ ಕೆಲಸಕ್ಕೆ ಕನಿಷ್ಠ ವೇತನವಿದ್ದು, ಅದಕ್ಕಿಂತ ಹೆಚ್ಚಿನ ಕೆಲಸಕ್ಕಾಗಿ ಹೆಚ್ಚುವರಿ ಭತ್ತೆಯನ್ನು ಗಂಟೆ ಹೆಚ್ಚಾದಂತೆ ದ್ವಿಗುಣ ದರದಲ್ಲಿ ನೀಡಬೇಕು. ವೇತನ ಲೆಕ್ಕ ಹಾಕುವಾಗ ತಿಂಗಳಿನ ನಾಲ್ಕು ರಜಾ ದಿನಗಳನ್ನು ಪರಿಗಣಿಸಬೇಕು. ಪ್ರತಿ ತಿಂಗಳು 5ನೇ ತಾರೀಕಿನೊಳಗೆ ವೇತನವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಮುಂತಾದ ಷರತ್ತಿನೊಂದಿಗೆ ಗುತ್ತಿಗೆ ನೀಡಬೇಕೆಂದು ಸರಕಾರ ಆದೇಶಿಸಿದೆ.
Advertisement
ಸರಕಾರಿ ಇಲಾಖೆಗಳು, ಸಂಘ- ಸಂಸ್ಥೆಗಳು, ಸರಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳು ಮಾನವ ಸಂಪನ್ಮೂಲವನ್ನು ಹೊರಗುತ್ತಿಗೆ ಪಡೆಯುವಾಗ ಕಾರ್ಮಿಕ ಇಲಾಖೆ ಯನ್ವಯ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇವುಗಳನ್ನು ಪಾಲಿಸದೆ ಉಲ್ಲಂಘಿಸಿರುವುದು ಗಮನಕ್ಕೆ ಬಂದರೆ ಸರಕಾರವು ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಿದೆ.– ಸಂಧ್ಯಾ ನಾಯಕ್,
ಸರಕಾರದ ಉಪ ಕಾರ್ಯದರ್ಶಿ, ಕಾರ್ಮಿಕ ಇಲಾಖೆ -ಎಚ್.ಕೆ. ನಟರಾಜ