Advertisement

ಸರಕಾರಿ ನೌಕರರ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸಭೆ

03:12 PM Jun 19, 2017 | |

ಧಾರವಾಡ: ಇಲ್ಲಿಯ ಡಯಟ್‌ನ ಡೆಪ್ಯೂಟಿ ಚೆನ್ನಬಸಪ್ಪ ಸಮಾವೇಶ ಭವನದಲ್ಲಿ ರವಿವಾರ ಅಖೀಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸಭೆ ಜರುಗಿತು. 

Advertisement

ಅಖೀಲ ಭಾರತ ಸರಕಾರಿ ನೌಕರರ ಮಹಾಮಂಡಳದ ರಾಷ್ಟ್ರ ಕಾರ್ಯಕಾರಿಣಿ ಸಭೆಯನ್ನು ಜುಲೈ 29 ಹಾಗೂ 30ರಂದು ಬೆಂಗಳೂರು ಮಹಾನಗರದಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸುವುದರ ಜೊತೆ ವಿಳಂಬವಿಲ್ಲದೇ ರಾಜ್ಯ ಸರಕಾರಿ ನೌಕರರಿಗೆ ಜನವರಿ-2017ರಿಂದ ಪೂರ್ವಾನ್ವಯವಾಗಿ ಶೇ. 30ರಷ್ಟು ಮಧ್ಯಂತರ ಪರಿಹಾರವನ್ನು ಸರಕಾರ ಘೋಷಣೆ ಮಾಡುವಂತೆ ನಿರ್ಣಯ ಕೈಗೊಂಡು ಆಗ್ರಹಿಸಲಾಯಿತು. 

ರಾಷ್ಟ್ರೀಯ ಬೆಲೆ ಸೂಚ್ಯಂಕ, ಕೇಂದ್ರ ಸರಕಾರ ಹಾಗೂ ಇತರೇ ರಾಜ್ಯಗಳ ಸರಕಾರಗಳು ಅವರ ನೌಕರರಿಗೆ ನೀಡಿರುವ ವೇತನ ಭತ್ಯೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಸರಕಾರಿ ನೌಕರರಿಗೆ ಅನ್ಯಾಯವಾಗದಂತೆ ಯೋಗ್ಯ ವೇತನ ಶ್ರೇಣಿಗಳನ್ನು ನೀಡುವಂತೆ ಅಖೀಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ವತಿಯಿಂದ 6ನೇ ವೇತನ ಆಯೋಗಕ್ಕೆ ಮನವಿ ಸಲ್ಲಿಸಲೂ ಸಹ ಕಾರ್ಯಕಾರಿಣಿ ಸಭೆ ನಿರ್ಧರಿಸಿತು. 

ಸಭೆ ಉದ್ಘಾಟಿಸಿದ ಹಿರಿಯ ಕವಿ ಡಾ| ವಿ.ಸಿ. ಐರಸಂಗ ಮಾತನಾಡಿ, ನೌಕರರಿಗೆ ಯೋಗ್ಯ ವೇತನ, ಭತ್ಯೆ, ಪಿಂಚಣಿ ನೀಡಿ ಅವರ ಯೋಗಕ್ಷೇಮಕ್ಕೆ ನಿರಂತರ ಸ್ಪಂದಿಸುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಹೊಣೆಯಾಗಿದೆ. ಸರಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ನೌಕರರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. 

ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಮಹದೇವಯ್ಯ ಮಠಪತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ರಾಮಚಂದ್ರ ಮುದಗಣ್ಣವರ ಹಾಗೂ ಉಪಾಧ್ಯಕ್ಷ ಗುರುಮೂರ್ತಿ ಯರಗಂಬಳಿಮಠ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಮಾತನಾಡಿದರು.

Advertisement

ಗೌರವಾಧ್ಯಕ್ಷ ಜಿ.ಜಿ. ಜಿನ್ನೂರ, ಪ್ರಧಾನ ಕಾರ್ಯದರ್ಶಿ ಮುರುಘೇಶ ಸವಣೂರ, ರಾಜ್ಯ ಪರಿಷತ್‌ ಸದಸ್ಯ ಎಚ್‌.ಬಿ. ವಾದಿರಾಜ, ಮಂಜುನಾಥ ಹೆಗಡೆ, ಶೋಭಾ ಲೋಕನಾಗ, ರೇಣುಕಾ, ಸುಶೀಲಾ ಕಟ್ಟಿ, ಎಚ್‌.ವಿ. ಚೆನ್ನಗೌಡರ, ಐ.ಬಿ. ಹರಕುಣಿ, ಶಂಕರ ಘಟ್ಟಿ, ವಿ.ಎಸ್‌. ಉಣ್ಣಿಮಠ, ನಾರಾಯಣ ಭಜಂತ್ರಿ, ಎಸ್‌.ಆರ್‌. ಕುಲಕರ್ಣಿ, ಎಂ.ಎಫ್‌. ಮುಜಾವರ, ಜಿ.ಐ. ಗಣಾಚಾರಿ, ಎಸ್‌.ಬಿ. ಶಿವಸಿಂಪಿ, ಎಂ.ಜಿ. ಸುಬೇದಾರ, ಎಂ.ಜಿ. ಮರಚರೆಡ್ಡಿ, ಎಸ್‌. ಎಂ. ಕುಲಕರ್ಣಿ, ಪುರುಷೋತ್ತಮ, ಅಯ್ಯಪ್ಪ ಮೊಖಾಶಿ, ಅಣ್ಣಿಗೇರಿ, ಭಂಡಿವಡ್ಡರ, ಶೆರೆವಾಡ, ಸಜ್ಜನ ಇದ್ದರು. 

ಸನ್ಮಾನ: ಸಭೆಯಲ್ಲಿ ಹಿರಿಯ ಕವಿ ಡಾ| ವಿ.ಸಿ. ಐರಸಂಗ, ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಮಹದೇವಯ್ಯ ಮಠಪತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌. ಎಸ್‌. ಜೈಕುಮಾರ ಹಾಗೂ ಜಿಲ್ಲಾ ಗೌರವಾಧ್ಯಕ್ಷ ಜಿ.ಜಿ. ಜಿನ್ನೂರ ಅವರನ್ನು ಸನ್ಮಾನಿಸಲಾಯಿತು. ಜಾನಪದ ಸಾಹಿತಿ ಡಾ| ರಾಮೂ ಮೂಲಗಿ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next