ಇಂಡಿ: 6ನೇ ವೇತನ ಆಯೋಗದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಿಂಹಪಾಲು ಸಿಗಲಿದೆ. ಸರಕಾರದ ಯೋಜನೆಗಳ ಸಾಫಲ್ಯತೆಗೆ ಕಾರಣ ಸರ್ಕಾರಿ ನೌಕರರು. ಸರ್ಕಾರದ ಯೋಜನೆಗಳು ಜನರಿಗೆ ಮುಟ್ಟಿಸುವ ಕಾರ್ಯ ನಿಮ್ಮಿಂದ ನಡೆಯುತ್ತಿದ್ದು ಸರ್ಕಾರ ಸದಾ ಕಾಲ ನಿಮ್ಮೊಂದಿಗಿರುತ್ತದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಸೋಮವಾರ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ನಾಲ್ಕನೇ ಸಮಾವೇಶ ಹಾಗೂ ಪ್ರಜಾಸ್ನೇಹಿ ಆಡಳಿತದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರಿ ನೌಕರರು ಮಾಡುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಎಷ್ಟೆ ಸಹಾಯ ಮಾಡಿದರೂ ಕಡಿಮೆಯೇ. ಮುಖ್ಯಮಂತ್ರಿಗಳೊಂದಿಗೆ ಸರ್ಕಾರಿ ನೌಕರರ 6ನೇ ವೇತನದ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ನೌಕರರ ವೇತನ ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಬಿ.ಪಿ. ಮಂಜೇಗೌಡ ಮಾತನಾಡಿ, ದೇಶದ 26 ರಾಜ್ಯಸರ್ಕಾರಗಳು ತಮ್ಮ ನೌಕರರಿಗೆ ಕೇಂದ್ರ ಸರ್ಕಾರದ ಸರಿಸಮಾನ ವೇತನ ಹಾಗೂ ಭತ್ಯೆಗಳನ್ನು ನೀಡುತ್ತಿವೆ. ನಮ್ಮ ರಾಜ್ಯಸರ್ಕಾರಿ ನೌಕರರು ಅತ್ಯಂತ ಕಡಿಮೆ ವೇತನ ಶ್ರೇಣಿಯಲ್ಲಿ ದುಡಿಯುತ್ತಿದ್ದಾರೆ.
ನಮ್ಮ ನೌಕರರಿಗೂ ಕೇಂದ್ರ ನೌಕರರ ಸರಿಸಮನಾದ ವೇತನ ನೀಡಬೇಕು ಎಂದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ಪರಿಣಾಮವಾಗಿ ವೇತನ ಆಯೋಗ ರಚನೆಯಾಗಿದ್ದು ಶೀಘ್ರದಲ್ಲಿ ವರದಿ ಒಪ್ಪಿಸಲಿದ್ದು ಬರಲಿರುವ ಬಜೆಟ್‌ನಲ್ಲಿ ಹೊಸ ವೇತನ ಆಯೋಗದ ವರದಿ ಜಾರಿಯಾಗಲಿದೆ ಎಂದು ಹೇಳಿದರು.
ಆಯೋಗ ವರದಿ ನೀಡಿದ 8 ದಿನಗಳಲ್ಲಿ ಜಾರಿ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ 18 ಸಾವಿರ ಇದ್ದು ನಾವು ಕನಿಷ್ಠ ವೇತನವನ್ನು 22 ಸಾವಿರದಿಂದ ಆರಂಭಿಸಲು ಕೇಳಿಕೊಂಡಿದ್ದೇವೆ.
ಬಜೆಟ್ ಅಧಿವೇಶನದಲ್ಲಿ ವೇತನ ಆಯೋಗದ ವರದಿ ಜಾರಿ ಮಾಡುತ್ತಾರೆ. ಇದಕ್ಕೆ ಯಾವುದೇ ಅನುಮಾನ ಬೇಡ ಎಂದರು. ಎನ್‌ಪಿಎಸ್ ಹಾಗೂ ಹಳೆಯ ಪಿಂಚಣಿ ಜಾರಿ ಬಗ್ಗೆ ನಾವು ಹೋರಾಟ ಬಿಡುವುದಿಲ್ಲ ಎಂದ ಅವರು, 7.93 ಲಕ್ಷ ಹುದ್ದೆಗಳಲ್ಲಿ 2.85 ಲಕ್ಷ ಹುದ್ದೆಗಳು ಖಾಲಿ ಇವೆ. ಅವರ ಕೆಲಸವನ್ನೂ ನಮ್ಮ ನೌಕರರು ಮಾಡುತ್ತಿದ್ದಾರೆ. 2018ರಲ್ಲಿ 18 ಸಾವಿರ ನೌಕರರು ನಿವೃತ್ತಿಯಾಗಲಿದ್ದಾರೆ ಎಂದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ, ರಮೇಶ ಸಂಗಾ, ಚಂದ್ರು ನುಗ್ಲಿ ಮಾತನಾಡಿದರು. ತಾಲೂಕು ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾವೂರ ಅಧ್ಯಕ್ಷತೆ ವಹಿಸಿದ್ದರು.
ತಾಪಂ ಅಧ್ಯಕ್ಷ ರುಕ್ಮುದ್ದೀನ್ ತದ್ದೇವಾಡಿ, ಸಿ.ಎಸ್. ಷಡಕ್ಷರಿ, ಜಗದೀಶ ಪಾಟೀಲ, ರಾಜಕುಮಾರ ತೊರವಿ, ಸಂತೋಷ ಮ್ಯಾಗೇರಿ, ಡಾ| ಕಾಂತು ಇಂಡಿ, ಎಸ್.ಆರ್. ಗಿಡಗಂಟಿ, ವಿನೋದ ದೊಡ್ಡಗಾಣಿಗೇರ, ವೈ.ಟಿ. ಪಾಟೀಲ, ಅಂಬಣ್ಣ ಸುಣಗಾರ ವೇದಿಕೆಯಲ್ಲಿದ್ದರು. ಧನರಾಜ ಮುಜಗೊಂಡ ನಿರೂಪಿಸಿದರು. ಪಂಡಿತ ಕೊಡಹೊನ್ನ ವಂದಿಸಿದರು.