ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಗಮನ ಸೆಳೆಯುವುದು ಪಾರಂಪರಿಕ ನಗರಿ ಮೈಸೂರು. ಪ್ರಭಾವಿಗಳು ಪ್ರತಿನಿಧಿಸುವ ಜಿಲ್ಲೆಯಲ್ಲಿ ಹಲವು ಬಜೆಟ್ ನಿರೀಕ್ಷೆಗಳು, ಯೋಜನೆಗಳ ಭರವಸೆಗಳು ಇದ್ದೇ ಇರುತ್ತವೆ. ಆದರೆ, ಪ್ರತಿ ಬಾರಿ ಒಂದಿಷ್ಟು ಅನುದಾನ ಘೋಷಿಸಿ, ಕೆಲ ಕಾರ್ಯಕ್ರಮ ರೂಪಿಸುವುದಷ್ಟೇ ಬಜೆಟ್ ಸೀಮಿತವಾಗಿರುತ್ತದೆ. ಈ ಬಾರಿ ಕೂಡ ಅದೇ ರೀತಿ ಆಗಿದೆ. ಆರೋಗ್ಯ ಕ್ಷೇತ್ರದಲ್ಲಿ 100 ಕೋಟಿ ವೆಚ್ಚದ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸೆ ಕೇಂದ್ರ, ಕಬಿನಿ ಡ್ಯಾಂ ಬೃಂದಾವನ ನಿರ್ಮಿಸಲು 50 ಕೋಟಿ ರೂ. ಬಿಟ್ಟರೆ ಹೇಳಿಕೊಳ್ಳುವಂತಹ ಕೊಡುಗೆ ಈ ಆಯವ್ಯಯದಲ್ಲಿ ಸಿಕ್ಕಿಲ್ಲ, ಪ್ರವಾಸೋದ್ಯಮ, ಕೈಗಾರಿಕೆ, ನೀರಾವರಿ, ಕೃಷಿ ಕ್ಷೇತ್ರ, ಸಾಂಸ್ಕೃತಿ ಕ್ಷೇತ್ರಗಳಲ್ಲಿ ಯೋಜನೆಗಳನ್ನು ರೂಪಿಸಿದರೆ ಉದ್ಯೋಗ ಸೃಷ್ಟಿಸಿ, ಆಗಾದ ಮಟ್ಟದಲ್ಲಿ ಆದಾಯ ಬರುತ್ತದೆ. ಅಂತಹ ದೂರದೃಷ್ಟಿ ಯೋಜನೆಗಳನ್ನು ಪ್ರಸ್ತಾಪಿಸಿಲ್ಲ.
ಮೈಸೂರು: ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೇ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಪ್ರವಾಸೋದ್ಯಮ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿರುವುದು ಜಿಲ್ಲೆಯ ಜನತೆಯಲ್ಲಿ ತುಸು ನೆಮ್ಮದಿ ತರಿಸಿದೆ.
ನಗರದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಆರಂಭಿಸುವುದು, ಮೈಸೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಒಟ್ಟು 5 ಕೋಟಿ ರೂ. ವೆಚ್ಚದಲ್ಲಿ ತುರ್ತು ಚಿಕಿತ್ಸಾ ಘಟಕ ಸ್ಥಾಪನೆ, ಕಾವೇರಿ ನೀರಾವರಿ ನಿಗಮದ ವತಿಯಿಂದ ಮೈಸೂರು ಜಿಲ್ಲೆಯ ಕಬಿನಿ ಅಣೆಕಟ್ಟಿನ ಕೆಳಭಾಗದಲ್ಲಿ 50 ಕೋಟಿ ರೂ.ವೆಚ್ಚದಲ್ಲಿ ಉದ್ಯಾನ (ಥೀಮ್ ಪಾರ್ಕ್) ಅಭಿವೃದ್ಧಿ, ಮೈಸೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಟ್ರಾಮಾ ಕೇರ್ ಕೇಂದ್ರ ಉದ್ಘಾಟನೆ, ಜಿಲ್ಲೆಯಲ್ಲಿ ಒಂದು ತಾತ್ಕಾಲಿಕ ವಸತಿ ಗೃಹ ಸೌಲಭ್ಯ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಹೊರವಲಯ ಪ್ರದೇಶವನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ವ್ಯಾಪ್ತಿಗೆ ಸೇರಿಸುವುದು, ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರ ಆರಂಭಿಸುವ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಮ್ಮ ಬಜೆಟ್‌ನಲ್ಲಿ ಸೋಮವಾರ ಘೋಷಿಸಿದ್ದಾರೆ.
ಹುಸಿಯಾದ ನಿರೀಕ್ಷೆ: ರಾಜ್ಯ ಬಜೆಟ್ ಮೇಲೆ ಜಿಲ್ಲೆಯ ಜನತೆ ಸಾಕಷ್ಟು ನಿರೀಕ್ಷೆ ಹೊಂದಿದ್ದು, ಜಿಲ್ಲೆ ಹಾಗೂ ಮೈಸೂರು ನಗರದ ಅಭಿವೃದ್ಧಿಗೆ ಸಾಕಷ್ಟು ಅನುದಾನನಿರೀಕ್ಷೆ ಮಾಡಲಾಗಿತ್ತು. ಆದರೆ, ಜಿಲ್ಲೆ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ದೊರೆಯದೆ ಇರುವುದು ಜನರಲ್ಲಿ ಬೇಸರ ತರಿಸಿದೆ.
ಪ್ರವಾಸೋದ್ಯಮವನ್ನೇ ಅವಲಂಬಿಸಿರುವ ಮೈಸೂರಿಗೆ ಕಬಿನಿ ಅಣೆಕಟ್ಟೆ ಕೆಳ ಭಾಗದಲ್ಲಿ ಉದ್ಯಾನ ನಿರ್ಮಾಣ ಬಿಟ್ಟರೆ ಮೈಸೂರು ಭಾಗದ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ. ಈಗಾಗಲೇ ಪ್ರವಾಹ, ಆರ್ಥಿಕ ಹಿಂಜರಿತ, ಕೋವಿಡ್ ವೈರಸ್‌ನಿಂದ ಪ್ರವಾಸೋದ್ಯಮ ನೆಲಕಚ್ಚಿದ್ದು, ಬಜೆಟ್‌ನಲ್ಲಿ ಉತ್ತಮ ಸ್ಪಂದನೆ ದೊರೆಯುವ ನಿರೀಕ್ಷೆಯನ್ನು ಜಿಲ್ಲೆಯ ಜನರು ಇಟ್ಟುಕೊಂಡಿದ್ದರು. ಜೊತೆಗೆ ಐದು ಜಿಲ್ಲೆಗಳನ್ನು ಒಳಗೊಂಡ ಪ್ರವಾಸೋದ್ಯಮ ಪ್ರಾಧಿಕಾರ ರಚನೆ, ಪ್ರವಾಸೋದ್ಯಮ ಅಭಿವೃದ್ಧಿಗೆ ರಾಯಭಾರಿ ನೇಮಿಸುವ ಬೇಡಿಕೆಯೂ ಇತ್ತು. ಆದರೆ ಈ ಎಲ್ಲಾ ಅಂಶಗಳನ್ನು ಸರ್ಕಾರ ಕಡೆಗಣಿಸಿದೆ.
ಈ ಬಾರಿಯೂ ಸರ್ಕಾರ ತನ್ನ ಬಜೆಟ್‌ನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸವದ ಆಚರಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ದಸರಾ ಅಭಿವೃದ್ಧಿ ಪ್ರಾಧಿಕಾರ ರಚನೆಯ ಬಗ್ಗೆ ಉಲ್ಲೇಖ ಮಾಡಿಲ್ಲ. ಅಲ್ಲದೇ ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಸಂಬಂಧ ಭೂಸ್ವಾಧೀನ ಪ್ರಕ್ರಿಯೆಗೆ ಹಣ ಮೀಸಲಿಡುವಂತೆ ಜಿಲ್ಲೆಯ
ಸಂಸದರು ಹಾಗೂ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿಲ್ಲ. ಕೆಆರ್‌ಎಸ್‌ನಲ್ಲಿರುವ ಬೃಂದಾವನ ಉದ್ಯಾನದ ಮಾದರಿ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾ ಶಯದಲ್ಲೂ ಉದ್ಯಾನ ನಿರ್ಮಾಣ ಮಾಡಲು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಕಬಿನಿ ಅಣೆಕಟ್ಟೆ ಕೆಳ ಭಾಗದಲ್ಲಿ 50 ಕೋಟಿ ರೂ.ವೆಚ್ಚದಲ್ಲಿ ಉದ್ಯಾನ ನಿರ್ಮಾಣ ಮಾಡುವ ಸಂಬಂಧ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಇದು ಸಹಜವಾಗಿಯೇ ಮೈಸೂರು ಭಾಗದ ಪ್ರವಾಸೋದ್ಯಮಕ್ಕೆ ಕೊಂಚ ಪ್ರಮಾಣದಲ್ಲಿ ಪ್ರಯೋಜನವಾಗಲಿದೆ. ಜೊತೆಗೆ ಎಚ್.ಡಿ.ಕೋಟೆ ತಾಲೂಕು ಅಭಿ ವೃದ್ಧಿಗೆ ಆಶಾದಾಯಕವಾಗಿದೆ.
ಪರ್ವ ಪ್ರದರ್ಶನಕ್ಕೆ ಅನುದಾನ:
ಮೈಸೂರು ರಂಗಾಯಣವು ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ “ಪರ್ವ’ ಕಾದಂಬರಿಯನ್ನುರಂಗರೂಪ ಗೊಳಿಸಿದ್ದು, ರಾಜ್ಯದ ಎಲ್ಲಭಾಗಗಳಲ್ಲೂ ನಾಟಕ ಪ್ರದರ್ಶನಕ್ಕೆ ರಾಜ್ಯ ಸರ್ಕಾರ 1 ಕೋಟಿ ರೂ. ಅನುದಾನ ಮೀಸಲಿರಿಸಿದೆ.
ಹುಸಿಯಾದ ನಿರೀಕ್ಷೆ ಗಳು :
- ಕೆ.ಆರ್. ನಗರ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಒತ್ತು
- ಹೆಲಿ ಟೂರಿಸಂ, ಬೆಟ್ಟಕ್ಕೆ ರೂಫ್ ವೇ
- ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ
- ಪ್ರತ್ಯೇಕ ಜಲಮಂಡಳಿ ರಚನೆ
- ಬೃಹತ್ ಮೈಸೂರು ಮಹಾನಗರ ಪಾಲಿಕೆ
- ಮೈಸೂರಲ್ಲೇ ಫಿಲ್ಮ್ ಸಿಟಿ
- ದಸರಾ ಪ್ರಾಧಿಕಾರ ರಚನೆ
- ಪಾರಂಪರಿಕ ಕಟ್ಟಡ ರಕ್ಷಣೆಗಳಿಗೆ ಒತ್ತು
ಜಿಲ್ಲೆಗೆ ಸಿಕ್ಕಿದ್ದು :
- ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಡ್ಯಾಂ ಬಳಿ 50 ಕೋಟಿ ರೂ. ವೆಚ್ಚದಲ್ಲಿ ಉದ್ಯಾನ ನಿರ್ಮಾಣ
- ಮೈಸೂರು ರಂಗಾಯಣ ಪ್ರಸ್ತುತ ಪಡಿಸುತ್ತಿರುವ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರ “ಪರ್ವ’ ನಾಟಕದ ಪ್ರದರ್ಶನವನ್ನು ರಾಜ್ಯಾದ್ಯಂತ ಪ್ರದರ್ಶಿಸಲು 1 ಕೋಟಿ ರೂ.ಘೋಷಣೆ
- ತುರ್ತು ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಮೈಸೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಟ್ರಾಮಾ ಕೇರ್ ಕೇಂದ್ರದ ಲೋಕಾರ್ಪಣೆ
- ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸುಸಜ್ಜಿತ ತಾತ್ಕಾಲಿಕ ವಸತಿ ಗೃಹ ನಿರ್ಮಾಣ
- ಭಾರತೀಯ ವೈದ್ಯಕೀಯ ಪರಿಷತ್ತಿನ ನಿಯಮಾವಳಿಗಳನ್ವಯ 2021-22ನೇ ಸಾಲಿನಲ್ಲಿ ಬೆಂಗಳೂರು, ಮೈಸೂರು, ಬಳ್ಳಾರಿ ಮತ್ತು ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಒಟ್ಟು 5 ಕೋಟಿ ರೂ. ವೆಚ್ಚದಲ್ಲಿ ತುರ್ತು ಚಿಕಿತ್ಸಾ ವಿಭಾಗ ಘೋಷಣೆ
- ಕಾನ್ಸರ್ ರೋಗಿಗಳಿಗೆ ಸಮೀಪದಲ್ಲೇ ಸಕಾಲಿಕ, ಮಿತವ್ಯಯದಾಯಕ ಚಿಕಿತ್ಸೆಒದಗಿಸಲು ಮೈಸೂರು ಮತ್ತುಶಿವಮೊಗ್ಗದಲ್ಲಿ 100 ಕೋಟಿ ರೂ.ವ್ಯಚ್ಚದಲ್ಲಿ ಕಿದ್ವಾಯಿ ಸಂಸ್ಥೆ ಮಾದರಿಯ ಪ್ರಾದೇಶಿಕೆ ಕಾನ್ಸರ್ ಚಿಕಿತ್ಸಾ ಕೇಂದ್ರ
- ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರಗಳ ಕಾರ್ಯಾರಂಭ
ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ :
ಕಾನ್ಸರ್ ರೋಗಿಗಳಿಗೆ ಸಮೀಪದಲ್ಲೇ ಸಕಾಲಿಕ, ಮಿತವ್ಯಯದಾಯಕ ಚಿಕಿತ್ಸೆ ಒದಗಿಸಲು ಮೈಸೂರು ಮತ್ತು ಶಿವಮೊಗ್ಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಸಂಸ್ಥೆ ಮಾದರಿಯ ಪ್ರಾದೇಶಿಕ ಕಾನ್ಸರ್ ಚಿಕಿತ್ಸಾ ಕೇಂದ್ರವನ್ನುಪ್ರಾರಂಭಿಸುವ ಸಂಬಂಧ ಘೋಷಣೆ ಮಾಡಲಾಗಿದೆ. ಇದು ಮೈಸೂರು ಭಾಗದಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಯ ಜನರಿಗೆಅನುಕೂಲವಾಗಲಿದೆ. ಬಡ ರೋಗಿಗಳು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆಹೋಗುವುದು ತಪ್ಪಲಿದೆ. ಉಳಿದಂತೆ ಭಾರತೀಯ ವೈದ್ಯಕೀಯ ಪರಿಷತ್ತಿನನಿಯಮಾವಳಿಗಳನ್ವಯ 2021-22ನೇ ಸಾಲಿನಲ್ಲಿ ಬೆಂಗಳೂರು, ಮೈಸೂರು, ಬಳ್ಳಾರಿ ಮತ್ತು ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಒಟ್ಟು 5 ಕೋಟಿ ರೂ. ವೆಚ್ಚದಲ್ಲಿ ತುರ್ತು ಚಿಕಿತ್ಸಾ ವಿಭಾಗ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆಸುಸಜ್ಜಿತವಾದ ತಾತ್ಕಾಲಿಕ ವಸತಿ ಗೃಹ ನಿರ್ಮಾಣ ಘೋಷಣೆ ಮಾಡಲಾಗಿದೆ. ತುರ್ತು ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಮೈಸೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಟ್ರಾಮಾ ಕೇರ್ ಕೇಂದ್ರದ ಲೋಕಾರ್ಪಣೆ ಹಾಗೂ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರಗಳ ಕಾರ್ಯಾರಂಭ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿರುವುದು ಜಿಲ್ಲೆಯ ಜನತೆಯಲ್ಲಿ ತುಸು ನೆಮ್ಮದಿ ತರಿಸಿದೆ.
– ಸತೀಶ್ ದೇಪುರ