Advertisement

ರಾಜ್ಯ ಬಜೆಟ್‌ ಪ್ರತಿಕ್ರಿಯೆ

04:02 PM Mar 16, 2017 | Team Udayavani |

ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 12ನೇ ಬಾರಿಗೆ ಬಜೆಟ್‌ ಮಂಡಿಸಿದ್ದು, ಈ ಬಾರಿಯ ವಿತ್ತೀಯ ಬಜೆಟ್‌ ಬಗ್ಗೆ ಉಡುಪಿ ಜಿಲ್ಲೆಯಲ್ಲಿಯೂ ವಿವಿಧ ಪಕ್ಷ, ಸಂಘಟನೆಗಳ ನಾಯಕರಿಂದ ಪರ- ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. 

Advertisement

ರಾಜ್ಯದ ಆರ್ಥಿಕತೆ  ಮತ್ತಷ್ಟು  ದುರ್ಬಲ : ಬಿಜೆಪಿ
ಈ ಸಾಲಿನ ಬಜೆಟ್‌ ಸಮಾಜದ ಯಾವುದೇ ವರ್ಗದ ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ ಇಲ್ಲ. ರೈತರ ಸಾಲ ಮನ್ನಾ ಮಾಡದೇ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಒಳಪಡಿಸಿದೆ. ಮುಂದಿನ ಚುನಾವಣೆ ಮುಂದಿಟ್ಟುಕೊಂಡು ಮಂಡಿಸಿದ ಜನ ಮರುಳು ಬಜೆಟ್‌. ರಾಜ್ಯದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ದುರ್ಬಲಗೊಳ್ಳುವ ಸಂಶಯವಿಲ್ಲ. ಜಿಲ್ಲೆಯ ಬೈಂದೂರು, ಬ್ರಹ್ಮಾವರ ಮತ್ತು ಕಾಪು ತಾಲೂಕು ಘೋಷಣೆ ಮಾಡಿದ್ದು ಸ್ವಾಗತಾರ್ಹ. ಘೋಷಣೆಯಾಗಿ ನಿಲ್ಲದೆ ಶೀಘ್ರ ಕಾರ್ಯರೂಪಕ್ಕೆ ಬರುವಂತಾಗಲಿ. ನೀರಾವರಿ, ಶಿಕ್ಷಣ, ಆರೋಗ್ಯ, ಕೃಷಿ ಇತ್ಯಾದಿ ಪ್ರಮುಖ ಇಲಾಖಾವಾರು ಹಂಚಿಕೆಯಲ್ಲಿ ಶೇ. 10 ರಿಂದ 20 ರಷ್ಟು ಕಡಿತವಾಗಿದೆ. ತೆರಿಗೆ ಸಂಗ್ರಹದಲ್ಲಿ ಸಂಪೂರ್ಣ ವಿಫ‌ಲವಾಗಿದೆ. ಸಂಪನ್ಮೂಲ ಕ್ರೋಡೀಕರಣಕ್ಕೆ ನಿರ್ದಿಷ್ಟ ಕಾರ್ಯಕ್ರಮಗಳು ಕಾಣಿಸುತ್ತಿಲ್ಲ. ಕರಾವಳಿ ಜಿಲ್ಲೆಗಳ ಪ್ರವಾಸೋದ್ಯಮಕ್ಕೆ  ಪ್ರೋತ್ಸಾಹ ನೀಡುವ ಯಾವುದೇ ಕಾರ್ಯಕ್ರಮ ಇಲ್ಲ. ಈಗಾಗಲೇ ಸರಕಾರದ ಮೇಲಿರುವ 93,500 ಕೋ. ರೂ. ಸಾಲ ಮುಂದಿನ ವರ್ಷ 2 ಲಕ್ಷ ಕೋ. ರೂ. ದಾಟುವ ಸೂಚನೆಗಳಿವೆ.                          
– ಮಟ್ಟಾರ್‌ ರತ್ನಾಕರ ಹೆಗ್ಡೆ, ಕಟಪಾಡಿ ಶಂಕರ ಪೂಜಾರಿ, ಉದಯ್‌ ಕುಮಾರ್‌ ಶೆಟ್ಟಿ, ಯಶ್‌ಪಾಲ್‌ ಸುವರ್ಣ  
ಬಿಜೆಪಿ ನಾಯಕರು

ಎಲ್ಲ   ಕ್ಷೇತ್ರ, ವರ್ಗಗಳ ಅಭಿವೃದ್ಧಿಗೆ  ಒತ್ತು : ಕಾಂಗ್ರೆಸ್‌
ಮಂಗಳೂರು ಹಾಗೂ ಮಲ್ಪೆ ಬಂದರುಗಳಲ್ಲಿ ಸುರಕ್ಷಿತ ಇಳಿದಾಣ ನಿರ್ಮಾಣ, ಮಂಗಳೂರು ಏರ್‌ಪೋರ್ಟ್‌ ವಿಸ್ತರಣೆ, ಉಡುಪಿ ಜಿಲ್ಲೆಯ ಬ್ರಹ್ಮಾವರ, ಕಾಪು, ಬೈಂದೂರು ತಾಲೂಕು ಘೋಷಣೆಗಳು ಬಜೆಟ್‌ನಲ್ಲಿ ಕರಾವಳಿ ಪ್ರದೇಶಕ್ಕೆ ನೀಡಿದ ಬಂಪರ್‌ ಕೊಡುಗೆಗಳು. ಅಂತಾ‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ  ಬೆಂಗಳೂರಿನ ಅಭಿವೃದ್ಧಿಗಾಗಿ ಘೋಷಿಸಿದ ಕಾರಿಡಾರ್‌ ಹಾಗೂ ಫ‌ುಟ್‌ಪಾತ್‌ ನಿರ್ಮಾಣ, ಚರಂಡಿ, ಸ್ಕೈವಾಕ್‌ ನಿರ್ಮಾಣ, ಮೆಟ್ರೋ ಎರಡನೇ ಹಂತದ ಕಾಮಗಾರಿಗೆ ಚಾಲನೆ, ಸಣ್ಣ  ಕೈಗಾರಿಕೆಗಳ ಘಟಕ ಸ್ಥಾಪನೆ, ಬಾಡಿಗೆ ಸೈಕಲ್‌ ಯೋಜನೆ, ಕೆರೆ ಅಭಿವೃದ್ಧಿ, ಬಡಾವಣೆ ನಿರ್ಮಾಣ ಯೋಜನೆಗಳು ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಿದೆ. 144 ತಾಲೂಕುಗಳಲ್ಲಿ ಡಯಾಲಿಸಿಸ್‌ ಕೇಂದ್ರ ಸ್ಥಾಪನೆ, ಕೌಶಲ್ಯ ವಿಶ್ವವಿದ್ಯಾನಿಲಯ ಸ್ಥಾಪನೆ, ಗ್ರಾಮ, ತಾಲೂಕು, ಹಾಗೂ ಜಿ. ಪಂ. ಸದಸ್ಯರ ಗೌರವಧನ ಏರಿಕೆ ಹೀಗೆ ವಿವಿಧ ಇಲಾಖೆಗಳಲ್ಲಿ ನೋಟು ರದ್ದತಿಯಿಂದ ಸರಕಾರಕ್ಕೆ 1,350 ಕೋ. ರೂ. ತೆರಿಗೆ ಸಂಗ್ರಹ ಕಡಿತಗೊಂಡರೂ ರಾಜ್ಯದ ಸರ್ವಾಂಗಿಣ ಅಭಿವೃದ್ಧಿಗಾಗಿ ಜನತೆಗೆ ಮೂಲಭೂತ ಸೌಕರ್ಯ ನೀಡುವಲ್ಲಿ ಸಮತೋಲನ ಕಾಯ್ದುಕೊಂಡಿದ್ದಾರೆ. 
  – ಬಿ. ನರಸಿಂಹ ಮೂರ್ತಿ, ಮುರಳಿ ಶೆಟ್ಟಿ, ಶಬ್ಬೀರ್‌ ಅಹ್ಮದ್‌, ಭಾಸ್ಕರ್‌ ರಾವ್‌ ಕಿದಿಯೂರು, ಜನಾದ‌ìನ ಭಂಡಾರ್ಕರ್‌,  ಕಾಂಗ್ರೆಸ್‌ ನಾಯಕರು

ಹೆಬ್ರಿ ಕೈಬಿಟ್ಟದ್ದು ದುರದೃಷ್ಟಕರ: ಜೆಡಿಎಸ್‌
ಕಾಪು, ಬ್ರಹ್ಮಾವರ, ಬೈಂದೂರು ತಾಲೂಕು ಘೋಷಣೆ ಮಾಡಿದ್ದು ಸ್ವಾಗತಾರ್ಹ. ಇದು ಘೋಷಣೆ ಮಾತ್ರವಾಗದೆ ಶೀಘ್ರ ಅನುಷ್ಠಾನಕ್ಕೆ ಬರಲಿ. ಆದರೆ ಹೆಬ್ರಿಯನ್ನು ತಾಲೂಕು ಪಟ್ಟಿಯಲ್ಲಿ ಘೋಷಣೆ ಮಾಡದ್ದು ದುರದೃಷ್ಟಕರ. ಕೃಷಿಕರ ಸಾಲ ಮನ್ನಾ ನಿರೀಕ್ಷೆ ಹುಸಿಯಾಗಿದೆ. ಒಟ್ಟಾರೆ ಈ ಸಾಲಿನ ಬಜೆಟ್‌ ನಿರಾಶಾದಾಯಕ.
– ಯೋಗಿಶ್‌ ಶೆಟ್ಟಿ, ಜೆಡಿಎಸ್‌  ಜಿಲ್ಲಾಧ್ಯಕ್ಷ

ಬಡವರ ಮಟ್ಟಿಗೆ ನೀರಿಕ್ಷೆಗಳಿಲ್ಲದ ಬಜೆಟ್‌: ಕೋಟಾಯಾವುದೇ ಗಟ್ಟಿ ನಿಲುವಿನ ಜನಪರ ಯೊಜನೆಗಳಿಲ್ಲ. ಬರದಿಂದ ಸಾಯುತ್ತಿರುವ ರೈತರ ಕನಿಷ್ಠ ಸಾಲ ಮನ್ನಾ, ಬಡ್ಡಿ ರಿಯಾಯಿತಿ ಘೋಷಿಸಲಿಲ್ಲ. ಹಿಂದಿನ ಬಿಜೆಪಿ  ಸರ್ಕಾರ ರಾಜ್ಯದಲ್ಲಿ ಘೋಷಿಸಿದ್ದ  ತಾಲೂಕುಗಳನ್ನು ಅನುಷ್ಠಾನ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸರಕಾರ 4 ವರ್ಷ ತೆಗೆದುಕೊಂಡು ಈಗ ಹೊಸ ತಾಲೂಕುಗಳನ್ನು ಘೋಷಿಸಿದೆ. ನೇತ್ರಾವತಿ ತಿರುವಿನಿಂದಾಗುವ ಅನಾಹುತದ ಬಗ್ಗೆ ಕರಾವಳಿ ಜಿಲ್ಲೆಯ ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕಿಂಡಿ ಅಣೆಕಟ್ಟಿಗೆ ನೂರು ಕೋ. ರೂ. ನೀಡಿ ಕರಾವಳಿ  ಜನರ ಹೋರಾಟವನ್ನೇ ಸರಕಾರ ನಿರ್ಲಕ್ಷ್ಯ ಮಾಡಿದೆ. ಜಟ್ಟಿ ನಿರ್ಮಾಣ, ತಡೆಗೋಡೆಗೆ ಶಾಶ್ವತ ಪರಿಹಾರ ಬಗ್ಗೆ  ಭರವಸೆ ಬಿಟ್ಟರೆ ಬೇರೇನೂ ಮಾಡಿಲ್ಲ. ಕುಡಿಯುವ ನೀರಿನ ಹೊಸ ಯೋಜನೆ ರೂಪಿಸಿಲ್ಲ. ಗ್ರಾ. ಪಂ. ಸೇರಿದಂತೆ ಪಂಚಾಯತ್‌ ರಾಜ್‌ ಪ್ರತಿನಿಧಿಗಳ ಗೌರವಧನ ಹೆಚ್ಚಿಸಿರುವುದು ಸಮಧಾನ ತಂದಿದೆ. ಬಡವರ ಬದುಕಿನ ಅಭಿವೃದ್ಧಿಯ ಮಟ್ಟಿಗೆ ನಿರಾಶಾದಾಯಕ.
– ಕೋಟಾ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್‌ ಸದಸ್ಯ

Advertisement

ಸಿಎಂ ಅವರಿಗೆ ಅಭಿನಂದನೆಗಳು
ಈ ಸಾಲಿನ ಬಜೆಟ್‌ನಲ್ಲಿ  ಎ. 1 ರಿಂದ ಅನ್ವಯ ಆಗುವಂತೆ ವ್ಯಾಟ್‌ ಅನ್ನು ಹಿಂದೆಗೆದುಕೊಂಡಿರುತ್ತಾರೆ. ರಾಜ್ಯದ ಎಲ್ಲಾ ಮದ್ಯ ಮಾರಾಟಗಾರರ ಪರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು. ಶಾಸಕರು, ಆರ್ಥಿಕ ಇಲಾಖೆಯ ಪ್ರ. ಕಾರ್ಯದರ್ಶಿ, ಆರ್ಥಿಕ ಇಲಾಖೆ ಕಾರ್ಯದರ್ಶಿ,ಅಬಕಾರಿ ಆಯುಕ್ತರು ಸಹಕಾರ ನೀಡಿದ್ದು, ಎಲ್ಲರಿಗೂ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದಿಂದ ಕೃತಜ್ಞತೆ ಸಲ್ಲಿಸುತ್ತಿದ್ದೇವೆ.
-ಬಿ.ಗೋವಿಂದರಾಜ್‌ ಹೆಗ್ಡೆ, ಪ್ರ. ಕಾರ್ಯದರ್ಶಿ, ಜಿಲ್ಲಾ ಮದ್ಯ ಮಾರಾಟಗಾರರ ಅಸೋಸಿಯೇಶನ್‌ಗಳ ಒಕ್ಕೂಟ

ಸಚಿವರಿಗೆ ಕೃತಜ್ಞತೆಗಳು
ಈ ಸಾಲಿನ ಆಯವ್ಯಯದಲ್ಲಿ ಮಂಜುಗಡ್ಡೆ ಹಾಗೂ ಶೈತ್ಯಾಗಾರ ಘಟಕಗಳಿಗೆ ವಿದ್ಯುತ್‌ ಬಳಕೆಯ ಮೇಲೆ ನೀಡುವ ಸಹಾಯಧನವನ್ನು ಯುನಿಟ್‌ಗೆ 1.50 ರೂ. ಯಿಂದ 1.75 ರೂ., ಹಾಗೂ ವಾರ್ಷಿಕ ಮಿತಿಯನ್ನು 3 ಲ. ರೂ. ಯಿಂದ 3.5 ಲ. ರೂ. ಹೆಚ್ಚುವರಿ ಮಾಡುವಲ್ಲಿ ವಿಶೇಷ ಮುತುವರ್ಜಿ ವಹಿಸಿದ ಸಚಿವ ಪ್ರಮೋದ್‌ ಮಧ್ವರಾಜ್‌ ಅವರಿಗೆ ಕೃತಜ್ಞತೆಗಳು.
– ಉದಯ ಕುಮಾರ್‌, ಪ್ರ. ಕಾರ್ಯದರ್ಶಿ,  ಕರಾವಳಿ ಮಂಜುಗಡ್ಡೆ ಘಟಕ ಹಾಗೂ ಶೈತ್ಯಾಗಾರ ಮಾಲಕರ ಸಂಘ

ವೃದ್ಧಾಪ್ಯ ವೇತನ 500ಕ್ಕೆ ಹೆಚ್ಚಳ, ಗ್ರಾಮೀಣ ಭಾಗದಲ್ಲಿ 25 ಪಾಲಿಟೆಕ್ನಿಕ್‌ ಕಾಲೇಜು ಪ್ರಾರಂಭ, ಕ್ರೀಡಾ ಯುವಜನ ಯೋಜನೆಗೆ 285 ಕೋ.ರೂ., ಶಬರಿಮಲೆ ದೇವಸ್ಥಾನದಲ್ಲಿ ಕರ್ನಾಟಕ ಉಪಕಚೇರಿ ಪ್ರಾರಂಭ ಘೋಷಣೆ ಉತ್ತಮ.
– ಕೆ. ರಾಮಚಂದ್ರ ಆಚಾರ್ಯ, 
ರೈಲ್ವೇ ಯಾತ್ರಿ ಸಂಘ, ಉಡುಪಿ

ವಾಹನಗಳ ಮೇಲಿನ ತೆರಿಗೆ ಶೇ. 12ರಿಂದ 18ಕ್ಕೆ ಏರಿಸಿರುವುದು ಖಂಡನೀಯ. ವಾಹನಗಳ ಖರೀದಿಗೆ 3 ಲ.ರೂ. ಸಬ್ಸಿಡಿ ಸಹಾಯಧನ ಘೋಷಿಸಿರುವುದು  ಸಂತಸದ ವಿಷಯ.
   – ರಮೇಶ್‌ ಕೆ. ಕೋಟ್ಯಾನ್‌, ಪ್ರ.ಕಾರ್ಯದರ್ಶಿ, 
ಜಿಲ್ಲಾ ಟ್ಯಾಕ್ಸಿಮನ್‌ ಅಸೋಸಿಯೇಶನ್‌

Advertisement

Udayavani is now on Telegram. Click here to join our channel and stay updated with the latest news.

Next