Advertisement

ರಾಜ್ಯ ಸಮ್ಮಿಶ್ರ ಸರ್ಕಾರ ಶೀಘ್ರ ಪತನ

03:39 PM Jun 05, 2018 | |

ಜಗಳೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ತಾನಾಗಿಯೇ ಉರುಳುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ನುಡಿದರು.

Advertisement

ಪಟ್ಟಣದ ತರಳಬಾಳು ಸಮುದಾಯ ಭವನದಲ್ಲಿ ಸೋಮವಾರ ಬಿಜೆಪಿ ತಾಲೂಕು ಘಟಕದ ವತಿಯಿಂದ ಜಗಳೂರು ವಿಧಾನಸಭಾ ಕ್ಷೇತ್ರದ ಮತದಾರರು, ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೊಸ್ತಿ ಸರ್ಕಾರ ಬಹುದಿನ ಉಳಿಯುವುದಿಲ್ಲ. ಯಾವಾಗ ಬೇಕಾದರೂ ಬಿದ್ದು ಹೋಗುವ ಸಂಭವವಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸರ್ಕಾರದ ಶಾಸಕರನ್ನು ಕೇಳಿದರೆ ಎಷ್ಟು ದಿನ ಸರ್ಕಾರ ಉಳಿಯುತ್ತದೆ ಎಂಬುದು ನಮಗೂ ಗೊತ್ತಿಲ್ಲ ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯದ ಜನರ ಸಮಸ್ಯೆಗಳನ್ನು ಅರಿತ ಏಕೈಕ ನಾಯಕರೆಂದರೆ ಬಿ.ಎಸ್‌ ಯಡಿಯೂರಪ್ಪ. ಜನರ ಆಸೆ, ಅಭಿಲಾಷೆಯಂತೆ ಅವರು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಬಹುಮತದ ಕೊರತೆಯಿಂದ ಅವಕಾಶ
ಕಳೆದುಕೊಳ್ಳಬೇಕಾಗಿ ಬಂತು ಎಂದು ಬೇಸರ ವ್ಯಕ್ತಪಡಿಸಿದರು. ಪ್ರಸ್ತುತ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತಿದ್ದಂತೆ ಬಿ.ಎಸ್‌ ಯಡಿಯೂರಪ್ಪ ಮತ್ತೂಮ್ಮೆ ಈ ರಾಜ್ಯದ ಮುಖ್ಯಮಂತ್ರಿಯಾಗಿ ಸುಭದ್ರ ಸರ್ಕಾರವನ್ನು ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿನ ಎಲ್ಲ 28 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಿಸಿ ಮತ್ತೂಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ಎಲ್ಲರೂ ಶ್ರಮಿಸಬೇಕು ಮತ್ತು ಈ ಭಾಗದ ಸಂಸತ್‌
ಸದಸ್ಯ ಜಿ.ಎಂ. ಸಿದ್ದೇಶ್ವರ್‌ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಸಂಸದ ಜಿ.ಎಂ ಸಿದ್ದೇಶ್ವರ್‌ ಮಾತನಾಡಿ, ಜಗಳೂರು ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ 30 ಸಾವಿರಕ್ಕೂ ಅಧಿ ಕ ಮತಗಳ ಅಂತರದಿಂದ ರಾಮಚಂದ್ರ ಅವರನ್ನು ಗೆಲ್ಲಿಸಿದ ಕೀರ್ತಿ ಕ್ಷೇತ್ರದ ಜನತೆಗೆ ಸೇರಬೇಕು ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂಜೂರಾತಿ ನೀಡಿದ್ದ ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಂಗ್ರೆಸ್‌ ಸರ್ಕಾರ ಅನುಷ್ಠಾನಗೊಳಿಸದೇ ಸುಳ್ಳು ಹೇಳುತ್ತ ಕಾಲ ಕಳೆಯಿತು ಎಂದು ಕಿಡಿಕಾರಿದ ಅವರು, ನಾನು ಹಾಗೂ ರಾಮಚಂದ್ರ ಹೋರಾಟ ಮಾಡಿಯಾದರೂ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿದರು.
ಶಾಸಕ ಎಸ್‌.ವಿ ರಾಮಚಂದ್ರ ಮಾತನಾಡಿ, ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಕ್ಷೇತ್ರದ ಮತದಾರರು ಈ ಹಿಂದಿಗಿಂತಲೂ ನನಗೆ ದೊಡ್ಡ ಜವಾಬ್ದಾರಿಯನ್ನೆ ಹೊರಿಸಿದ್ದಾರೆ. ಆ ಜವಾಬ್ದಾರಿಯನ್ನು ನಿಭಾಯಿಸುತ್ತೇನೆಂಬ ವಿಶ್ವಾಸವಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರವಿರಲಿ, ಕೆಲಸ ಹೇಗೆ
ಮಾಡಬೇಕೆಂಬುದನ್ನು ತೋರಿಸುತ್ತೇನೆ ಎಂದರು.

Advertisement

ಜಗಳೂರು ತಾಲೂಕು ನೀರಾವರಿ ಪ್ರದೇಶವಾಗಬೇಕೆಂಬುದು ಜನತೆಯ ಕನಸು. ಆ ಕನಸನ್ನು ನಾನು ನನಸು ಮಾಡುತ್ತೇನೆ.ಸಿರಿಗೆರೆ ಶ್ರೀಗಳ ಆಶಯದಂತೆ 55 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ವಿಧಾನ ಸಭೆ ಒಳಗೂ ಹೊರಗೂ ಹೋರಾಟ ಮಾಡುತ್ತೇನೆ. ಬಿ.ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಈ ಕ್ಷೇತ್ರವನ್ನು ಮಾದರಿ ತಾಲೂಕನ್ನಾಗಿಸಲು ಶ್ರಮಿಸಲಾಗುವುದು ಎಂದರು.

ಮಾಜಿ ಶಾಸಕ ಟಿ.ಗುರುಸಿದ್ದನಗೌಡ, ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌ ಶಿವಯೋಗಿ ಸ್ವಾಮಿ ಮಾತನಾಡಿದರು. ಬಿಜೆಪಿ ತಾಲೂಕಾಧ್ಯಕ್ಷ ಡಿ.ವಿ ನಾಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಜೆ.ವಿ.ನಾಗರಾಜ್‌, ಅಂಜಿನಪ್ಪ, ಅರಸಿಕೆರೆ ಬ್ಲಾಕ್‌ ಅಧ್ಯಕ್ಷ ದ್ಯಾಮೇಗೌಡ, ಜಿಪಂ ಅಧ್ಯಕ್ಷೆ ಮಂಜುಳಾ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಸವಿತಾ
ಕಲ್ಲೇಶಪ್ಪ, ಸದಸ್ಯರಾದ ಎಸ್‌.ಕೆ.ಮಂಜುನಾಥ್‌, ತಾಪಂ ಸದಸ್ಯ ಸಿದ್ದೇಶ್‌, ಶಂಕ್ರನಾಯ್ಕ, ಡಾ. ಮಂಜುನಾಥಗೌಡ, ಜಿ.ಪಂ. ಮಾಜಿ ಸದಸ್ಯ ಎಚ್‌.ನಾಗರಾಜ್‌, ಮುಖಂಡರಾದ ಎಚ್‌ .ಸಿ.ಮಹೇಶ್‌, ಸೋಮನಹಳ್ಳಿ ಶ್ರೀನಿವಾಸ್‌,
ಇಂದಿರಾ ರಾಮಚಂದ್ರ, ಹುಲಿಕುಂಟೆ ಶ್ರೇಷ್ಠಿ ಸೇರಿದಂತೆ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next