Advertisement

ಉತ್ತಮ ಮುಂಗಾರು: ಬರದಿಂದ ರಾಜ್ಯ ಪಾರು

02:36 AM Sep 28, 2020 | Hari Prasad |

ಬೆಂಗಳೂರು: ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ರಾಜ್ಯದ ಎಲ್ಲ ಜಿಲ್ಲೆಗಳೂ ಬರದ ಸುಳಿಯಿಂದ ತಪ್ಪಿಸಿಕೊಂಡಿವೆ.

Advertisement

ಆದರೆ, 23 ಜಿಲ್ಲೆಗಳ 130 ತಾಲೂಕುಗಳು ಅತಿವೃಷ್ಟಿಗೆ ತುತ್ತಾಗಿವೆ.

ಜೂನ್‌ನಿಂದ ಸೆಪ್ಟಂಬರ್‌ನವರೆಗಿನ ಅವಧಿಯನ್ನು ಮುಂಗಾರು ಎಂದು ಪರಿಗಣಿಸಲಾಗುತ್ತದೆ.

ಎರಡು ವರ್ಷಗಳಿಂದ ಈ ಅವಧಿಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರ ಕಾಣಿಸಿಕೊಂಡಿತ್ತು. 2018ರಲ್ಲಿ 28 ತಾಲೂಕುಗಳು ಬರಪೀಡಿತ ಹಾಗೂ 72 ತಾಲೂಕುಗಳು ತೀವ್ರ ಬರಪೀಡಿತ ಎಂದು ಗುರುತಿಸಿಕೊಂಡಿದ್ದವು.
2019ರಲ್ಲಿ 44 ತಾಲೂಕುಗಳು ಬರಕ್ಕೆ ತುತ್ತಾಗಿದ್ದವು. ಅದೇ ವರ್ಷ ಆಗಸ್ಟ್‌ 1ರಿಂದ ಆ.9ರ ವರೆಗೆ ರಾಜ್ಯದ 17 ಜಿಲ್ಲೆಗಳಲ್ಲಿ 80 ತಾಲೂಕು ಪ್ರವಾಹಕ್ಕೆ ತುತ್ತಾಗಿದ್ದವು.

130 ತಾಲೂಕುಗಳಲ್ಲಿ ಅತಿವೃಷ್ಟಿ
ರಾಜ್ಯದ 23 ಜಿಲ್ಲೆಗಳ 130 ತಾಲೂಕುಗಳು ಅತಿವೃಷ್ಟಿಗೆ ತುತ್ತಾಗಿವೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಈ ವರ್ಷದ ಮುಂಗಾರಿನಲ್ಲಿ ಬಿದ್ದ ಮಳೆಯಿಂದಾಗಿ ಹಾಗೂ ಮಹಾರಾಷ್ಟ್ರದ ಕೃಷ್ಣಾ ಕಣಿವೆ ಜಲಾಶಯ ತುಂಬಿ ಹರಿದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಯಾಗಿ ಅಪಾರ ನಾಶನಷ್ಟ ಉಂಟಾಗಿದೆ ಎಂದೂ ಹೇಳಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಮಾಹಿತಿಯಂತೆ ಆ.1ರ 2019ರಿಂದ ಈವರೆಗೆ ರಾಜ್ಯದ 12 ಜಿಲ್ಲೆಗಳ 23 ತಾಲೂಕುಗಳು ಪ್ರವಾಹಕ್ಕೆ ತುತ್ತಾಗಿವೆ.

Advertisement

ಎಲ್ಲ ಜಿಲ್ಲೆಗಳಲ್ಲೂ ಉತ್ತಮ ಮಳೆ
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಬಾರಿ ಉತ್ತಮ ಮಳೆಯಾಗಿದೆ. ಜೂನ್‌ 1ರಿಂದ ಸೆ. 24ರ ವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಒಟ್ಟಾರೆ ವಾಡಿಕೆಗಿಂತ ಶೇ. 44 ಹೆಚ್ಚು ಮಳೆಯಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶೇ. 34 ಹಾಗೂ ಕರಾವಳಿಯಲ್ಲಿ ಶೇ. 12ರಷ್ಟು ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ರಾಜ್ಯ ಬರದಿಂದ ತಪ್ಪಿಸಿಕೊಂಡಿದ್ದು ಹೇಗೆ ?
ರಾಜ್ಯದಲ್ಲಿ ಈ ಬಾರಿ ಮಳೆ ಬೀಳುವ ಮಾದರಿ ಬದಲಾಗಿದೆ. ಪ್ರತಿ ವರ್ಷವೂ ಮುಂಗಾರು ಪಶ್ವಿ‌ಮಾಭಿಮುಖವಾಗಿರುತ್ತದೆ. ಇದರಿಂದಾಗಿ ಕರಾವಳಿ ಭಾಗವನ್ನು ದಾಟಿಕೊಂಡು ಉತ್ತರ, ದಕ್ಷಿಣ ಒಳನಾಡು ಹಾಗೂ ಕಲ್ಯಾಣ ಕರ್ನಾಟಕದ ಭಾಗಗಳಲ್ಲಿ ವಿರಳ ಪ್ರಮಾಣದಲ್ಲಿ ಮಳೆಯಾಗುತ್ತಿತ್ತು.

ಮೋಡಗಳು ತೀರಾ ಪ್ರಬಲವಾಗಿದ್ದರೆ ಮಾತ್ರ ಎಲ್ಲ ಕಡೆಯೂ ಉತ್ತಮ ಮಳೆಯಾಗುತ್ತದೆ. ಈ ಬಾರಿ ಪೂರ್ವದಿಂದ ಚಲಿಸುವ ಮೋಡಗಳು ಹೆಚ್ಚಾಗಿದ್ದು, ಮುಂಗಾರಿನಲ್ಲಿ ರಾಜ್ಯದ ಪೂರ್ವ ಒಳಭಾಗದಲ್ಲಿ ಉತ್ತಮ ಮಳೆಯಾಗಿದೆ. ಅಲ್ಲದೆ, ಆಗಸ್ಟ್‌ ಹಾಗೂ ಸೆಪ್ಟಂಬರ್‌ ತಿಂಗಳಿನಲ್ಲೂ ಉತ್ತಮ ಮಳೆಯಾಗಿದೆ ಎಂದು ಉಸ್ತುವಾರಿ ಕೇಂದ್ರದ ಹಿರಿಯ ಹವಾಮಾನ ತಜ್ಞ ಡಾ| ಶ್ರೀನಿವಾಸ ರೆಡ್ಡಿ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next