Advertisement

ವಿದಾಯ ವಾಕ್ಯ ಭಾಗ್ಯವಿಲ್ಲದ ಮೈಸೂರ್‌ ಸ್ಟೇಟ್‌ ಬ್ಯಾಂಕ್‌

07:40 PM Apr 05, 2017 | Karthik A |

ಸ್ಟೇಟ್‌ಬ್ಯಾಂಕ್‌ ಆಫ್ ಮೈಸೂರು ವಿದಾಯ ವಾಕ್ಯದ ಭಾಗ್ಯವೂ ಇಲ್ಲದೆಯೇ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದೊಂದಿಗೆ ವಿಲಯನಗೊಂಡಿದೆ. ಪ್ರಗತಿ ಪಥದಲ್ಲಿದ್ದ, ರಾಜ್ಯದ ಹೆಮ್ಮೆಯ ಪ್ರತೀಕಗಳಲ್ಲಿ ಒಂದಾಗಿದ್ದ ಈ ಬ್ಯಾಂಕಿನ ವಿಲಯನವನ್ನು ಕುರಿತಾಗಿ ನಮ್ಮ ಸಂಸದರು, ಶಾಸಕರಿಗೆ ಏನೂ ಅನ್ನಿಸಲಿಲ್ಲವೇ!?

Advertisement

ಭಾರತೀಯ ಸ್ಟೇಟ್‌ಬ್ಯಾಂಕ್‌, ಮೊನ್ನೆ ಸ್ಟೇಟ್‌ ಬ್ಯಾಂಕ್‌ ಆಫ್ಮೈ ಸೂರು ಮತ್ತು ತನ್ನ ಇತರ ಸಹವರ್ತಿ ಬ್ಯಾಂಕ್‌ಗಳನ್ನು ತನ್ನ ತೆಕ್ಕೆಯೊಳಕ್ಕೆ ತೆಗೆದುಕೊಂಡ ದಿನ, ಅದು ದಿನಪತ್ರಿಕೆಗಳಲ್ಲಿ ನೀಡಿದ ಜಾಹೀರಾತಿನ ಒಕ್ಕಣೆ ಹೀಗಿತ್ತು. ‘ಇಂದು ಚರಿತ್ರೆಯನ್ನು ಮತ್ತೂಮ್ಮೆ ಬರೆಯಲಾಗುತ್ತಿದೆ”. ಆದರೆ ಈ ಜಾಹೀರಾತಿನಲ್ಲಿ ಉಲ್ಲೇಖೀಸದೆ ಬಿಟ್ಟಿರುವ ಮುಖ್ಯ ಅಂಶವೊಂದಿದೆ. ಅದು, ರಾಜಪ್ರಭುತ್ವವಿದ್ದ ರಾಜ್ಯಗಳಲ್ಲಿ ಸ್ಥಾಪನೆಗೊಂಡು ಪೋಷಿಸಲ್ಪಟ್ಟ ಬ್ಯಾಂಕಿಂಗ್‌ ಸಂಸ್ಥೆಗಳ ಇತಿಹಾಸವನ್ನು ಈ ಮಹಾವಿಲಯನದ ಮೂಲಕ ಸಂಪೂರ್ಣ ಅಳಿಸಿಹಾಕಲಾಗಿದೆ. 

ಈ ನಡುವೆ ಸಂಕಟ ಹುಟ್ಟಿಸಿರುವ ಸಂಗತಿಯೆಂದರೆ, ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರ್‌ ಎಂಬ ನಮ್ಮ ರಾಜ್ಯದ ಪ್ರತಿಷ್ಠಿತ ಸಂಸ್ಥೆ ಯಾರಿಂದಲೂ ಔಪಚಾರಿಕ ವಿದಾಯ ಪಡೆಯುವ ಭಾಗ್ಯವಿಲ್ಲದೆ ವಿಲೀನಗೊಂಡಿರುವುದು; ಈ ಮೂಲಕ ಇಂದು ಮೈಸೂರು ಸ್ಟೇಟ್‌ಬ್ಯಾಂಕ್‌ ಕೇವಲ ನೆನಪಾಗಿ ಉಳಿಯಬೇಕಾಗಿ ಬಂದಿದೆ. ನಮ್ಮ ಮುನ್ನೂರಕ್ಕಿಂತಲೂ ಹೆಚ್ಚು ಮಂದಿ ಶಾಸಕರು ಹಾಗೂ 40 ಸಂಸದರಿಗೆ ವಿಲಯನದ ಪರವಾಗಿಯಾಗಲಿ, ವಿರುದ್ಧವಾಗಿಯಾಗಲಿ ಹೇಳುವುದಕ್ಕೆ ಏನೂ ಇರಲಿಲ್ಲ. ಇನ್ನು ನಾಡಿನ ನೆಲ-ಜಲ ಇತ್ಯಾದಿಗಳನ್ನು ರಕ್ಷಿಸುವುದಾಗಿ ಬೆಂಗಳೂರಿನ ‘ಮೈಸೂರ್‌ ಬ್ಯಾಂಕ್‌ ಸರ್ಕಲ್‌’ನಿಂದ ಘೋಷಣೆ ಮೊಳಗಿಸುವ ಕನ್ನಡ ಪರ ಹೋರಾಟಗಾರರ ಕತೆ ಏನು?

ಕೇರಳ ವಿಧಾನಸಭೆಯ ಮಾದರಿ: ರಾಜ್ಯದ ವಿಧಾನಸಭೆ ಅಥವಾ ವಿಧಾನಪರಿಷತ್ತಿನ ಕಾರ್ಯಕಲಾಪಗಳಲ್ಲಿ ಇಂಥದೇ ಅಂಶಗಳಿರಬೇಕೆಂದು ಅಪ್ಪಣೆ ಕೊಡಿಸಲು ಯಾರಿಗೂ ಹಕ್ಕಿಲ್ಲವೆನ್ನೋಣ. ಆದರೆ ಒಂದು ಮಾತಂತೂ ನಿಜ. ವಿಧಾನಮಂಡಲದ ಎರಡೂ ಸದನಗಳು, ಕರ್ನಾಟಕದ ಕನಿಷ್ಠ ಕೆಲವು ಭಾಗಗಳ ಜನರ ಮನಸ್ಸು ಹಾಗೂ ಹೃದಯಕ್ಕೆ ಅತ್ಯಂತ ನಿಕಟವಾಗಿದ್ದ ಒಂದು ಬ್ಯಾಂಕನ್ನು ರಕ್ಷಿಸುವಲ್ಲಿ ವಿಫ‌ಲವಾಗಿವೆ. ಮೈಸೂರು ಸ್ಟೇಟ್‌ಬ್ಯಾಂಕ್‌ ಈ ರಾಜ್ಯ ಹಾಗೂ ದೇಶಕ್ಕೆ 104 ವರ್ಷಗಳ ಸೇವೆ ಸಲ್ಲಿಸಿದೆ. ಇಂಥ ಹಿರಿಯ ಸಂಸ್ಥೆಯೊಂದನ್ನು ನಾವಿಂದು ಕಳೆದುಕೊಂಡಿದ್ದೇವೆ.
  
ಇದಕ್ಕೆ ವ್ಯತಿರಿಕ್ತವಾಗಿ ಕೇರಳದ ವಿಧಾನಸಭೆಯಲ್ಲಿ ನಡೆದಿರುವುದನ್ನು ನೋಡಿ. ಅದು ಸ್ಟೇಟ್‌ ಬ್ಯಾಂಕ್‌ ಆಫ್ಟ್ರಾ ವೆಂಕೂರ್‌ ವಿಲೀನ ಪ್ರಸ್ತಾವವನ್ನು ವಿರೋಧಿಸುವ ಬಹುತೇಕ ಸರ್ವಾನುಮತದ ನಿರ್ಣಯ ಅಂಗೀಕರಿಸಿತು. ಈ ವಿಲಯನ ಕೇರಳದ ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬುದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಾಗೂ ಅರ್ಥಶಾಸ್ತ್ರಜ್ಞರೂ ಆಗಿರುವ ವಿತ್ತ ಸಚಿವ ಟಿ.ಎಂ. ಥಾಮಸ್‌ ಅವರ ವಾದವಾಗಿತ್ತು. ಟ್ರಾವೆಂಕೂರ್‌ ಸ್ಟೇಟ್‌ಬ್ಯಾಂಕ್‌ 846 ಶಾಖೆಗಳನ್ನು, 8,000 ಕೋಟಿ ಠೇವಣಿಯನ್ನು ಹೊಂದಿದ್ದು, ಸರಕಾರದ ಬಹುತೇಕ ಆರ್ಥಿಕ ವ್ಯವಹಾರಗಳು ಅದರ ಮೂಲಕ ನಡೆಯುತ್ತವೆ. ಈ ಬ್ಯಾಂಕು ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದನ್ನು ಸ್ಥಾಪಿಸಿ ಬೆಳೆಸಿದವರು ತಿರುವಾಂಕೂರಿನ ಮಹಾರಾಜರು ಹಾಗೂ ದಿವಾನರೆಂಬ ಕಾರಣಕ್ಕೆ ಈ ಬ್ಯಾಂಕನ್ನು ಕೈಬಿಡಲು ಕೇರಳದ ವಾಮಪಂಥೀಯ ಸಚಿವರು ತಯಾರಿರಲಿಲ್ಲ. ಕರ್ನಾಟಕದ ನಮ್ಮ ಸಚಿವರು ಹಾಗೂ ಶಾಸಕರು ಕೇರಳದ ಈ ನಡೆಯನ್ನು ಅನುಸರಿಸಬೇಕಿತ್ತು.

‘ಮೈಸೂರು’ ನಾಮಧೇಯ: ಈಗ ಮೈಸೂರು ಸ್ಟೇಟ್‌ ಬ್ಯಾಂಕಿನ ವಿಲೀನ ಪ್ರಕ್ರಿಯೆಯಿಂದಾಗಿ ‘ಮೈಸೂರು’ ಎಂಬ ಹೆಸರಿದ್ದ ಇನ್ನೂ ಒಂದು ಸಂಸ್ಥೆ ಅದನ್ನು ಅಳಿಸಿಕೊಂಡುಬಿಟ್ಟಂತಾಗಿದೆ. ‘ಮೈಸೂರು’ ಹೆಸರನ್ನು ಹೊತ್ತಿರುವ ಸಂಸ್ಥೆಗಳ ಉತ್ಪನ್ನವಿರುವುದು ಕೆಲವೇ ಕೆಲವು – ಮೈಸೂರು ವಿ.ವಿ., ಮೈಸೂರು ಸಿಲ್ಕ್ಸ್ ಹಾಗೂ ಮೈಸೂರ್‌ ಸ್ಯಾಂಡಲ್‌ ಸೋಪ್‌, ಭದ್ರಾವತಿಯ ಮೈಸೂರ್‌ ಪೇಪರ್‌ ಮಿಲ್ಸ್‌ ಹಾಗೂ ಮೈಸೂರು ಸಿಮೆಂಟ್‌ ಕಾರ್ಖಾನೆ, ಹಾಗೆಯೇ ಮಂಡ್ಯದಲ್ಲಿರುವ ಮೈಸೂರು ಸಕ್ಕರೆ ಕಾರ್ಖಾನೆ.

Advertisement

ಚುನಾವಣೆಗಳಿಗಾಗಿ ಅಳಿಸದ ಶಾಯಿ ಉತ್ಪಾದಿಸಿಕೊಡುವ ಮೈಸೂರಿನ ಅರಗು ಹಾಗೂ ಬಣ್ಣಗಳ ಕಾರ್ಖಾನೆಯೂ ಈ ಸಾಲಿನಲ್ಲಿದೆ. ಹಿಂದೆ ಇಂಗ್ಲಿಷ್‌ನಲ್ಲಿ ‘ಮೈಸೂರ್‌ ಸಿಟಿ’ಯಾಗಿದ್ದುದು ಈಗ ‘ಮೈಸೂರು ನಗರ’ವಾಗಿ ಮಾರ್ಪಟ್ಟು ಕನ್ನಡದ ಗಂಧವನ್ನು ಬೀರುತ್ತಿದೆ. ಇನ್ನು ಯಾರಾದರೊಬ್ಬರು ಮೈಸೂರು ವಿ.ವಿ.ಯ ಹೆಸರನ್ನು ಬದಲಾಯಿಸುವಂತೆ ಆಗ್ರಹಿಸಿ, ಮೈಸೂರಿಗೆ ಒಮ್ಮೆಯೂ ಭೇಟಿ ನೀಡದೆ ಇರುವ ವ್ಯಕ್ತಿಯೊಬ್ಬರ ಹೆಸರನ್ನು ಇರಿಸುವಂತೆ ವರಾತ ತೆಗೆಯದಿದ್ದರೆ ಸಾಕು ಎಂದೇ ಸದ್ಯ ಆಶಿಸುವಂತಾಗಿದೆ. ಇದ್ದುದರಲ್ಲಿ ಸಮಾಧಾನ ನೀಡುವ ಒಂದು ಅಂಶವೆಂದರೆ ಮೈಸೂರು ಸ್ಟೇಟ್‌ಬ್ಯಾಂಕಿನ ವಿಲಯನವಾಗಿರುವುದು ಅದು ಅಸ್ವಸ್ಥ ಅಥವಾ ಮರಣೋನ್ಮುಖ ಸಂಸ್ಥೆಯಾಗಿತ್ತು ಎಂಬ ಕಾರಣಕ್ಕಲ್ಲ. ಅದು ಪ್ರಗತಿಪಥದಲ್ಲಿ ಸಾಗುತ್ತಿದ್ದ ಸಂಸ್ಥೆಯಾಗಿತ್ತು. ವಾಸ್ತವವಾಗಿ ಅದನ್ನು ಹೊಟ್ಟೆಯಲ್ಲಿ ಹಾಕಿಕೊಂಡ ಮಾತೃಸಂಸ್ಥೆಗಿಂತಲೂ ಗಟ್ಟಿಮುಟ್ಟಾದ ಬ್ಯಾಂಕ್‌ ಆಗಿತ್ತು. ಇದುವರೆಗೆ ಸತತವಾಗಿ ಲಾಭ ಗಳಿಸುತ್ತಿದ್ದ ಸಂಸ್ಥೆ ಎಂಬುದೇ ಅದರ ಹೆಗ್ಗಳಿಕೆ. 1950ರ ದಶಕದಲ್ಲಿ ದೇಶದ ಕೆಲ ಖಾಸಗಿ ಸಂಸ್ಥೆಗಳು ಬಿದ್ದು ಹೋಗುತ್ತಿದ್ದ ಸಂದರ್ಭದಲ್ಲೂ ಮೈಸೂರು ಬ್ಯಾಂಕ್‌ ತಲೆಯೆತ್ತಿ ಸಾಗುತ್ತಿತ್ತು.

ಈ ಮಾತನ್ನು ಬರೆಯುತ್ತಿರುವುದಕ್ಕೆ ಕಾರಣವಿದೆ. ರಾಜಪ್ರಭುತ್ವವಿದ್ದ ಮೈಸೂರು ರಾಜ್ಯದಲ್ಲಿ ಆರಂಭಿಸಲಾಗಿದ್ದ ಅನೇಕ ಉದ್ದಿಮೆ/ಕೈಗಾರಿಕೆಗಳು ಕಳಪೆ ನಿರ್ವಹಣೆಯಿಂದಾಗಿ ಅಂತ್ಯ ಕಂಡವು. ಮೈಸೂರ್‌ ಲ್ಯಾಂಪ್ಸ್‌ ನಂದಿ ಹೋದುದನ್ನು ಜ್ಞಾಪಿಸಿಕೊಳ್ಳಿ. ಮೈಸೂರ್‌ ಕೆಮಿಕಲ್ಸ್‌ ಆ್ಯಂಡ್‌ ಫ‌ರ್ಟಿಲೈಜರ್ ಸಂಸ್ಥೆ ಇನ್ನೂ ತನ್ನ ಉತ್ಪಾದನ ಕಾರ್ಯವನ್ನು ಮುಂದುವರಿಸಿದೆ ಎನ್ನಬಹುದೇನೋ. ರಾಜಾಡಳಿತ ಕಾಲದ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಭಾರತೀಯ ಉಕ್ಕು ಪ್ರಾಧಿಕಾರದ ಕೈಗೊಪ್ಪಿಸಿಯಾಗಿದೆ. ಅದು ಇಂದು ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯಾಗಿದೆ. ಮೈಸೂರಿನ ಹೆಸರು ಹೊತ್ತಿರುವ ಇನ್ನೊಂದು ಏಜೆನ್ಸಿ ಸಂಸ್ಥೆಯಿದೆ. ಅದು ಮೈಸೂರ್‌ ಇಂಟರ್‌ನ್ಯಾಶನಲ್‌ ಲಿಮಿಟೆಡ್‌. ಅದು ಸ್ಥಾಪನೆಗೊಳ್ಳುವ ಸಂದರ್ಭದಲ್ಲಿ ಲಂಡನಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸರಕಾರಿ ನಿಯೋಜಿತ ಮಂಡಳಿಯಾದ ‘ಟ್ರೇಡ್‌ ಕಮಿಶನರ್‌ ಆಫ್ ಮೈಸೂರ್‌’ನ ವ್ಯವಹಾರ ಚಟುವಟಿಕೆಗಳನ್ನು ಕೈಗೆತ್ತಿಕೊಂಡು ಕರ್ನಾಟಕದ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಉತ್ತೇಜನ ನೀಡುವುದೆಂದು ಹೇಳಲಾಗುತ್ತಿತ್ತು. ಈ ಸಂಸ್ಥೆಯನ್ನು ನ್ಯಾಯವಾಗಿಯೇ ‘ಮೈಸೂರ್‌ ಫಾರಿನ್‌ ಸರ್ವೀಸ್‌’ (ಮೈಸೂರು ವಿದೇಶಾಂಗ ಸೇವಾ ಸಂಸ್ಥೆ) ಎಂದು ಯಾರೂ ಕರೆಯಬಹುದಾಗಿತ್ತು. ಇಂದಿನ ಹೆಚ್ಚಿನವರಿಗೆ ತಿಳಿದಿರಲಾರದು – 1970ರ ದಶಕದಲ್ಲಿ ರಾಜ್ಯ ಸರಕಾರ ‘ಮೈಸೂರ್‌ ಶಿಪ್ಪಿಂಗ್‌ ಕಾರ್ಪೊರೇಶನ್‌’ (ಮೈಸೂರು ನೌಕಾ ನಿಗಮ) ಅನ್ನು ಅಸ್ತಿತ್ವಕ್ಕೆ ತಂದಿತ್ತು. ಇದು ಒಂದೆರಡು ಹಡಗುಗಳನ್ನು ಖರೀದಿಸಿಯೂ ಇತ್ತು; ಅವುಗಳನ್ನು ಸಮುದ್ರದಲೆಗಳು ನುಂಗಿ ಹಾಕಿದವು.

ಉಳಿಸಿಕೊಳ್ಳಬೇಕಿತ್ತು: ಡಿಜಿಟಲ್‌ ಬ್ಯಾಂಕಿಂಗ್‌ ಪ್ರಕ್ರಿಯೆಯಲ್ಲಿ ಮೈಸೂರು ಸ್ಟೇಟ್‌ ಬ್ಯಾಂಕ್‌, ದೇಶದ ಇತರ ರಾಷ್ಟ್ರೀಕೃತ ಬ್ಯಾಂಕ್‌ಗಳಂತೆಯೇ ಖಾಸಗಿ ಬ್ಯಾಂಕುಗಳಿಗಿಂತ ಹಿಂದಿತ್ತು ಎನ್ನುವುದು ನಿಜವಿರಬಹುದು. ಒಟ್ಟಾರೆಯಾಗಿ ನೋಡುವುದಾದರೆ ಅದರ ಉದ್ಯೋಗಿಗಳು ಎಲ್ಲ ರೀತಿಯಲ್ಲೂ ತಮ್ಮ ಗ್ರಾಹಕರನ್ನು ಖುಷಿಯಲ್ಲಿಟ್ಟಿದ್ದರು. ಅದರ ಗ್ರಾಹಕರು, ದಶಕಗಳಿಂದ ಅದಧಿರೊಂದಿಗೆ ಸಂಬಂಧ – ಸಂಪರ್ಕವಿರಿಸಿಕೊಂಡವರಾಗಿದ್ದರು. ಅನೇಕ ಕುಟುಂಬಗಳಿಗೆ ಅದೊಂದು ವಂಶಪಾರಂಪರ್ಯ ಬ್ಯಾಂಕ್‌ ಆಗಿತ್ತು. ಅದಕ್ಕೆ ಹೋಲಿಸಿದರೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ಯಾವ ರೀತಿಯಲ್ಲೂ ಉತ್ತಮ ಬ್ಯಾಂಕಿಂಗ್‌ಗೆ ಉದಾಹರಣೆಯಾಗಿ ಸಲ್ಲುವುದಿಲ್ಲ. ಅದರ ಸೇವೆಯ ಗುಣಮಟ್ಟ, ವಿಶೇಷವಾಗಿ ಅದರ ಗ್ರಾಹಕರ ದೃಷ್ಟಿಯಿಂದ, ಕುಸಿಯುತ್ತ ಬಂದಿದೆ. 

ಗ್ರಾಹಕರನ್ನು ನಡೆಸಿಕೊಳ್ಳುವ ಮಟ್ಟಿಗೆ, ಅದರ ಕೆಲವು ಶಾಖೆಗಳು ಸರಕಾರದ ಕೆಲವು ಕಚೇರಿಗಳಿಗಿಂತ ಉತ್ತಮವೇನಲ್ಲ. ಬಹುಶಃ ದೊಡ್ಡ ಮೊತ್ತದ ಸಾಲ ಪಡೆದಿರುವ ಕುಳಗಳಷ್ಟೆ ಬ್ಯಾಂಕಿನೊಂದಿಗೆ ಹಿತಕರ ಸಂಬಂಧವನ್ನು ಹೊಂದಿದ್ದಾರೆಂದು ಹೇಳಬಹುದು. ಬ್ಯಾಂಕ್‌ನಿಂದ ಅಥವಾ ಸಾಲ ವಸೂಲಾತಿ ಟ್ರಿಬ್ಯುನಲ್‌ನಿಂದ ಪುಂಖಾನುಪುಂಖ ಪತ್ರಿಕಾ ಹೇಳಿಕೆಗಳನ್ನು / ಘೋಷಣೆಗಳನ್ನು ಹೊರಡಿಸುವುದು ಉತ್ತಮ ರೀತಿಯ ಬ್ಯಾಂಕಿಂಗ್‌ ಅಲ್ಲ. ದೊಡ್ಡ ಮಟ್ಟದ ಸಾಲಗಾರರಲ್ಲಿ ಅನೇಕರು ಅನುತ್ಪಾದಕ ಆಸ್ತಿಗಳನ್ನು ಬ್ಯಾಂಕಿನ ಹೆಗಲಿಗೆ ಹೊರಿಸಿಬಿಟ್ಟಿದ್ದಾರೆ. ಸಾಲಗಾರ ಕುಳವಾರುಗಳಿಂದ, ಅದರಲ್ಲೂ ವಿಶೇಷವಾಗಿ ದೇಶದಿಂದ ಪಲಾಯನ ಮಾಡಿರುವ ಒಬ್ಬರೋ ಇಬ್ಬರೋ ಪ್ರದರ್ಶನಪಟುಗಳಿದ್ದಾರಲ್ಲ – ಅವರಿಂದ ಪಡೆದುಕೊಳ್ಳಬೇಕಾಗಿದ್ದ ‘ಕೆವೈಸಿ’ ವಿವರಗಳನ್ನು ನಮ್ಮ ಬ್ಯಾಂಕುಗಳು ಸರಿಯಾದ ರೀತಿಯಲ್ಲಿ ಪಡೆದುಕೊಂಡಿರಲಿಲ್ಲವೆ?

ಏನಿದ್ದರೂ ಭಾರತ ಸರಕಾರ, ‘ಸಾಂಪ್ರದಾಯಿಕ ವಿಶ್ವಸನೀಯತೆ’ಯೊಂದಿಗೆ ಗ್ರಾಹಕರಿಗೆ ಉತ್ತಮ ಡಿಜಿಟಲ್‌ ಸೌಲಭ್ಯದ ಫ‌ಲಿತಗಳು ಹಾಗೂ ಇತರ ಸೇವೆಗಳನ್ನು ಒದಗಿಸುವ ನೆಪದಲ್ಲಿ ಎಸ್‌ಬಿಐಯ ಸಹವರ್ತಿ ಬ್ಯಾಂಕುಗಳನ್ನು ‘ನಾಶಪಡಿಸುವ’ ಅಗತ್ಯವಿರಲಿಲ್ಲ. ಹಾಗೆ ನೋಡಿದರೆ ನಮ್ಮ ಮೈಸೂರ್‌ ಸ್ಟೇಟ್‌ಬ್ಯಾಂಕ್‌ ತನ್ನ ಗ್ರಾಹಕರಿಗೆ ಎಸ್‌ಬಿಐಯ ಅಧೀನದ ಎಟಿಎಂಗಳ ಬಳಕೆಗೆ ಅದಾಗಲೇ ಅವಕಾಶ ಒದಗಿಸಿ ಕೊಟ್ಟಾಗಿತ್ತು. ಎಸ್‌ಬಿಐಯ ಈ ‘ಕ್ರೋಢೀಕರಣ’ ಪ್ರಯತ್ನದ ಉದ್ದೇಶ, ವಿಶ್ವದ ಅತಿ ದೊಡ್ಡ ವ್ಯವಹಾರ ಜಾಲ ಹೊಂದಿದ ಬ್ಯಾಂಕ್‌ ಎಂಬ ಹೆಗ್ಗಳಿಕೆಯನ್ನು ಸಂಪಾದಿಸುವುದಾಗಿತ್ತೆಂದು ತೋರುತ್ತದೆ. ಸರಕಾರದ ನಿಯಂತ್ರಣದಲ್ಲಿರುವ ಬ್ಯಾಂಕುಗಳ ಕಾಯಕಲ್ಪ ಅಥವಾ ಪುನರುಜ್ಜೀವನ ಪ್ರಕ್ರಿಯೆಗೆ ಸಂಬಂಧಿಸಿದ ‘ಇಂದ್ರಧನುಷ್‌’ ಯೋಜನೆಯ ಅಂಗವಾಗಿಯೇ ಈ ವಿಲಯನ ನಡೆದಿದೆ ಎನ್ನಲಾಗುತ್ತಿದೆ. ಇದಕ್ಕೆ ಬದಲಾಗಿ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಹಾಗೂ ನಷ್ಟದ ಬಾಬುಗಳ ಸಮಸ್ಯೆಯ ನಿವಾರಣೆಯತ್ತ ಗಮನ ಹರಿಸಬೇಕಿತ್ತು. ರಾಷ್ಟ್ರೀಕೃತ ಬ್ಯಾಕೊಂದರ ಲಾಂಛನ ಚಿತ್ರವನ್ನು ಬದಲಾಯಿಸಲಿಕ್ಕಾಗಿಯೇ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಲಾಯಿತೆಂಬ ಮಾತೂ ಕೇಳಿಬರುತ್ತಿದೆ. ಮೊತ್ತಮೊದಲಿಗೆ ಸರಕಾರ ನಿಭಾಯಿಸಬೇಕಾದುದು ಇಂಥ ಘೋಟಾಳೆಗಳನ್ನು.

– ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next