Advertisement

ರಾಜ್ಯ ಬಜೆಟ್‌: ಗರಿಗೆದರಿವೆ ಕರಾವಳಿಯ ನಿರೀಕ್ಷೆಗಳು

10:20 AM Feb 26, 2020 | sudhir |

ಮಂಗಳೂರು: ರಾಜ್ಯ ಬಜೆಟ್‌ ಮಂಡನೆ ಸನ್ನಿಹಿತವಾಗುತ್ತಿದ್ದಂತೆ ಕರಾವಳಿಯಲ್ಲಿ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಹೊಸ ಯೋಜನೆ-ಕೊಡುಗೆಗಳ ಕಡೆಗೂ ಆಶಾವಾದ ಮೂಡಿವೆ.

Advertisement

ಈ ಹಿಂದಿನ ಬಜೆಟ್‌ನಲ್ಲಿ ನೀಡಿರುವ ಯೋಜನೆಗಳಲ್ಲಿ ಹಲವು ಕಾರ್ಯಗತಗೊಂಡಿಲ್ಲ. 2008ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಬಜೆಟ್‌ನಲ್ಲಿ ಘೋಷಿಸಿದ್ದ ಮೋನೋ ರೈಲು ಪ್ರಸ್ತಾವನೆ ಹಳ್ಳ ಹಿಡಿದಿದೆ. 2018ರಲ್ಲಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದ ಮಂಗಳೂರು ಹಳೇ ಬಂದರಿನಲ್ಲಿ 65 ಕೋ.ರೂ. ವೆಚ್ಚದಲ್ಲಿ ಕೋಸ್ಟಲ್‌ ಬರ್ತ್‌ ನಿರ್ಮಾಣ, ನೇತ್ರಾವತಿ ಮತ್ತು ಗುರುಪುರ ನದಿಗಳ ಆಯ್ದ ಕಡೆ ಹೌಸ್‌ಬೋಟ್‌ಗಳು, ಪ್ರತಿ ತಾಲೂಕಿನ ಸರಕಾರಿ ಆಸ್ಪತ್ರೆಗಳನ್ನು ಸೂಪರ್‌ಸ್ಪೆಷಾಲಿಟಿ ಆಗಿ ಉನ್ನತೀಕರಣ, ಪ್ರತಿ ಜಿಲ್ಲೆಯಲ್ಲಿ ಐಟಿ ಪಾರ್ಕ್‌, ಕೈಗಾರಿಕೆಗಳ ಸ್ಥಾಪನೆ ಪ್ರಸ್ತಾವನೆಯಾಗಿಯೇ ಉಳಿದಿದೆ.

2018ರಲ್ಲಿ ಕುಮಾರಸ್ವಾಮಿ ಸಿಎಂ ಆದಾಗ ಮತ್ತೆ ಬಜೆಟ್‌ ಮಂಡನೆಯಾಗಿದ್ದು, ಆಗ ಘೋಷಿಸಿದ್ದ ಬೆಂಗಳೂರು ಮಾದರಿಯ ಮೆಟ್ರೋ ಅನುಷ್ಠಾನದ ಬಗ್ಗೆ ಪೂರ್ವ ಕಾರ್ಯ ಸಾಧ್ಯತೆ ವರದಿ ತಯಾರಿ, ಮಂಗಳೂರು ಸೇರಿದಂತೆ ರಾಜ್ಯದ ಕೆಲವು ಕಡೆ ಮ್ಯಾಮೋಗ್ರಾಮ್‌ ಮತ್ತು ಪ್ಯಾಪ್‌ಸ್ಮಿಯರ್‌ ಸ್ಕ್ಯಾನಿಂಗ್‌, ಕೊಣಾಜೆ -ಮಣಿಪಾಲ ನಾಲೆಡ್ಜ್, ಹೆಲ್ತ್‌ ಕಾರಿಡಾರ್‌ ಕಾರ್ಯರೂಪಕ್ಕೆ ಬಂದಿಲ್ಲ. ನಾಲೆಡ್ಜ್, ಹೆಲ್ತ್‌ ಕಾರಿಡಾರ್‌ ಯೋಜನೆಯಲ್ಲಿ ಕಳೆದ ತಿಂಗಳು ಕಾರ್ಯಾಗಾರ ನಡೆದಿರುವುದು ಬಿಟ್ಟರೆ ಹೆಚ್ಚಿನ ಪ್ರಗತಿಯಾಗಿಲ್ಲ.

ಕರಾವಳಿಯ ನಿರೀಕ್ಷೆಗಳು
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇದನ್ನು ಬಳಸಿಕೊಳ್ಳುವುದಕ್ಕಾಗಿ ಬಜೆಟ್‌ನಲ್ಲಿ ಈ ಭಾಗಕ್ಕೆ ಸಮಗ್ರವಾದ ವಿಶೇಷ ಯೋಜನೆ ಅವಶ್ಯ. ಪೂರಕವಾಗಿ ಕರಾವಳಿಗೆ ವಿಶೇಷ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಬೇಕಿದೆ.

ರಬ್ಬರ್‌ ಮತ್ತು ಅಡಿಕೆ ಬೆಳೆಗಾರರಿಗೆ ಬೆಂಬಲ ಬೆಲೆ, ಅಡಿಕೆ ಹಳದಿ ರೋಗಕ್ಕೆ ಪರಿಹಾರಕ್ಕಾಗಿ ಪ್ರಯೋಗಾಲಯ ಸ್ಥಾಪನೆಯ ಬೇಡಿಕೆ ಹಲವಾರು ವರ್ಷಗಳದ್ದು. ಕರಾವಳಿ ಜಿಲ್ಲೆಗೆ ವಿಶೇಷ ಮರಳು ನೀತಿ, ಕೋಮು ಸಂಘರ್ಷ, ಹತ್ಯೆ ತಡೆಗೆ ವಿಶೇಷ ಕಾರ್ಯಪಡೆ ಮತ್ತು ವಿಶೇಷ ದಳಗಳ ರಚನೆ, ಉದ್ಯೋಗ ಸೃಷ್ಟಿಗೆ ಯೋಜನೆಗಳು, ಸೋಲಾರ್‌ ಪಾರ್ಕ್‌ಗಳ ಸ್ಥಾಪನೆ, ಮಂಗಳೂರಿನಲ್ಲಿ ಸಂಚಾರ ದಟ್ಟನೆ ನಿವಾರಣೆಗೆ ಬೆಂಗಳೂರು ಮಾದರಿಯ ಮೆಟ್ರೋ ಮುಂತಾದ ಬೇಡಿಕೆ ಹಲವಾರು ವರ್ಷಗಳಿಂದ ಇದೆ.

Advertisement

ದ.ಕ. ಜಿಲ್ಲೆ ಬೃಹತ್‌ ಬಂದರು, ರೈಲು -ವಾಯು ಸಂಪರ್ಕ, ಮೂರು ರಾಷ್ಟ್ರೀಯ ಹೆದ್ದಾರಿಗಳ ಸಹಿತ ಉದ್ದಿಮೆಗಳು ಮತ್ತು ಹೂಡಿಕೆಗೆ ಅವಶ್ಯ ಮೂಲಸೌಕರ್ಯಗಳನ್ನು ಹೊಂದಿದೆ. ಐಟಿ, ಆಹಾರ ಸಂಸ್ಕರಣೆ ಮತ್ತು ವಸ್ತ್ರೋದ್ಯಮ, ಪ್ರವಾಸೋದ್ಯಮಗಳಿಗೆ ಜಿಲ್ಲೆಯ ಪರಿಸರ ಮತ್ತು ಭೌಗೋಳಿಕ ಸನ್ನಿವೇಶ ಹೆಚ್ಚು ಸೂಕ್ತ. ಇದೇ ನೆಲೆಯಲ್ಲಿ ಜಿಲ್ಲೆಗೆ ಪ್ಲಾಸ್ಟಿಕ್‌ ಪಾರ್ಕ್‌, ಜವುಳಿ ಪಾರ್ಕ್‌, ಆಹಾರ ಸಂಸ್ಕರಣ ಉದ್ಯಮ ಪಾರ್ಕ್‌, ಐಟಿ ಪಾರ್ಕ್‌, ಔಷಧ ತಯಾರಿ ಪಾರ್ಕ್‌, ಆಟೋಮೊಬೈಲ್‌ ಪಾರ್ಕ್‌, ಸೋಲಾರ್‌ ಪಾರ್ಕ್‌ ಸ್ಥಾಪನೆ ಮುಂತಾದ ಯೋಜನೆಗಳನ್ನು ಪ್ರಸ್ತಾವಿಸಲಾಗಿತ್ತು. ಆದರೆ ಯಾವುವೂ ಕಾರ್ಯರೂಪಕ್ಕೆ ಬಂದಿಲ್ಲ.

ಮೂಲ ಸೌಕರ್ಯ, ಮೀನುಗಾರಿಕೆ, ಪಶ್ಚಿಮ ವಾಹಿನಿ, ಹೂಡಿಕೆಗಳಿಗೆ ಪೂರಕ ಯೋಜನೆಗಳು ಸೇರಿದಂತೆ ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಮುಂದಿನ ಬಜೆಟ್‌ನಲ್ಲಿ ಹೆಚ್ಚು ಅನುದಾನ ಮತ್ತು ಯೋಜನೆಗಳನ್ನು ನೀಡಬೇಕು ಎಂದು ಸಿಎಂಗೆ ಮನವಿ ಮಾಡಿದ್ದೇನೆ. ಪೂರಕವಾಗಿ ಸ್ಪಂದಿಸುವ ಭರವಸೆ ಇದೆ.
– ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next