Advertisement

State Government ಶ್ವೇತಪತ್ರಕ್ಕಾಗಿ ಅಧಿವೇಶನದಲ್ಲಿ ಪಟ್ಟು: ವಿಪಕ್ಷ ನಾಯಕ ಆರ್​.ಅಶೋಕ್​​

08:59 PM Nov 27, 2023 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದ್ದು, ಹಣಕಾಸಿನ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವಂತೆ ಬೆಳಗಾವಿ ಅಧಿವೇಶನದಲ್ಲಿ ಪಟ್ಟು ಹಿಡಿಯುವುದಾಗಿ ಪ್ರತಿಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಅರೆಬರೆ ಜಾರಿಯಿಂದ ಬೊಕ್ಕಸ ಬರಿದಾಗಿದೆ. ಹೀಗಾಗಿ ಬರಗಾಲದಿಂದ ತತ್ತರಿಸುತ್ತಿರುವ ರೈತರಿಗೆ ಪರಿಹಾರ ನೀಡಲು ಸಾಧ್ಯವಾಗದೆ ಕೇಂದ್ರದತ್ತ ಬೊಟ್ಟು ತೋರಿಸುತ್ತಿದ್ದಾರೆ. ಇದು ಸಂವೇದನಾರಹಿತ ಎಡಬಿಡಂಗಿ ಸರ್ಕಾರ ಎಂದು ಹರಿಹಾಯ್ದರು.

ಪ್ರತಿಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಅನೇಕ ಜಿಲ್ಲೆಗಳಲ್ಲಿ ಬರಗಾಲದ ಬಗ್ಗೆ ಅಧ್ಯಯನ ಮಾಡುವ ಸಂದರ್ಭದಲ್ಲಿ ಸರ್ಕಾರದ ಬಣ್ಣ ಬಯಲಾಗುತ್ತಿದೆ. ಜನ ಸಂಕಷ್ಟದಲ್ಲಿದ್ದರೂ ತನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ ಎಂದರು.

ಲೆಕ್ಕಪತ್ರ ಮಂಡಿಸಲಿ: ಕೊಳವೆ ಬಾವಿ ಕೊರೆಸಲು, ಜಾನುವಾರುಗಳಿಗೆ ಮೇವು ಖರೀದಿಸಲು ಆದೇಶವನ್ನು ಹೊರಡಿಸಿಲ್ಲ. ಕನಿಷ್ಠ ಪಕ್ಷ ಕೊಳವೆ ಬಾವಿಗಳಿಗೆ ಆದ್ಯತೆ ಮೇರೆಗೆ ವಿದ್ಯುತ್‌ ಸಂಪರ್ಕ ಕೊಡುತ್ತಿಲ್ಲ. ಕೇಳಿದರೆ ಎಲ್ಲದಕ್ಕೂ ಲಂಚ ಕೊಡಬೇಕು, ಇಲ್ಲದಿದ್ದರೆ ಯಾವುದೇ ಕೆಲಸ ಆಗುತ್ತಿಲ್ಲ ಎಂದು ರೈತರು ದೂರು ನೀಡುತ್ತಿದ್ದಾರೆ ಎಂದರು. ಬರ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ ಎನ್ನುತ್ತಾರೆ, ಅದು ನಿಜವೇ ಆಗಿದ್ದಲ್ಲಿ ತಕ್ಷಣ ಹಣ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಇವರು ಮಾಡಿರುವ ಖರ್ಚು ವೆಚ್ಚ ಮತ್ತು ಹಣಕಾಸಿನ ಸ್ಥಿತಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದರು.

ದೀರ್ಘ‌ಕಾಲದ ನಿದ್ದೆಯಿಂದ ಎಚ್ಚೆತ್ತು ಜನಸ್ಪಂದನ
ಮುಖ್ಯಮಂತ್ರಿಯವರ ಜನತಾದರ್ಶನ ಕಾರ್ಯವನ್ನು ಬೋಗಸ್‌ ದರ್ಶನ ಎಂದು ಲೇವಡಿ ಮಾಡಿದ ಅಶೋಕ ಅವರು, ನೆಟ್ಟಗೆ ಕೆಲಸ ಮಾಡದ ಮಂತ್ರಿಗಳನ್ನು ಕರೆಯಿಸಿ ಮೊದಲು ಅವರ ದರ್ಶನ ಮಾಡಬೇಕಿತ್ತು. ಯಾರ್ಯಾರು ಏನು ಕೆಲಸ ಮಾಡಿದ್ದಾರೆ ಎಂದು ಮಾಹಿತಿ ಪಡೆಯಬೇಕಿತ್ತು. ಅದನ್ನು ಬಿಟ್ಟು ಕುರ್ಚಿ, ಮೇಜು ಹಾಕಿಸಿ ಮನವಿ ಪತ್ರ ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

Advertisement

ಸಿಎಂ ಸೇರಿದಂತೆ ಎಲ್ಲ ಸಚಿವರು ಜಿಲ್ಲಾ ಕೇಂದ್ರಗಳಲ್ಲಿ ಜನತಾದರ್ಶನ ಮಾಡಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಸಾವಿರಾರು ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತು. ಅದನ್ನು ಬಿಟ್ಟು ಸಿಎಂ ಅವರು ಸೀಮಿತ ಸಂಖ್ಯೆ ಜನರ ಅಹವಾಲು ಕೇಳಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next