ಕಲಬುರಗಿ: ಪ್ರಸಕ್ತ 2020-21ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಕ್ಕೆ 171 ಕೋ ರೂ ಅನುದಾನ ನೀಡಲಾಗಿದೆ ಎಂದು ನಿಗಮದ ಅಧ್ಯಕ್ಷರಾದ ಶಶಿಕಲಾ ಟೆಂಗಳಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಯೋಜನೆಗಳ ಮುಂದುವರಿಕೆ ಜತೆಗೆ ಹೊಸ ಹೊಸ ಕಾರ್ಯಕ್ರಮಗಳನ್ನು ಮುಂದುವರೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸದರು.
ನಿಗಮದ ಯೋಜನೆಗಳ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆಯಲ್ಲದೇ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನರಿಗೆ ನಿಗಮದ ಯೋಜನೆಗಳನ್ನು ಮುಟ್ಟಿಸಲು ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಅರ್ಹ ಫಲಾನುಭವಿಗಳನ್ನು ನೇರವಾಗಿ ಗುರ್ತಿಸಿ, ನೇರವಾಗಿ ಸಾಲ ಹಾಗೂ ಸಬ್ಸಿಡಿ ಯನ್ನು ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದು ಟೆಂಗಳಿ ವಿವರಣೆ ನೀಡಿದರು.
1987ರಲ್ಲಿ ಸ್ಥಾಪನೆಯಾಗಿರುವ ನಿಗಮಕ್ಕೆ ಇಲ್ಲಿಯವರೆಗೆ ಕಲ್ಯಾಣ ಕರ್ನಾಟಕದ ಭಾಗದಿಂದ ಅಧ್ಯಕ್ಷ ರ್ಯಾರು ಆಗಿರಲಿಲ್ಲ. ಆದರೆ ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳು ತಮ್ಮನ್ನು ಗುರುತಿಸಿ ಸ್ಥಾನ ಕಲ್ಪಿಸಿದ್ದಾರೆ. ಹೀಗಾಗಿ ನಿಗಮದ ಕಚೇರಿಯಲ್ಲಿ ಕೂರದೇ ರಾಜ್ಯದಾದ್ಯಂತ ಸಂಚರಿಸಿ ನಿಗಮದಿಂದ ಇರುವ ಯೋಜನೆಗಳ ಕುರಿತಾಗಿ ಮಹಿಳೆಯರಿಗೆ ಮನವರಿಕೆ ಮಾಡಿಕೊಡುವ ಜತೆಗೆ ಇಲ್ಲಿಯವರೆಗೆ ಮಹಿಳೆಯರಿಗೆ ಯಾವ ನಿಟ್ಟಿನಲ್ಲಿ ಯೋಜನೆಗಳು ತಲುಪಿವೆ ಎಂಬುದನ್ನಿ ಅವಲೋಕಿಸಲಾಗುತ್ತಿದೆ. ಒಟ್ಟಾರೆ ನಿಗಮದ ಯೋಜನೆಗಳು ಜನರಿಗೆ ತಲುಪಿಸಲು ಹತ್ತಾರು ಕ್ರಮಗಳನ್ನು ರೂಪಿಸಲಾಗಿದೆ ಎಂದು ಟೆಂಗಳಿ ಸ್ಪಷ್ಟಪಡಿಸಿದರು.
ದೇವದಾಸಿ ಪುನರ್ವಸತಿ ಕಲ್ಪಿಸಲು ಯೋಜನೆಗಳನ್ನು ಮತ್ತಷ್ಟು ವಿಸ್ತರಿಸಲು ದೇವದಾಸಿಯರ ಪುನರ್ ಸಮೀಕ್ಷೆ ಕೈಗೆತ್ತಿಕೊಳ್ಳಲಾಗಿದೆ. ಮಾಸಾಶನ 1500 ರೂ ಇರುವುದನ್ನು 2000 ರೂ ಹೆಚ್ಚಿಸಿ ನಿಗಮದದ ನೇರವಾಗಿ ವಿತರಿಸಲಾಗುತ್ತಿದೆ. ಮಹಿಳೆಯರು ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಲು ಹೊಲಿಗೆ ತರಬೇತಿ. ಕಿರಾಣಿ ಅಂಗಡಿ ನಡೆಸಲು, ಹೈನುಗಾರಿಕೆ, ಕುರಿ ಸಾಕಾಣಿಕೆ ಸೇರಿದಂತೆ ಇತರ ಕಾರ್ಯ ಕೈಗೊಳ್ಳಲು ನಿಗಮದ ವಿವಿಧ ಯೋಜನೆ ಅಡಿ 10 ಸಾವಿರ ರೂ.ದಿಂದ ಲಕ್ಷವರೆಗೂ ಹಾಗೂ ಸಂಘಕ್ಕೆ 20 ಲಕ್ಷ ವರೆಗೂ ಸಬ್ಸಿಡಿ ಹಾಗೂ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಹೇಳಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್ ಸೇರಿದಂತೆ ಮುಂತಾದವರಿದ್ದರು.