Advertisement
ಕೊರೊನಾ ಎರಡನೇ ಅಲೆಯ ಸಂದರ್ಭ ಕಲಬುರಗಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ವಿಜ್ಞಾನ ಸಂಸ್ಥೆ, ಮೈಸೂರಿನ ಮೆಡಿಕಲ್ ಕಾಲೇಜು, ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆ ಮತ್ತು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಜಿನೋಮಿಕ್ ಸೀಕ್ವೆನ್ಸಿಂಗ್ ಲ್ಯಾಬ್ ತೆರೆಯುವ ನಿರ್ಧಾರಕ್ಕೆ ರಾಜ್ಯ ಸರಕಾರ ಬಂದಿತ್ತು. ಆದರೆ ದ.ಕ. ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಇಲ್ಲ ಎಂಬ ಕಾರಣಕ್ಕೆ ಈ ಜಿಲ್ಲೆಗಳ ಪ್ರಸ್ತಾವವನ್ನು ಕೈಬಿಡಲು ರಾಜ್ಯ ಸರಕಾರ ಮುಂದಾಗಿದೆ.
ಕರಾವಳಿ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿದ್ದು, ದಿನನಿತ್ಯ ವಿದೇಶದಿಂದ ಹತ್ತಾರು ವಿಮಾನಗಳು ಮಂಗಳೂರಿಗೆ ಆಗಮಿಸುತ್ತಿವೆ. ಸದ್ಯ ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಹೈರಿಸ್ಕ್ ದೇಶದ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದ್ದು, ಕೊರೊನಾ ಪಾಸಿಟಿವ್ ಬಂದವರ, ಕ್ಲಸ್ಟರ್ ಪ್ರದೇಶದ ಮಂದಿಯ ಗಂಟಲ ದ್ರವ ಮಾದರಿಯನ್ನು ಜಿನೋಮಿಕ್ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ರಾಜ್ಯದಲ್ಲಿ ಸದ್ಯ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮಾತ್ರ ಜಿನೋಮಿಕ್ ಸೀಕ್ವೆನ್ಸಿಂಗ್ ಪ್ರಯೋಗಾಲಯವಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಮಾದರಿಯೂ ಇಲ್ಲಿಗೆ ಬರುತ್ತದೆ. ಕರಾವಳಿ ಭಾಗದಿಂದಲೂ ಸದ್ಯ ತಿಂಗಳಿಗೆ ನೂರಕ್ಕೂ ಹೆಚ್ಚಿನ ಗಂಟಲದ್ರವ ಮಾದರಿ ಪರೀಕ್ಷೆಗೆ ಹೋಗುತ್ತದೆ. ಒತ್ತಡವಿದ್ದ ಸಮಯಲ್ಲಿ ಪರೀಕ್ಷಾ ವರದಿಗಾಗಿ ಒಂದು ವಾರ ಕಾಯಬೇಕಾದ ಅನಿವಾರ್ಯತೆ ಇದೆ. ಹೀಗಿದ್ದಾಗ, ಕರಾವಳಿ ಭಾಗದಲ್ಲಿ ಜಿನೋಮಿಕ್ ಸೀಕ್ವೆನ್ಸಿಂಗ್ ಪ್ರಯೋಗಾಲಯ ಸ್ಥಾಪಿಸಿದರೆ ಅನುಕೂಲವಿದೆ. ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸದಾಶಿವ ಶಾನ್‌ಬೋಗ್ ಅವರು ಹೇಳುವ ಪ್ರಕಾರ, “ಜಿನೋಮಿಕ್ ಸೀಕ್ವೆನ್ಸಿಂಗ್ ಲ್ಯಾಬ್ ಸ್ಥಾಪನೆಗೆ ಸಂಬಂಧಪಟ್ಟಂತೆ ರಾಜ್ಯ ಸರಕಾರವು ಸ್ಥಳಾವಕಾಶ ಕೋರಿತ್ತು. ಅದಕ್ಕೆ ಅನುಗುಣವಾಗಿ ವೆನ್ಲಾಕ್ ನಲ್ಲಿ ಈಗಿರುವ ಸ್ಥಳಾವಕಾಶದಲ್ಲಿಯೇ ಲ್ಯಾಬ್ ನಿರ್ಮಾಣ ಕುರಿತ ಮಾಹಿತಿಯನ್ನು ಸರಕಾರಕ್ಕೆ ನೀಡಲಾಗಿತ್ತು’ ಎನ್ನುತ್ತಾರೆ.
Related Articles
Advertisement
ಆರೋಗ್ಯ ಇಲಾಖೆಯ ವಾದವೇನು?ಆರೋಗ್ಯ ಇಲಾಖೆ ಮಾಹಿತಿಯಂತೆ ಈ ಲ್ಯಾಬ್ ನಿರ್ಮಾಣಕ್ಕೆ ಸುಮಾರು 2ರಿಂದ 3 ಕೋಟಿ ರೂ.ನಷ್ಟು ಆದಾಯ ಹೊಂದಿಸುವ ಅಗತ್ಯವಿದೆ. ಅಲ್ಲದೆ, ವಿಜ್ಞಾನಿಗಳು, ವೈರಾಣು ಪರೀಕ್ಷೆ ತಜ್ಞರು, ಅಧಿಕಾರಿಗಳು, ನೌಕರರು ಸೇರಿದಂತೆ ಮಾನವ ಸಂಪನ್ಮೂಲವನ್ನು ಹೊಸದಾಗಿ ಹೊಂದಿಸಬೇಕು. ತಿಂಗಳಿನಿಂದ ತಿಂಗಳಿಗೆ ನಿರ್ವಹಣ ವೆಚ್ಚವೂ ಅಧಿಕವಾಗುತ್ತದೆ. ಕೊರೊನಾ ಕಡಿಮೆಯಾದ ಬಳಿಕ ಈ ಲ್ಯಾಬ್ ಉಪಯೋಗವೂ ಕಡಿಮೆಯಾಗಲಿದೆ. ಒಂದು ವೇಳೆ ಆ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಇದ್ದರೆ ಮುಂದಿನ ದಿನಗಳಲ್ಲಿ ಆ ಪ್ರಯೋಗಾಲಯವನ್ನು ಅಲ್ಲಿನ ವಿದ್ಯಾರ್ಥಿಗಳ ಪ್ರಾಯೋಗಿಕ ಅಭ್ಯಾಸದ ನೆಲೆಯಲ್ಲಿ ಉಪಯೋಗಿಸಬಹುದು. ದ.ಕ. ಮತ್ತು ವಿಜಯಪುರದಲ್ಲಿ ಸದ್ಯ ಸರಕಾರಿ ವೈದ್ಯಕೀಯ ಕಾಲೇಜುಗಳಿಲ್ಲ. ಹೀಗಾಗಿ ಈಲ್ಯಾಬ್‌ಗ ಈ ಎರಡೂ ಜಿಲ್ಲೆಯಲ್ಲಿ ಹಣ ಹೂಡಿಕೆ ಮಾಡುವುದು ಬೇಡ ಎಂಬ ವಾದವನ್ನು ಮಾಡುತ್ತಿದೆ. ಜಿನೋಮಿಕ್ ಸೀಕ್ವೆನ್ಸಿಂಗ್ ಲ್ಯಾಬ್ ಸ್ಥಾಪನೆ ಬಳಿಕ ಕಾರ್ಯಾಚರಿಸಲು ನುರಿತ ತಾಂತ್ರಿಕ ತಜ್ಞರು, ವಿಜ್ಞಾನಿಗಳ ಅಗತ್ಯವಿದೆ. ಈ ಪ್ರಯೋಗಾಲಯದ ನಿರ್ವಹಣೆಗೆ ಮೈಕ್ರೋ ಬಯೋಲಜಿ ವಿಭಾಗದ ಅಗತ್ಯವೂ ಇದೆ. ಜಿಲ್ಲಾ ಮಟ್ಟದಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಇಲ್ಲದಿದ್ದರೆ ನಿರ್ವಹಣೆ ಸಮಸ್ಯೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಇರುವ ಕಡೆ ಮಾತ್ರ ಈ ಪ್ರಯೋಗಾಲಯ ಸ್ಥಾಪನೆ ಮಾಡಲು ತೀರ್ಮಾನಿಸಿದ್ದೇವೆ. ಈ ಹಿನ್ನೆಲೆಯಲ್ಲಿ ದ.ಕ. ಮತ್ತು ವಿಜಯಪುರ ಜಿಲ್ಲೆಯನ್ನು ಸದ್ಯದ ಮಟ್ಟಿಗೆ ಕೈಬಿಡಲಾಗಿದೆ.
– ಅನಿಲ್ ಕುಮಾರ್ ಟಿ.ಕೆ.,
ಪ್ರಧಾನ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರಿಗೆ ಲ್ಯಾಬ್ ತರಲು ಸರ್ವ ಪ್ರಯತ್ನ: ಡಿಸಿ
“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿನೋಮಿಕ್ ಸೀಕ್ವೆನ್ಸ್ ಲ್ಯಾಬ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾಡಳಿತದಿಂದ ರಾಜ್ಯ ಸರಕಾರಕ್ಕೆ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಮರು ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ. ರಾಜ್ಯ ಸರಕಾರವು ದಕ್ಷಿಣ ಜಿಲ್ಲೆಯನ್ನು ಲ್ಯಾಬ್ ಸ್ಥಾಪನೆ ಪಟ್ಟಿಯಿಂದ ಕೈಬಿಡಲು ಮುಂದಾಗಿರುವ ಬಗ್ಗೆ ಮಾಹಿತಿ ಬಂದಿದೆ. ಆದರೆ, ದಕ್ಷಿಣ ಕನ್ನಡಜಿಲ್ಲೆಯಲ್ಲಿ ಲ್ಯಾಬ್ ಸ್ಥಾಪನೆಗೆ ಬೇಕಾದ ಪೂರಕ ಅಗತ್ಯ ಸೌಲಭ್ಯ ಹೊಂದಿರುವ ಹಾಗೂ ವೈದ್ಯ ಕ್ಷೇತ್ರದಲ್ಲಿಯೂ ಜಿಲ್ಲೆ ಮುಂದಿರುವ ಕಾರಣಕ್ಕೆ ಈ ಬಗ್ಗೆ ಮರು ಪರಿಶೀಲಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು. ಆ ಮೂಲಕ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು’.
– ಡಾ| ರಾಜೇಂದ್ರ ಕೆ.ವಿ.,
ದ.ಕ. ಜಿಲ್ಲಾಧಿಕಾರಿ -ನವೀನ್ ಭಟ್ ಇಳಂತಿಲ