ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಾಜಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ಗೆ ವಿಜಯೇಂದ್ರ ಸಾರಥ್ಯದ ರಾಜ್ಯ ಬಿಜೆಪಿ ಪಾಳೆಯಲ್ಲಿ ಹೆಚ್ಚು ಬಲ ಸಿಗುತ್ತಾ? ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸುಧಾಕರ್‌ಗೆ ಸುಲಭವಾಗಿ ಟಿಕೆಟ್ ಕೈಗೆಟುಕುತ್ತಾ? ಸುಧಾಕರ್‌ಗೆ ಪಕ್ಷ ಸಂಘಟನೆಗೆ ಉನ್ನತ ಹುದ್ದೆ ಸಿಗುತ್ತಾ?.
ಹೌದು, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಬಿಜೆಪಿಗೆ ನೂತನ ಸಾರಥಿಯಾಗಿ ಯುವ ಶಾಸಕರಾದ ಬಿ.ವೈ.ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವ ಬಿಜೆಪಿ ವರಿಷ್ಠರ ನಡೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬೆನ್ನಲೇ ಸುಧಾಕರ್‌ಗೆ ಪಕ್ಷದಲ್ಲಿ ಸಿಗುವ ಬಲಾಬಲದ ಬಗ್ಗೆಯು ಜಿಲ್ಲೆಯ ರಾಜಕಾರಣದಲ್ಲಿ ಚರ್ಚೆ ಶುರುವಾಗಿದೆ.
ಬಿಎಸ್‌ವೈ ಸಿಎಂ ಮಾಡುವಲ್ಲಿ ಪ್ರಮುಖ ಪಾತ್ರ: ರಾಜ್ಯದಲ್ಲಿ 2019 ರಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಮಹಾ ಪತನಕ್ಕೆ ಕಾರಣವಾಗಿದ್ದರಲ್ಲದೇ, ಆಪರೇಷನ್ ಕಮಲದ ಮೂಲಕ 17 ಮಂದಿ ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿ ಸೇರಿ ಮೂರನೇ ಬಾರಿಗೆ ಬಿ.ಎಸ್.ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ.ಕೆ. ಸುಧಾಕರ್, ರಾಜ್ಯದ ಪ್ರಭಾವಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದು, ಬಳಿಕ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಸೋತಿದ್ದು ಈಗ ಇತಿಹಾಸವಾದರೂ, ಮುಂದಿನ ತಮ್ಮ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸುಧಾಕರ್‌ಗೆ ವಿಜಯೇಂದ್ರ ಸಾರಥ್ಯ ವರ ಆಗುತ್ತಾ ಎನ್ನುವ ಚರ್ಚೆ ಕ್ಷೇತ್ರದ ರಾಜಕೀಯ ವಲಯದಲ್ಲಿ ಮುನ್ನೆಲೆಗೆ ಬಂದಿದೆ.
ಉತ್ತಮ ಒಡನಾಟ, ಸ್ನೇಹ : ಬಿಜೆಪಿ ವರಿಷ್ಠರು ಸಾಕಷ್ಟು ಅಳೆದು ತೂಗಿ ಲಿಂಗಾಯತ ಮತ ಬುಟ್ಟಿ ಹೊಡೆಯದಂತೆ ಮತ್ತೆ ಯಡಿಯೂರಪ್ಪ ಬಿಜೆಪಿಗೆ ಅನಿರ್ವಾಯ ಎನ್ನುವಂತೆ ಬಿಎಸ್‌ವೈ ಪುತ್ರನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಣೆ ಹಾಕಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಡಾ.ಕೆ.ಸುಧಾಕರ್‌ಗೆ ವಿಜಯೇಂದ್ರ ನೇಮಕ ಮುಂದಿನ ರಾಜಕೀಯ ಭವಿಷ್ಯ ಭದ್ರಪಡಿಸಿಕೊಳ್ಳಲು ಹೆಚ್ಚು ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೇಳಿ ಕೇಳಿ ವಿಜಯೇಂದ್ರ ಇನ್ನೂ ಯುವಕರಾಗಿದ್ದು ಸುಧಾಕರ್ ಅವರೊಂದಿಗೆ ಉತ್ತಮ ಒಡನಾಟ, ಸ್ನೇಹ ಹೊಂದಿದ್ದಾರೆ. ವಿಜಯೇಂದ್ರ ನೇಮಕ ಜಿಲ್ಲೆಯ ರಾಜಕಾರಣದ ಮೇಲೆ ಅಷ್ಟೊಂದು ದೊಡ್ಡ ಪರಿಣಾಮ ಬೀರುವುದಿಲ್ಲ ಎಂದರೂ ಸುಧಾಕರ್ ರಾಜಕೀಯ ಭವಿಷ್ಯದ ದೃಷ್ಠಿಯಿಂದ ವಿಜಯೇಂದ್ರ ನೇಮಕ ಸುಧಾಕರ್ ಕೈ ಹಿಡಲಿದೆ.
ಲೋಕಸಭೆ ಟಿಕೆಟ್ ಸಿಗುವುದು ಸಲೀಸು?: ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ರಾಜಕೀಯವಾಗಿ ಕಂಗೆಟ್ಟಿರುವ ಸುಧಾಕರ್‌ಗೆ ಮುಂದಿನ ಲೋಕಸಬಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ. ಈಗಾಗಲೇ ಇದಕ್ಕೆ ಬೇಕಾದ ಎಲ್ಲಾ ರೀತಿಯ ಪೂರ್ವ ತಯಾರಿಯನ್ನು ಕ್ಷೇತ್ರದಲ್ಲಿ ಸದ್ದಿಲ್ಲದೇ ನಡೆಸುತ್ತಿದ್ದಾರೆ. ಈಗಾಗಲೇ ಹಾಲಿ ಸಂಸದ ಬಿ.ಎನ್.ಬಚ್ಚೇಗೌಡ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಹಿನ್ನಲೆಯಲ್ಲಿ ಸುಧಾಕರ್ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಪಕ್ಷದೊಳಗೆ ಸಂಘ ನಿಷ್ಠರು ಡಾ.ಕೆ.ಸುಧಾಕರ್‌ಗೆ ಟಿಕೆಟ್ ಕೊಡುವ ಮನಸ್ಸು ಹೊಂದಿಲ್ಲ ಎನ್ನಲಾಗುತ್ತಿದೆ.
ಲೋಕಸಭಾ ಟಿಕೆಟ್‌ಗಾಗಿ ಸುಧಾಕರ್ ಶತ ಪ್ರಯತ್ನ ಕೂಡ ಮಾಡಬೇಕಿತ್ತು. ಆದರೆ ಈಗ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವುದರಿಂದ ಟಿಕೆಟ್ ಕೊಡುವ ವಿಚಾರದಲ್ಲಿ ಯಡಿಯೂರಪ್ಪ ಕೂಡ ನಿರ್ಣಾಯಕ ಪಾತ್ರ ವಹಿಸುವುದರಿಂದ ಸುಧಾಕರ್‌ಗೆ ಮುಂದಿನ ಲೋಕಸಭಾ ಚುನಾವಣೆಯ ಟಿಕೆಟ್ ಸುಲಭವಾಗಿ ಸಿಗುವುದು ಸಲೀಸು ಎನ್ನುವ ಮಾತು ಕೇಳಿ ಸಹ ಬರುತ್ತಿದೆ.
ಸುಧಾಕರ್‌ಗೆ ಸಿಗುವುದೇ ಪಕ್ಷ ಸಂಘಟನೆ ಹೊಣೆ: ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿ ರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಪಕ್ಷ ಸಂಘಟನೆಗಾಗಿ ರಾಜ್ಯ ಘಟಕ ಪುನರ್ ರಚನೆ ಆಗುವ ಸಾಧ್ಯತೆ ಕೂಡ ದಟ್ಟವಾಗಿದೆ. ಈ ಹಿನ್ನಲೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಒಕ್ಕಲಿಗ ಅಥವ ಹಿಂದುಳಿದ ವರ್ಗಕ್ಕೆ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಬಲಹೀನವಾಗಿರುವ ಪಕ್ಷ ಸಂಘಟನೆಯನ್ನು ಬಲಗೊಳಿಸಲು ಮಾಜಿ ಸಚಿವ ಡಾ.ಕೆ.ಸುಧಾಕರ್‌ಗೆ ರಾಜ್ಯ ಮಟ್ಟದಲ್ಲಿ ಪಕ್ಷ ಸಂಘಟನೆಯ ಹೊಸ ಜವಾಬ್ದಾರಿ ಸಿಗುವ ಬಗ್ಗೆಯು ಬಿಜೆಪಿ ವಲಯದಲ್ಲಿ ಚರ್ಚೆ ಆಗುತ್ತಿದೆ.
– ಕಾಗತಿ ನಾಗರಾಜಪ್ಪ