Advertisement

ಸ್ಟೇಟ್ ಬ್ಯಾಂಕ್‌: ಏಕಮುಖ ಸಂಚಾರಕ್ಕೆ ಚಿಂತನೆ 

10:09 AM Dec 19, 2018 | Team Udayavani |

ಮಹಾನಗರ:  ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ಸ್ಟೇಟ್‌ಬ್ಯಾಂಕ್‌ನ ಎ.ಬಿ. ಶೆಟ್ಟಿ ವೃತ್ತದಿಂದ ಕ್ಲಾಕ್‌ ಟವರ್‌ ವರೆಗೆ ‘ಸ್ಮಾರ್ಟ್‌ ರೋಡ್‌’ ನಿರ್ಮಾ ಣದ ಹಿನ್ನೆಲೆಯಲ್ಲಿ, ಈ ರಸ್ತೆಯನ್ನು ಸಂಪೂರ್ಣವಾಗಿ ಏಕಮುಖ (ಒನ್‌ ವೇ) ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸುವ ಹೊಸ ಪ್ರಸ್ತಾವನೆ ಜಿಲ್ಲಾಡಳಿತದಲ್ಲಿ ಸಿದ್ಧಗೊಂಡಿದೆ. ಆದರೆ, ಈ ರಸ್ತೆಯನ್ನು ಒನ್‌ ವೇ ಮಾಡುವುದರಿಂದ ಸಾರ್ವಜನಿಕರಿಗೆ ಆಗುವ ಅನುಕೂಲ ಅಥವಾ ಅನನುಕೂಲದ ಬಗ್ಗೆ ತಜ್ಞರಿಂದ ಅಧ್ಯಯನ ವರದಿ ಸಿದ್ಧಪಡಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಆ ಬಳಿಕ ಅಂತಿಮ ತೀರ್ಮಾನವಾಗಲಿದೆ.

Advertisement

ಕ್ಲಾಕ್‌ ಟವರ್‌ನಿಂದ ಎ.ಬಿ. ಶೆಟ್ಟಿ ಸರ್ಕಲ್‌ ಹಾಗೂ ಸ್ಟೇಟ್‌ಬ್ಯಾಂಕ್‌ನ ಹ್ಯಾಮಿಲ್ಟನ್‌ ಸರ್ಕಲ್‌ವರೆಗೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕೊಟ್ಟು, ಪಾಂಡೇಶ್ವರ ಭಾಗದಿಂದ ಹಂಪನಕಟ್ಟೆಗೆ ಬರುವ ವಾಹನಗಳು ಎಡಕ್ಕೆ ತಿರುಗಿ ಪೊಲೀಸ್‌ ಕಮಿಷನರ್‌ ಕಚೇರಿ ಮುಂಭಾಗದಿಂದ ಸಾಗಿ ಸರ್ವಿಸ್‌/ಸಿಟಿ ಬಸ್‌ನಿಲ್ದಾಣ ವ್ಯಾಪ್ತಿಯಲ್ಲಿ ಬಂದು, ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ ಆಗಿ, ಲೇಡಿಗೋಷನ್‌ ಮುಂಭಾಗದಿಂದ ಕ್ಲಾಕ್‌ ಟವರ್‌ ಭಾಗವನ್ನು ಸೇರಿಕೊಳ್ಳಬಹುದು ಎಂಬ ಲೆಕ್ಕಾಚಾರವಿರಿಸಿಕೊಂಡು ಹೊಸ ಪ್ಲ್ರಾನ್‌ ಮಾಡಲಾಗುತ್ತಿದೆ. ಇದಕ್ಕಾಗಿ ಸ್ಮಾರ್ಟ್  ಸಿಟಿಯ ಕನ್ಸಲ್ಟೆಂಟ್‌ ಸಂಸ್ಥೆ ಹಾಗೂ ಇತರ ತಜ್ಞರ ಅಭಿಪ್ರಾಯಗಳನ್ನು ಆಲಿಸಿಕೊಂಡು ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ.

ಡಿವೈಡರ್‌ ಕೂಡ ಇರಲ್ಲ
ಸದ್ಯ ಕ್ಲಾಕ್‌ಟವರ್‌ನಿಂದ ಎ.ಬಿ. ಶೆಟ್ಟಿ ರಸ್ತೆಯವರೆಗೆ ದ್ವಿಪಥ ಸಂಚಾರವಿರುವ ಕಾರಣದಿಂದ ಡಿವೈಡರ್‌ ವ್ಯವಸ್ಥೆಯಿದೆ. ಆದರೆ, ಪ್ರಸ್ತಾವಿತ ಯೋಜನೆಯಂತೆ ಏಕ ಮುಖ ಮಾಡಿದರೆ ಇಲ್ಲಿನ ಡಿವೈಡರ್‌ ಅನ್ನು ಕೂಡ ತೆರವು ಮಾಡುವ ಬಗ್ಗೆ ಯೋಚನೆಯಿದೆ. ಜತೆಗೆ ಎರಡೂ ಭಾಗದಲ್ಲಿ ಹೆಚ್ಚುವರಿಯಾಗಿ ಪಾದಚಾರಿಗಳಿಗೆ ಆರಾಮವಾಗಿ ನಡೆದುಕೊಂಡು ಹೋಗಲು ಹಾಗೂ ಸ್ಮಾರ್ಟ್‌ರೋಡ್‌ನ‌ಲ್ಲಿ ವಿಹರಿಸಲು ಸೂಕ್ತ ಸ್ಥಳಾವಕಾಶ ಕಲ್ಪಿಸುವ ಯೋಚನೆಯಿದೆ. ಆರ್‌ಟಿಓ ಕಚೇರಿ ಮುಂಭಾಗದ ಈಗಿನ ಬಸ್‌ನಿಲ್ದಾಣವು ಸ್ಮಾರ್ಟ್‌ ಬಸ್‌ ನಿಲ್ದಾಣವಾಗುವಾಗ, ಬಸ್‌ ನಿಲುಗಡೆಗೆ ಹೆಚ್ಚಿನ ಸ್ಥಳಾವಕಾಶ ದೊರೆಯಲಿದೆ ಎಂಬುದು ಈಗಿನ ಲೆಕ್ಕಾಚಾರ.

ಕ್ಲಾಕ್‌ ಟವರ್‌ಗೆ ಹೊಸ ಅವಕಾಶ
ಈಗಿನ ಕ್ಲಾಕ್‌ ಟವರ್‌ ನಿರ್ಮಾಣದಿಂದಾಗಿ ಹಂಪನಕಟ್ಟ ವ್ಯಾಪ್ತಿ ಯಲ್ಲಿ ಸಂಚಾರದಟ್ಟಣೆ ಮತ್ತೆ ಮುಂದುವರಿ ಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.  ಸಂಚಾರಕ್ಕೆ ಅನನುಕೂಲ ವಾಗಲಿದೆ ಎಂದು ಟ್ರಾಫಿಕ್‌ ಪೊಲೀಸರು ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಕ್ಲಾಕ್‌ಟವರ್‌ ಹಾಗೂ ಎ.ಬಿ.ಶೆಟ್ಟಿ ವೃತ್ತದವರೆಗೆ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ, ಕ್ಲಾಕ್‌ ಟವರ್‌ ಅನ್ನು ಇನ್ನಷ್ಟು ವಿಸ್ತಾರವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ. ಕ್ಲಾಕ್‌ಟವರ್‌ ಮುಂಭಾಗದಲ್ಲಿರುವ ಪಾರ್ಕ್‌ಗೆ ಸಂಪರ್ಕ ಕಲ್ಪಿಸುವ ಮಾದರಿಯಲ್ಲಿ ಕ್ಲಾಕ್‌ ಟವರ್‌ ಅವರನ್ನು ಅಭಿವೃದ್ಧಿಪಡಿಸುವ ಯೋಚನೆಯಿದೆ. ಆರ್‌ಟಿಓ ಮುಂಭಾಗದಿಂದ ಕ್ಲಾಕ್‌ಟವರ್‌ ಭಾಗಕ್ಕೆ ವಾಹನಗಳ ಸಂಚಾರ ಸ್ಥಗಿತಗೊಳ್ಳುವ ಕಾರಣದಿಂದ ಕ್ಲಾಕ್‌ ಟವರ್‌ ಹಾಗೂ ಪಾರ್ಕ್‌ ಮಧ್ಯೆ ಸುಂದರ ಉದ್ಯಾನವನ ನಿರ್ಮಿಸುವ ಯೋಚನೆ ಜಿಲ್ಲಾಡಳಿತದ್ದು.

ಸಂಚಾರಕ್ಕೆ ಅನುಕೂಲ
ಸ್ಮಾರ್ಟ್‌ಸಿಟಿ ನಿರ್ದೇಶಕರಾದ ಎಂ.ಶಶಿಧರ ಹೆಗ್ಡೆ ‘ಸುದಿನ’ ಜತೆಗೆ ಮಾತನಾಡಿ, ಸ್ಟೇಟ್‌ಬ್ಯಾಂಕ್‌ ವ್ಯಾಪ್ತಿಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಸಂಚಾರ ವ್ಯವಸ್ಥೆಯಲ್ಲಿ ಇನ್ನಷ್ಟು ಅಮೂಲಾಗ್ರ ಬದಲಾವಣೆ ನಿರೀಕ್ಷಿಸಬಹುದು. ಜಿಲ್ಲಾಧಿಕಾರಿಗಳು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ್ದಾರೆ ಎಂದರು.

Advertisement

ಅಧ್ಯಯನ ನಡೆಯುತ್ತಿದೆ
ಇನ್ನೊರ್ವ ನಿರ್ದೇಶಕರಾದ ಪ್ರೇಮಾನಂದ ಶೆಟ್ಟಿ ಮಾತನಾಡಿ, ಕ್ಲಾಕ್‌ಟವರ್‌ನಿಂದ ಎ.ಬಿ.ಶೆಟ್ಟಿ ವೃತ್ತ ಹಾಗೂ ಅಲ್ಲಿಂದ ಹ್ಯಾಮಿಲ್ಟನ್‌ ಸರ್ಕಲ್‌ವರೆಗೆ ಈಗ ದ್ವಿಮುಖ ಸಂಚಾರಕ್ಕೆ ಅವಕಾಶವಿದೆ. ಜಿಲ್ಲಾಧಿಕಾರಿಯವರ ಯೋಚನೆಯ ಪ್ರಕಾರ ಈ ಎಲ್ಲಾ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂಬುದಾಗಿದೆ. ಈ ಬಗ್ಗೆ ಅಧ್ಯಯನ ನಡೆಯುತ್ತಿದೆ. ಇದು ಸಾಧ್ಯವಾದರೆ ಯಶಸ್ವಿಯಾಗಬಹುದು ಎನ್ನುತ್ತಾರೆ.

ವಾಹನ ಸಂಚಾರಕ್ಕೆ ಸಮಸ್ಯೆ
ಆರ್‌ಟಿಓ ಕಚೇರಿ ಮುಂಭಾಗದಲ್ಲಿ ಏಕಮುಖ ಸಂಚಾರ ಮಾಡಿದರೆ, ಅಲ್ಲಿಂದ ಹಂಪನಕಟ್ಟೆ ವ್ಯಾಪ್ತಿಗೆ ಬರುವ ವಾಹನಗಳು ಹ್ಯಾಮಿಲ್ಟನ್‌ ಸರ್ಕಲ್‌ ದಾಟಿ ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌  ಮೂಲಕ ಸಾಗಬೇಕಿದೆ. ಈ ರಸ್ತೆಯ ಬದಿಯಲ್ಲಿ ಹಲ ವಾರು ವಾಹನ ನಿಲುಗಡೆಯಾಗುವುದರಿಂದ ಸಂಚಾರಕ್ಕೆ ಸಮಸ್ಯೆ ಆಗಬಹುದು. ಇದೇ ಜಾಗ ಹಾಗೂ ಲೇಡಿಗೋಶನ್‌ ಮುಂಭಾಗ ಖಾಸಗಿ ಬಸ್‌ಗಳು ನಿಲ್ಲುವುದರಿಂದಲೂ ವಾಹನ ಸಂಚಾರಕ್ಕೆ ಕೊಂಚ ಸಮಸ್ಯೆ ಎದುರಾಗಬಹುದು. ಇದನ್ನು ನಿವಾರಿಸಬೇಕಾಗಿದೆ ಎಂಬುದು ಸ್ಥಳೀಯ ವ್ಯಾಪಾರಿ ಕಿರಣ್‌ ಅವರ ಅಭಿಪ್ರಾಯ.

ಸ್ಮಾರ್ಟ್‌ರೋಡ್‌ ಕಾಮಗಾರಿ ನಿಧಾನ!
ಸ್ಮಾರ್ಟ್‌ರೋಡ್‌ ವ್ಯಾಪ್ತಿಯ ಪುರಭವನದ ಮುಂಭಾಗ ಅಂಡರ್‌ಪಾಸ್‌, ಏಕಮುಖ ಸಂಚಾರಕ್ಕೆ ಅಧ್ಯಯನ ಸೇರಿದಂತೆ ಹಲವು ರೀತಿಯ ಮಹತ್ವದ ಯೋಜನೆಗಳು ಇದೇ ವ್ಯಾಪ್ತಿಯಲ್ಲಿ ಕೈಗೊಂಡ ಕಾರಣದಿಂದ ಸದ್ಯಕ್ಕೆ ಸ್ಮಾರ್ಟ್‌ ರೋಡ್‌ನ‌ ಕಾಮಗಾರಿಯನ್ನು ನಿಧಾನ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. ಸದ್ಯ ಕಾಮಗಾರಿಯೂ ನಡೆಯುತ್ತಿಲ್ಲ. ಈಗಾಗಲೇ ನೆಹರೂ ಮೈದಾನ ಪಕ್ಕದ ಭಾಗದ ರಸ್ತೆಗೆ ಸಮಾನಾಗಿ ಕಾಂಕ್ರೀಟ್‌ ಹಾಸಲಾಗಿದೆ. ಸೆಪ್ಟಂಬರ್‌ನಲ್ಲಿ ಆರಂಭಿಸಲಾದ  ಈ ಕಾಮಗಾರಿ ಸದ್ಯ ಒಂದು ಹಂತ ಮಾತ್ರ ಪೂರ್ಣಗೊಂಡಿತ್ತು. ಅಷ್ಟರಲ್ಲೇ, ಈಗ ಹೊಸ ಪ್ರಸ್ತಾವನೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಮಗಾರಿ ನಿಧಾನವಾಗಿದ್ದು, ಮತ್ತೆ ಕಾಮಗಾರಿ ಮುಂದುವರಿಯಲು ಇನ್ನೂ ಕೆಲವು ದಿನ ಕಾಯಬೇಕಾದ ಅನಿವಾರ್ಯತೆ ಇದೆ. 

ಅಧ್ಯಯನಕ್ಕೆ ಸೂಚನೆ
‘ಸ್ಮಾರ್ಟ್‌ ರೋಡ್‌’ ಆಗುವ ಕ್ಲಾಕ್‌ ಟವರ್‌ನಿಂದ ಎ.ಬಿ.ಶೆಟ್ಟಿ ವೃತ್ತದವರೆಗೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಸ್ತಾವನೆಯಿದೆ. ಈ ಬಗ್ಗೆ ತಜ್ಞರಿಂದ ಅಧ್ಯಯನ ನಡೆಸಲಾಗುತ್ತಿದೆ. ಅವರಿಂದ ವರದಿ ಪಡೆದುಕೊಂಡು, ಭವಿಷ್ಯದಲ್ಲಿ ಸಾರ್ವಜನಿಕ ಸ್ನೇಹಿಯಾದ, ಸುಂದರವಾದ ಸ್ಮಾರ್ಟ್‌ ರೋಡ್‌ ನಿರ್ಮಾಣ ಮಾಡಲಾಗುವುದು.
 - ಶಶಿಕಾಂತ್‌ ಸೆಂಥಿಲ್‌,
    ಜಿಲ್ಲಾಧಿಕಾರಿ ದ.ಕ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next