Advertisement

ರಾಜ್ಯದ ಮೊದಲ “ನೀರಾ ಘಟಕ’ಪುನರಾರಂಭದ ಸುಳಿವು

12:25 AM Feb 22, 2020 | mahesh |

ಮಂಗಳೂರು: ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿರುವ ಬಂಟ್ವಾಳ ಸಮೀಪದ ತುಂಬೆಯ “ನೀರಾ ಘಟಕ’ಕ್ಕೆ ಮರುಜೀವ ದೊರೆಯುವ ನಿರೀಕ್ಷೆ ಮೂಡಿದೆ. ಇದು ರಾಜ್ಯದ ಮೊದಲ ನೀರಾ ಘಟಕವಾಗಿತ್ತು.

Advertisement

ತೆಂಗಿನ ಮರದ “ಕಲ್ಪರಸ’ವನ್ನು ಸಂಸ್ಕರಿಸಿ ನೀರಾ ಆಗಿ ಪರಿವರ್ತಿಸಿ ಅದರ ಮಾರಾಟಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ತೋಟಗಾರಿಕಾ ಇಲಾಖೆಯ ಅಂಗಸಂಸ್ಥೆ ಹಾಪ್‌ಕಾಮ್ಸ್‌ಗೆ ದ.ಕ. ಜಿ.ಪಂ. ಸಿಇಒ ಡಾ| ಆರ್‌. ಸೆಲ್ವಮಣಿ ಕೋರಿದ್ದಾರೆ. ಇದರ ಸಾಧಕ-ಬಾಧಕಗಳ ಅಧ್ಯಯನಕ್ಕೆ ಹಾಪ್‌ಕಾಮ್ಸ್‌ ನಿರ್ಧರಿಸಿದೆ. ಘಟಕ ಆರಂಭವಾದರೆ ತೆಂಗು ಬೆಳೆಗಾರರಿಗೆ ವರದಾನವಾಗಲಿದೆ. ಘಟಕ ಮುಚ್ಚಿದ ಕಾರಣ ಯಂತ್ರೋಪ ಕರಣಗಳು ಬಳಕೆಯಾಗದೆ ಸರಕಾರದ ಹಣ ವ್ಯರ್ಥವಾಗುತ್ತಿತ್ತು. ಜತೆಗೆ ಬಹುನಿರೀಕ್ಷಿತ ಯೋಜನೆ ಸರಕಾರದ ನಿರಾಸಕ್ತಿಯಿಂದಲೇ ಮೂಲೆ ಸೇರುವಂತಾಗಿತ್ತು.

ಕಲ್ಪರಸದ ಮೂಲಕ ಬೆಲ್ಲ, ಸಕ್ಕರೆ!
ಜಿ.ಪಂ. ಸಿಇಒ ಡಾ| ಸೆಲ್ವಮಣಿ ಅವರ ಪ್ರಕಾರ “ಕಲ್ಪರಸ’ವನ್ನು ಬಳಸಿಕೊಂಡು ಉಪ ಉತ್ಪನ್ನಗಳಾದ ಬೆಲ್ಲ, ಸಕ್ಕರೆ ಅಥವಾ ಆಯುರ್ವೇದ ಔಷಧ ತಯಾರಿಸಲು ಸಾಧ್ಯವಿದೆ. ಈ ಬಗ್ಗೆ ಪರಿಶೀಲಿಸುವಂತೆ ಅವರು ಹಾಪ್‌ಕಾಮ್ಸ್‌ಗೆ ಸೂಚಿಸಿದ್ದಾರೆ.

ಪರಿಶೀಲಿಸಿ ಕ್ರಮ
ನೀರಾ ಘಟಕವನ್ನು ಮತ್ತೆ ಆರಂಭಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಘಟಕ ಮತ್ತೆ ಆರಂಭದ ಮುನ್ಸೂಚನೆ ಇದಾಗಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್‌ ಕೆ. ಅಧ್ಯಯನಕ್ಕೆ ನಿರ್ಧಾರ ನೀರಾ ಘಟಕದ ನಿರ್ವಹಣೆ ತನ್ನಿಂದ ಸಾಧ್ಯವೇ ಎಂಬ ಕುರಿತು ಅಧ್ಯಯನ ಕೈಗೊಳ್ಳಲು ಹಾಪ್‌ಕಾಮ್ಸ್‌ ಸದ್ಯ ನಿರ್ಧರಿಸಿದೆ. ಘಟಕಕ್ಕೆ ಬೇಕಾಗುವ ಮೂಲ ಸೌಕರ್ಯ ಮತ್ತು ಯಂತ್ರೋಪಕರಣಗಳ ಬಗ್ಗೆ ಮಾಹಿತಿ ಪಡೆಯಬೇಕಾಗಿದೆ. ನಿರ್ವಹಣೆ ಹೇಗೆ ಎಂಬಿತ್ಯಾದಿ ವಿಚಾರಗಳನ್ನು ಮೊದಲಿಗೆ ಅಧ್ಯಯನ ಮಾಡಿ ಆ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹಾಪ್‌ಕಾಮ್ಸ್‌ನ ಮ್ಯಾನೇಜರ್‌ ರವಿಚಂದ್ರ ಶೆಟ್ಟಿ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

2012ರಲ್ಲಿ ಆರಂಭ, 2016ರಲ್ಲಿ ಬಂದ್‌!
ರಾಜ್ಯದ ಪ್ರಥಮ ನೀರಾ ಘಟಕವು ಬಿ.ಸಿ. ರೋಡ್‌ ಸಮೀಪದ ತುಂಬೆಯ ತೋಟಗಾರಿಕಾ ಕ್ಷೇತ್ರದಲ್ಲಿ 2011-12ನೇ ಸಾಲಿನಲ್ಲಿ ಆರಂಭಗೊಂಡಿತ್ತು. ತೋಟಗಾರಿಕೆ ಇಲಾಖೆ, ತೆಂಗು ಅಭಿವೃದ್ಧಿ ಮಂಡಳಿ, ಪಾಲಕ್ಕಾಡ್‌ ತೆಂಗು ಉತ್ಪಾದಕ ಕಂಪೆನಿಗಳು ಈ ಘಟಕ ನಿರ್ವಹಿಸಲು ಒಪ್ಪಿಕೊಂಡಿದ್ದವು. ಮೂರ್ತೆದಾರರ ಮಹಾಮಂಡಲದ ತಾತ್ವಿಕ ಒಪ್ಪಿಗೆಯಿಂದ ಮಾರಾಟವೂ ಆರಂಭವಾಗಿತ್ತು. 2014ರಲ್ಲಿ ನೀರಾ ತಂಪು ಪಾನೀಯವನ್ನು ಪ್ಯಾಕೆಟ್‌ ಮಾದರಿಯಲ್ಲಿ ಮಂಗಳೂರು ಹಾಪ್‌ಕಾಮ್ಸ್‌ಗೆ ರವಾನಿಸಲಾಗಿತ್ತು. ತುಂಬೆ ಘಟಕವು ದಿನಕ್ಕೆ ಗರಿಷ್ಠ 2 ಸಾವಿರ ಲೀ. ಸಂಗ್ರಹ ಮತ್ತು ಸಂಸ್ಕರಣೆ ಸಾಮರ್ಥ್ಯ ಹೊಂದಿತ್ತು. ಆದರೆ ಸರಕಾರದ ಸೂಕ್ತ ಪ್ರೋತ್ಸಾಹವಿಲ್ಲದೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟಕ 2016ರ ಮೇ ತಿಂಗಳಿನಲ್ಲಿ ಬಾಗಿಲು ಹಾಕಿತ್ತು.

Advertisement

ತುಂಬೆಯ ನೀರಾ ಘಟಕವನ್ನು ಮತ್ತೆ ಆರಂಭಿಸಿ ಕಲ್ಪರಸದಿಂದ ಉಪ ಉತ್ಪನ್ನ ಗಳಾದ ಬೆಲ್ಲ, ಸಕ್ಕರೆ ಮಾಡಲು ಸಾಧ್ಯವಿದೆ. ಹೀಗಾಗಿ ಹಾಪ್‌ಕಾಮ್ಸ್‌ನವರ ಜತೆಗೆ ಸಭೆ ನಡೆಸಿ ಕೋರಿದ್ದೇವೆ. ಘಟಕವನ್ನು ಮತ್ತೆ ಆರಂಭಿಸಿ ತೆಂಗು ಬೆಳೆಗಾರರ ಭವಿಷ್ಯಕ್ಕೆ ನೆರವಾಗುವ ಉದ್ದೇಶವಿದೆ.
– ಡಾ| ಆರ್‌. ಸೆಲ್ವಮಣಿ, ದ.ಕ. ಜಿ.ಪಂ. ಸಿಇಒ

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next