Advertisement

Feb.16ಕ್ಕೆ ರಾಜ್ಯ ಬಜೆಟ್‌; ಸಿದ್ಧತೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

11:11 AM Jan 30, 2024 | Team Udayavani |

ಬೆಂಗಳೂರು: ಗ್ಯಾರಂಟಿಗಳ ಭಾರದಲ್ಲಿ ಮುಳುಗಿರುವ ರಾಜ್ಯ ಸರ್ಕಾರ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮತ್ತೊಂದು ಜನಪ್ರಿಯ ಬಜೆಟ್‌ ನೀಡುತ್ತದೆಯೋ ಅಥವಾ ವಿತ್ತೀಯ ಶಿಸ್ತಿನ ಅನಿವಾರ್ಯತೆ ಪ್ರದರ್ಶಿಸಲಿದೆಯೋ ಎಂಬ ಕುತೂಹಲಕ್ಕೆ ಫೆಬ್ರವರಿ 16ರಂದು ಉತ್ತರ ಲಭಿಸುವ ನಿರೀಕ್ಷೆ ಇದ್ದು, ಸಿಎಂ ಸಿದ್ದರಾಮಯ್ಯ ಬಜೆಟ್‌ ಸಿದ್ಧತೆ ಪ್ರಾರಂಭಿಸಲಿದ್ದಾರೆ.

Advertisement

ಫೆ. 12ರಿಂದ ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನ ಪ್ರಾರಂಭಗೊಳ್ಳಲಿದೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಉಭಯ ಸದನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ನಾಲ್ಕು ದಿನಗಳ ಕಾಲ ವಂದನಾ ನಿರ್ಣಯದ ಬಗ್ಗೆ ಚರ್ಚೆ ನಡೆಯಲಿದ್ದು, ಫೆ.16 ಅಥವಾ 17ರಂದು ಸಿಎಂ ಸಿದ್ದರಾಮಯ್ಯನವರು ತಮ್ಮ 15ನೇ ಆಯವ್ಯಯವನ್ನು ಮಂಡಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಫೆ.12ರಿಂದ 23ರವರೆಗೆ ಅಧಿವೇಶನ ನಡೆಯುತ್ತದೆ. ಗ್ಯಾರಂಟಿಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಸುಮಾರು 75000 ಕೋಟಿ ರೂ. ವ್ಯಯವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಹೀಗಾಗಿ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇನ್ನಷ್ಟು ಜನಪ್ರಿಯ ಯೋಜನೆಗಳನ್ನು ಘೋಷಿಸುವುದಕ್ಕೆ ಸಿದ್ದರಾಮಯ್ಯ ಅವರಿಗೆ ಕಷ್ಟವಾಗಬಹುದು ಎಂದು ಹೇಳಲಾಗುತ್ತಿದೆ. ಕಳೆದ ಬಜೆಟ್‌ನಲ್ಲಿ ಘೋಷಿಸಿದ ಹಲವು ಯೋಜನೆಗಳು ಆಡಳಿತಾತ್ಮಕ ಆದೇಶಕ್ಕೆ ಮಾತ್ರ ಸೀಮಿತವಾಗಿರುವುದರಿಂದ ಸಿದ್ದರಾಮಯ್ಯನವರಿಗೆ ಈ ಬಾರಿಯ ಬಜೆಟ್‌ ಕೂಡಾ ಹಗ್ಗದ ಮೇಲಿನ ನಡಿಗೆಯಾಗಿ ಪರಿಣಮಿಸಿದೆ.

2023-24ನೇ ಸಾಲಿನಲ್ಲಿ 2,50,933 ಕೋಟಿ ರೂ.ರಾಜಸ್ವ ವೆಚ್ಚ, 54,374 ಕೋಟಿ ರೂ. ಬಂಡವಾಳ ವೆಚ್ಚ, 22,441 ಕೋಟಿ ರೂ. ಸಾಲದ ಮರುಪಾವತಿಯೂ ಒಳಗೊಂಡಂತೆ 3,27,747 ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಲಾಗಿತ್ತು. ಈ ಬಾರಿ ಬಜೆಟ್‌ ಗಾತ್ರ ಮೂರೂವರೆ ಲಕ್ಷ ಕೋಟಿ ರೂ.ಗೆ ತಲುಪಬಹುದು ಎಂದು ಅಂದಾಜಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next