Advertisement
ಕಾರ್ಕಳದ ಸ್ಥಳೀಯ ಆಹಾರ ಉತ್ಪನ್ನ ಕಾರ್ಲ ಕಜೆ ಅಕ್ಕಿ, ಬಿಳಿಬೆಂಡೆ ಇವುಗಳನ್ನು ಬ್ರ್ಯಾಂಡ್ ಬೆಳೆಯನ್ನಾಗಿಸುವ ಪ್ರಯತ್ನ ಈ ಹಿಂದೆ ನಡೆದು ರಾಜ್ಯದ ಗಮನ ಸೆಳೆದಿತ್ತು. ಅದಕ್ಕೂ ಮುಂಚಿತ ಉಡುಪಿಯ ಮಟ್ಟುಗುಳ್ಳ ಬೆಳೆ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ. ಕರಾವಳಿ ಭಾಗದ ಹಣ್ಣು ಹಲಸು ವಿಚಾರದಲ್ಲಿ ಈಗ ಮತ್ತೂಮ್ಮೆ ರಾಜ್ಯದ ಗಮನ ಸೆಳೆಯಲು ಸಿದ್ಧವಾಗಿದೆ. ಸುಫಲ ರೈತ ಉತ್ಪಾದಕ ಕಂಪೆನಿ ಆಶ್ರಯದಲ್ಲಿ ನಿಟ್ಟೆಯಲ್ಲಿ ಅಟಲ್ ಇಂಕ್ಯುಬೇಷನ್ ಸೆಂಟರ್ ಸ್ಥಾಪಿಸಿ, ಇಲ್ಲಿ 5 ಕೋ.ರೂ. ವೆಚ್ಚದಲ್ಲಿ ಹಲಸು ಸಂಸ್ಕರಣ ಕೇಂದ್ರ ನಿರ್ಮಿಸಲಾಗುತ್ತಿದೆ. ಘಟಕದ ಮೂಲಕ ಹಲಸಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
Related Articles
Advertisement
ಹಲಸು-ಮಾವಿಗೆ ಪ್ರಾತಿನಿಧ್ಯ ಸಿಗಲಿ
ರಾಜ್ಯದಲ್ಲಿ ಹಣ್ಣುಗಳು ಸರಕಾರದ ಸಹಾಯವೇ ಇಲ್ಲದೆ ಸೊರಗುತ್ತಿವೆ. ಮಾವು ಸೇರಿ ಇನ್ನಿತರ ತೋಟಗಾರಿಕಾ ಬೆಳೆಯಾಗಿ ಸಾಕಷ್ಟು ಪ್ರೋತ್ಸಾಹ ರಾಜ್ಯದಲ್ಲಿ ಇದ್ದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಮಾವು, ಹಲಸನ್ನು ರಾಜ್ಯದ ಹಣ್ಣಾಗಿ ಘೋಷಿಸಿದರೆ ಸಹಜವಾಗಿಯೇ ಮಾರುಕಟ್ಟೆ ವಿಸ್ತಾರಗೊಳ್ಳುತ್ತದೆ. ಸರಕಾರ ಈ ದಿಸೆಯಲ್ಲಿ ಯೋಚಿಸಬೇಕು ಎನ್ನುವುದು ಹಣ್ಣು ಬೆಳೆಗಾರರ ಅಭಿಪ್ರಾಯವಾಗಿದೆ.
ಹಲಸು ಬೆಳೆಗಾರರ ಸಂಘ ಶೀಘ್ರ ಅಸ್ತಿತ್ವಕ್ಕೆ
ಕರಾವಳಿ ಭಾಗದ ಅಲ್ಲಲ್ಲಿ ಹಲಸು ಮೇಳಗಳನ್ನು ಈ ಹಿಂದೆಯೂ ನಡೆಸಿಕೊಂಡು ಬರಲಾಗಿದೆ. ಜು. 4 ಅನ್ನು ಹಲಸು ದಿನ ಎಂದೇ ಆಚರಿಸ ಲಾಗುತ್ತಿದೆ. ಪುತ್ತೂರಿನ ಕೃಷಿಕ ಶ್ರೀಪಡ್ರೆಯವರು ಹಲಸು ಬೆಳೆ ಮತ್ತು ಹಲಸಿನಿಂದ ತಯಾರಾದ ಆಹಾರವನ್ನು ಜನಪ್ರಿಯಗೊಳಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ.
ಬ್ರಹ್ಮಾವರ ಕೃಷಿ ಸಂಶೋಧನ ಕೇಂದ್ರ, ತುಮಕೂರಿನ ಕೃಷಿ ವಿಶ್ವವಿದ್ಯಾಲಯಗಳು ಈ ನಿಟ್ಟಿನಲ್ಲಿ ಸಂಶೋಧನೆ, ಸಲಹೆ-ಸೂಚನೆಗಳನ್ನು ನೀಡುತ್ತಿವೆ. ನಿಟ್ಟೆಯಲ್ಲಿ ನಡೆಯುವ ರಾಷ್ಟ್ರೀಯ ಹಲಸು ಮೇಳದ ಬಳಿಕ ರಾಜ್ಯದಲ್ಲಿ ಹಲಸು ಬೆಳೆಗಾರರ ಸಂಘ ಸ್ಥಾಪಿಸಿ, ಹಲಸು ಕ್ಷೇತ್ರದಲ್ಲಿ ಮತ್ತಷ್ಟೂ ಪ್ರಗತಿ ಸಾಧಿಸುವ ಪ್ರಯತ್ನಗಳಿಗೆ ವೇದಿಕೆ ಒದಗಿಲಾಗುತ್ತಿದೆ.
ಔಷಧೀಯ ಗುಣ
ಜ್ಯೂಸ್, ಪಾಯಸ, ಇಡ್ಲಿ, ದೋಸೆ, ಗಟ್ಟಿ, ಪತ್ತೋಳಿ, ಮಾಂಬಳ, ಮುಳಕ, ಗೆಣಸಲೆ, ಬನ್ಸ್, ಶಿರಾ, ಹೋಳಿಗೆ, ಚಿಪ್ಸ್, ಹಪ್ಪಳ ಹೀಗೆ ಹಲವು ಬಗೆಯ ಖಾದ್ಯಗಳ ಪಟ್ಟಿಯಲ್ಲಿ ಹಲಸಿದೆ. ಬೀಜ ಕೂಡ ಪದಾರ್ಥ ಖಾದ್ಯ ತಯಾರಿಕೆ ಬಳಕೆಯಾಗುತ್ತಿದೆ. ಹಸಿವು ನೀಗಿಸುವ ಕಿಸೆ ತುಂಬಿಸುವ ಹಲಸು ಇಂದು ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ವಾಣಿಜ್ಯವಾಗಿ ಬೆಳೆದು ಕೈ ತುಂಬ ಗಳಿಸುತ್ತಿದ್ದಾರೆ. ಹಲಸಿನ ಎಲೆ, ಎಳೆ ಹಲಸಿನಕಾಯಿ (ಗುಜ್ಜೆ), ಹಣ್ಣು, ಬೀಜ ಹೀಗೆ ಎಲ್ಲದರಲ್ಲೂ ಒಂದೊಂದು ಔಷಧ ಗುಣವಿದೆ. ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಮೊದಲಾದ ರೋಗಗಳಿಗೂ ತಡೆಗಟ್ಟುವ ಶಕ್ತಿ ಇದೆ. ಈ ಬಗ್ಗೆ ಒಂದಷ್ಟು ಸಂಶೋಧನೆಗಳು ನಡೆಯುತ್ತಿವೆ.
ಪರಿಶೀಲನೆ
ರಾಜ್ಯದಲ್ಲಿ ಹಲವು ವಿಧಧ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಅವುಗಳ ಪೈಕಿ ಹಲಸು ಒಂದು ಚೌಕಟ್ಟಿನೊಳಗೆ, ಸೀಮಿತವಾಗಿ ಬೆಳೆಯುವ ಬೆಳೆ. ಹಲಸು ಹಣ್ಣನ್ನು ರಾಜ್ಯ ಹಣ್ಣಾಗಿ ಘೋಷಣೆ ಬಗ್ಗೆ ಪ್ರಸ್ತಾವನೆಗಳು ಬಂದಲ್ಲಿ ಈ ಬಗ್ಗೆ ಪರಿಶೀಲಿಸಬಹುದು. –ಕೆ.ಬಿ. ದುಂಡಿ, ತೋಟಗಾರಿಕ ಅಪರ ನಿರ್ದೇಶಕರು, ಹಣ್ಣುಗಳು ಮತ್ತು ಪುಷ್ಪಾಭಿವೃದ್ಧಿ ಲಾಲ್‌ಬಾಲ್ ಬೆಂಗಳೂರು
ಪ್ರೋತ್ಸಾಹ ಅಗತ್ಯ
ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬೇಕೆನ್ನುವುದು ಪ್ರಧಾನಿಯವರ ಆಶಯ. ಕಾರ್ಕಳದ ಎರಡು ಆಹಾರ ಬೆಳೆಯನ್ನು ಬ್ರ್ಯಾಂಡ್ ಬೆಳೆಯನ್ನಾಗಿಸುವ ಪ್ರಯತ್ನ ಈಗಾಗಲೇ ನಡೆದಿದೆ. ಕರಾವಳಿಯ ಹಲಸಿಗೂ ಪ್ರೋತ್ಸಾಹ, ಬೆಂಬಲ ನೀಡಲಾಗುವುದು. – ವಿ.ಸುನಿಲ್ ಕುಮಾರ್, ಸಚಿವರು, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
-ಬಾಲಕೃಷ್ಣ ಭೀಮಗುಳಿ