ಉಡುಪಿ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಜೆಟ್‌ಗೂ ಕ್ಷಣಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಗಳ ಮಹಾಪೂರವೇ ಹರಿಯ ಬಹುದು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಿಂದಲೂ ಬಜೆಟ್ ನಿರೀಕ್ಷೆ ಸಾಕಷ್ಟಿವೆ.
ಉಡುಪಿ ಜಿಲ್ಲೆಗೊಂದು ಪೊಲೀಸ್ ತರಬೇತಿ ಅಕಾಡೆಮಿ ಆಗಬೇಕು ಎಂಬ ಬೇಡಿಕೆ ಸಾಕಷ್ಟು ವರ್ಷದಿಂದಲೂ ಇದೆ. ರಾಜ್ಯ ವಿಪತ್ತು ನಿರ್ವಹಣ ಘಟಕ (ಎಸ್‌ಡಿಆರ್‌ಎಫ್) ಉಡುಪಿ ಜಿಲ್ಲೆಯಲ್ಲಿ ಆರಂಭಿಸಬೇಕು ಎಂಬ ಆಗ್ರಹವೂ ಇದೆ. ಎಸ್‌ಡಿಆರ್‌ಎಫ್ಗೆ ಮಲ್ಪೆಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿ ದ್ದರೂ ಶಾಶ್ವತ ವ್ಯವಸ್ಥೆ ಆಗಿಲ್ಲ. ಕರಾವಳಿ ಯಲ್ಲಿ ಮಳೆಗಾಲದಲ್ಲಿ ಕಡಲ್ಕೊರತೆ ಹೆಚ್ಚಿರುತ್ತದೆ. ಇದಕ್ಕೊಂದು ಶಾಶ್ವತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಯೂ ಆಗಬೇಕಿದೆ ಎಂಬ ಬೇಡಿಕೆ ಇದೆ.
ಶಿವಳ್ಳಿ ಕೈಗಾರಿಕೆ ಪ್ರದೇಶ, ಮೀಯಾರು, ಬೆಳಪು, ನಂದಿಕೂರು ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಣೆ ಆಗಬೇಕು. ಕೈಗಾರಿಕೆ ಪ್ರದೇಶಗಳನ್ನು ಸಂದಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ಅಭಿವೃದ್ಧಿ ಮತ್ತು ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೂ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಕೈಗಾರಿಕೆಗೆ ಸಮಗ್ರ ಅಭಿವೃದ್ಧಿಗೆ ನಿರ್ದಿಷ್ಟ ಅನುದಾನ ಮೀಸಲಿಡಬೇಕು. ಬೈಂದೂರಿನಲ್ಲಿ ವಿಮಾನ ನಿಲ್ದಾಣದ ಪ್ರಸ್ತಾವನೆಗೆ ಜೀವ ತುಂಬಬೇಕಿದೆ. ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಮಾಡಲು ಎಲ್ಲ ವ್ಯವಸ್ಥೆಯಿದೆ, ಮೂಲ ಅನುದಾನದೊಂದಿಗೆ ಕಾಲೇಜು ಘೋಷಣೆ ಆಗಬೇಕು. ಸಕ್ಕರ ಕಾರ್ಖಾನೆಗೆ ಮರುಜೀವ ನೀಡಬೇಕು. ಮಣಿಪಾಲ, ಪಡುಬಿದ್ರಿ ಮೊದಲಾದ ಕಡೆಗಳಲ್ಲಿ ಅಗ್ನಿಶಾಮಕ ಘಟಕ ಸಹಿತ ಹಲವು ನಿರೀಕ್ಷೆಗಳಿವೆ.
ಮೀನುಗಾರಿಕೆಗೆ ಅನುಕೂಲ ವಾಗುವಂತೆ ಹೆಚ್ಚಿನ ಅನುದಾನದ ನಿರೀಕ್ಷೆಯಿದೆ. ಡೀಸೆಲ್, ಸೀಮೆಎಣ್ಣೆ ಪೂರೈಕೆ ವ್ಯತ್ಯಯವಾಗದಂತೆ ನೋಡಿ ಕೊಳ್ಳುವ ಜತೆಗೆ ವಿವಿಧೆಡೆ ಜೆಟ್ಟಿ ನಿರ್ಮಾಣ, ಬಂದರುಗಳ ಹೂಳೆತ್ತುವುದು ಸಹಿತವಾಗಿ ಸಮಗ್ರ ಅಭಿವೃದ್ಧಿ ಮತ್ತು ಜಿಲ್ಲೆ ಗೊಂದು ಶೀತಲೀಕರಣ ಘಟಕಕ್ಕೆ ವಿಶೇಷ ಅನುದಾನ ಒದಗಿಸುವ ಬಗ್ಗೆಯೂ ನಿರೀಕ್ಷೆ ಹೊಂದಲಾಗಿದೆ. ಕೃಷಿ, ತೋಟಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಸಮಗ್ರತೆಯ ಆಧಾರದಲ್ಲಿ ಕರಾವಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ, ಅದರಡಿ ಉಡುಪಿ ಜಿಲ್ಲೆಗೆ ನಿರ್ದಿಷ್ಟ ಪ್ರಮಾಣದ ಅನುದಾನ ಮೀಸಲಿಡಬೇಕು ಎಂಬ ಆಗ್ರಹವೂ ಇದೆ.
ನದಿಗಳ ಮಾಲಿನ್ಯ ತಪ್ಪಲಿ
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಸೂಕ್ತವಾದ ಯುಜಿಡಿ ವ್ಯವಸ್ಥೆಯಿಲ್ಲ. 330 ಕೋ.ರೂ. ವೆಚ್ಚದ ಪ್ರಸ್ತಾವನೆ ಸರಕಾರದ ಹಂತದಲ್ಲಿದೆ. ಅದ ಕ್ಕೊಂದು ಒಪ್ಪಿಗೆ ಸಿಕ್ಕರೆ ಉಡುಪಿ ನಗರದ ಯುಜಿಡಿ ಸಮಸ್ಯೆಗೆ ಮುಕ್ತಿ ಸಿಗಲಿದೆ ಮತ್ತು ನದಿ ಕಲುಷಿತವಾಗುವುದು ತಪ್ಪಲಿದೆ. ಸುಸಜ್ಜಿತ ಜಿಲ್ಲಾಸ್ಪತ್ರೆ ನಿರ್ಮಾಣ ವಾಗುತ್ತಿದೆ. ಆದರೆ ಸರಕಾರಿ ವೈದ್ಯಕೀಯ ಕಾಲೇಜು ಇಲ್ಲ. ಪಿಪಿಪಿ ಮಾದರಿ ಬದಲು ಪೂರ್ಣ ಪ್ರಮಾಣದ ಸರಕಾರ ಕಾಲೇಜು ಘೋಷಣೆ ಮಾಡಬೇಕು ಎಂಬ ಆಗ್ರಹ ಜನತೆಯದು.