ರಾಮದುರ್ಗ: ಬಡ ಹಾಗೂ ದೀನದಲಿತ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಂಕಣಬದ್ಧವಾಗಿದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿರುವ 824 ವಸತಿ ಶಾಲೆಗಳಲ್ಲಿನ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ತಾಲೂಕಿನ ಬಟುಕುರ್ಕಿ ಗ್ರಾಮದಲ್ಲಿ ಮಂಗಳವಾರ ನಡೆದ ಇಂದಿರಾ ಗಾಂಧಿ ವಸತಿ ಹಾಗೂ ಶಾಲಾ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು. ಇಂತಹ ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆ ಮೂಲಕ ಮಕ್ಕಳನ್ನು ಸೇರಿಸಿಕೊಳ್ಳಲಾಗುತ್ತಿದ್ದರು. ಸ್ಥಳೀಯವಾಗಿ ಶೇ.25 ಮಕ್ಕಳಿಗೆ ಪ್ರಾಧಾನ್ಯತೆ ನೀಡಲಾಗುವುದು ಎಂದರು.
ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಯಾವುದೇ ವ್ಯಕ್ತಿಗಳಿಗಾಗಲಿ ಅಧಿಕಾರ, ಐಶ್ವರ್ಯ, ಆಯುಷ್ಯ ಶಾಶ್ವತವಲ್ಲ. ಈಗಿರುವ ಬದುಕಿನ ಮಧ್ಯ ನಾವು ಮಾಡುವ ಕೆಲಸಗಳಿಗೆ ನಮ್ಮ ಹೆಸರು ಉಳಿಸಲು ಸಾಧ್ಯ. ಕಾರಣ ಉತ್ತರ ಕರ್ನಾಟಕ ಅಭಿವೃದ್ಧಿ ವಂಚಿತ ಎಂಬ ಪದವನ್ನು ತೆಗೆದು ಹಾಕುವ ನಿಟ್ಟಿನಲ್ಲಿ ಈಗಿರುವ ಎಲ್ಲ ಸಚಿವರು ಮುಂದಾಗಬೇಕಿದೆ. ರಾಜ್ಯದಲ್ಲಿರುವ ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳಾಗಿ ಪರಿವರ್ತಿಸುವಲ್ಲಿ ಕೇಂದ್ರ ಸಚಿವರು ಶ್ರಮಿಸಬೇಕು ಎಂದು ಹೇಳಿದರು.
ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ಶಾಲೆಗಳಂತೆ ಗ್ರಾಮೀಣ ಮಟ್ಟದಲ್ಲಿ ವಸತಿ ಶಾಲೆಗಳನ್ನು ನಿರ್ಮಿಸಿ ಉಚಿತ ಶಿಕ್ಷಣ ನೀಡುತ್ತಿರುವಲ್ಲಿ ಕರ್ನಾಟಕ ರಾಜ್ಯವೇ ಪ್ರಥಮದಾಗಿದೆ. ಸರ್ಟಿಪಿಕೆಟ್ ಶಿಕ್ಷಣ ನಮ್ಮದಾಗಬಾರದು. ಪ್ರಬುದ್ದ ಜ್ಞಾನದೊಂದಿಗೆ ಉನ್ನತ ಸ್ಥಾನಕ್ಕೆರಿಸುವ ನಿಟ್ಟಿನಲ್ಲಿ ಪ್ರೇರೇಪಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ಈಗಾಗಲೇ ಮಕ್ಕಳ ಆರೋಗ್ಯ ಹಿತದೃಷ್ಠಿಯಿಂದ ಶಿಕ್ಷಣ ಸಚಿವರು ದಿಟ್ಟ ನಿರ್ಧಾರ ತೆಗೆದುಕೊಂಡು ಶಿಕ್ಷಣ ವ್ಯವಸ್ಥೆಯಲ್ಲಿ ನಾವೆಂದಿಗೂ ರಾಜಿ ಇಲ್ಲ ಎಂಬುದನ್ನು ತೋರಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ರಾಮದುರ್ಗ ತಾಲೂಕು ಅತ್ಯಂತ ಹಿಂದೂಳಿದ ತಾಲೂಕಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು, ಉತ್ತಮ ಸಾರಿಗೆ ವ್ಯವಸ್ಥೆಯ ದೃಷ್ಠಿಯಿಂದ 25 ಬಸ್, ಬಟಕುರ್ಕಿ ಗ್ರಾಮದಲ್ಲಿ ಬಸ್ ನಿಲ್ದಾಣ ವ್ಯವಸ್ಥೆ, ವಸತಿ ಶಾಲೆ, ರಾಜ್ಯ ಹೆದ್ದಾರಿ ಹಾಗೂ ವಿವಿಧ ರಸ್ತೆಗಳ ಅಭಿವೃದ್ಧಿಪಡಿಸುವುದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನತೆಗೆ ಭೂಮಿ ಖರೀದಿಸಲು ಹಣ, ಕೊಳವೆ ಬಾವಿಗಳನ್ನು ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸಚಿವರಲ್ಲಿ ಮನವಿ ಮಾಡಿದರು.
ಉಪಸಭಾಪತಿ ಹಾಗೂ ಸವದತ್ತಿ ಶಾಸಕ ಆನಂದ ಮಾಮನಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರು. ಬಟಕುರ್ಕಿಯ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಬಿಜೆಪಿ ಮುಖಂಡ ಮಲ್ಲಣ್ಣ ಯಾದವಾಡ ಮಾತನಾಡಿದರು. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ ಪಠಾಣ, ಜಿಪಂ ಸದಸ್ಯರಾದ ಮಾರುತಿ ತುಪ್ಪದ, ರಮೇಶ ದೇಶಪಾಂಡೆ, ರೇಣಪ್ಪ ಸೋಮಗೊಂಡ, ಕೃಷ್ಣಪ್ಪ ಲಮಾಣಿ, ಶಿವಕ್ಕ ಬೆಳವಡಿ, ಬಿಜೆಪಿ ತಾಲೂಕಾಧ್ಯಕ್ಷ ರಾಜೇಶ ಬೀಳಗಿ, ಮುಖಂಡರಾದ ಶೇಖರಪ್ಪ ಯಾದವಾಡ, ಡಾ| ಕೆ.ವಿ. ಪಾಟೀಲ, ಉಮಾ ಸಾಲಿಗೌಡರ, ಗಿರೀಶ ಸ್ವಾದಿ ಇದ್ದರು. ಮುರಳಿಧರ ದೇಶಪಾಂಡೆ ಸ್ವಾಗತಿಸಿದರು. ಕೆ.ಎಸ್. ಕರ್ಕಿ ವಂದಿಸಿದರು.
ಅಲ್ಲದೇ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಜನಾಂಗದ ಅಭಿವೃದ್ಧಿಗಾಗಿ ವಿವಿಧ ಇಲಾಖೆ ಯೋಜನೆಗಳ ಮೂಲಕ ರಾಜ್ಯ ಸರಕಾರ 26,700 ಕೋಟಿ ಅನುದಾನ ಒದಗಿಸಿದೆ. ಅಲ್ಲದೇ ಭೂಮಿ ಖರೀದಿಸಲು 300 ಕೋಟಿ ಅನುದಾನ ನೀಡಿದೆ. ಕೋವಿಡ್ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ಮುಂಬರುವ ದಿನಗಳಲ್ಲಿ ಶಾಸಕರ ಬೇಡಿಕೆ ಈಡೇರಿಸಲು ಶ್ರಮಿಸುತ್ತೇನೆ. –
ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ