ಸಿದ್ದಾಪುರ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಜನ ವಿರೋಧಿಯಾಗಿದೆ. ಕೇಂದ್ರ ಸರಕಾರ ಈಗ 6ನೇ ಭಾರಿಗೆ ಅಧಿಸೂಚನೆ ನೀಡಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜನವಸತಿ ಪ್ರದೇಶವನ್ನು ವರದಿಯಿಂದ ದೂರ ಇಡಬೇಕು. ಭೂ ಸರ್ವೇ ಮೂಲಕ ಜನರಲ್ಲಿರುವ ಆತಂಕವನ್ನು ದೂರ ಮಾಡಬೇಕು. ಇದಕ್ಕೆ ಎಲ್ಲ ಜನ ಪ್ರತಿನಿಧಿಗಳು ಸೇರಿ ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಒತ್ತಾಯಿ ಸುತ್ತೇವೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಕಸ್ತೂರಿ ರಂಗನ್ ವರದಿಯಿಂದ ಜನವಸತಿ ಪ್ರದೇಶಗಳನ್ನು ಕೈಬಿಡುವಂತೆ ಆಗ್ರಹಿಸಿ ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಅಮಾಸೆಬೈಲು ಮತ್ತು ಮಚ್ಚಟ್ಟು ಗ್ರಾಮಸ್ಥರ ಹಿತರಕ್ಷಣ ಸಮಿತಿ ನೇತೃತ್ವದಲ್ಲಿ ಅ.3ರಂದು ಅಮಾಸೆಬೈಲು ಶ್ರೀ ಮಹಾಭೆೃರವಿ ದುರ್ಗಾಪರಮೇಶ್ವರಿ ದೇವಸ್ಥಾನ ವಠಾರದಲ್ಲಿ ಬೃಹತ್ ಪ್ರತಿಭಟನೆ ಸಭೆ ಉದ್ದೇಶಿಸಿ ಮಾತನಾಡಿದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಶಾಸಕನಾಗಿದ್ದಾಗ ವಿರೋಧಿಸಿದ್ದೆ. ಗ್ರಾ.ಪಂ. ನಿರ್ಣಯದ ಮೂಲಕ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದೇವೆ. ಉಡುಪಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಿಂದೆ ನಡೆದಿದ್ದ ಸಭೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ನಾನು ವಿರೋಧ ವ್ಯಕ್ತಪಡಿಸಿದ್ದೆವು. ವರದಿ ಜಾರಿಯನ್ನು ತಿರಸ್ಕರಿಸಿ, ರಾಜ್ಯ ಸರಕಾರ ಸಂಪುಟ ನಿರ್ಣಯ ಕೈಗೊಂಡಿದೆ. ವರದಿ ಜಾರಿ ತಡೆಯಲು ಒಗ್ಗಟ್ಟಿನ ಹೋರಾಟ ಅಗತ್ಯ ಎಂದರು.
ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನ ವಿರೋಧಿ ವರದಿ ಜಾರಿಗೆ ನನ್ನ ವಿರೋಧ ಇದೆ. ಕಸ್ತೂರಿ ರಂಗನ್ ವರದಿಯಿಂದ ಜನರಿಗಾಗುವ ತೊಂದರೆಯ ವಿರುದ್ಧ ಹೋರಾಡುವ ಜನಪ್ರತಿನಿಧಿಗಳಿಗೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದರು.
ಶಾಸಕರಾದ ಕಿರಣ್ಕುಮಾರ್ ಕೊಡ್ಗಿ ಮತ್ತು ಗುರುರಾಜ ಗಂಟಿಹೊಳೆ ಅವರು, ವರದಿ ವಿರುದ್ಧ ಜನರೊಂದಿಗೆ ಸೇರಿ ತಾವೂ ಹೋರಾಟಲಿದ್ದೇವೆ ಎಂದು ಹೇಳಿದರು.
ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮಾಸೆಬೈಲು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕುಲಾಲ್ ವೇದಿಕೆಯಲ್ಲಿದ್ದರು.ಆರ್. ನವೀನ್ಚಂದ್ರ ಶೆಟ್ಟಿ ರಟ್ಟಾಡಿ ಸ್ವಾಗತಿಸಿದರು. ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು. ಚಂದ್ರ ಶೆಟ್ಟಿ ಕೆಲಾ ವಂದಿಸಿದರು.