ಕಲಘಟಗಿ: ಸಾಮಾಜಿಕ ನ್ಯಾಯ ವಂಚಿತ ವ್ಯಕ್ತಿಗಳ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುವಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನಿರಂತರವಾಗಿ ಶ್ರಮಿಸುತ್ತಿದೆ. ಜಿಲ್ಲೆಯ ಎಲ್ಲ ನ್ಯಾಯಾ ಧೀಶರು, ನ್ಯಾಯವಾದಿಗಳು ಮತ್ತು ಅಧಿ ಕಾರಿಗಳ ಪರಿಶ್ರಮದಿಂದಾಗಿ ರಾಜ್ಯಮಟ್ಟದ ಅತ್ಯುತ್ತಮ ಜಿಲ್ಲೆ ಎಂಬ ಪ್ರಶಂಸನಾ ಪ್ರಶಸ್ತಿ ದೊರಕಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾ ಧೀಶ ಈಶಪ್ಪ ಭೂತೆ ಹೇಳಿದರು.
ಪ್ರಶಸ್ತಿಗೆ ಶ್ರಮಿಸಿದ ಸಾಧಕರಿಗಾಗಿ ತಾಲೂಕಿನ ನ್ಯಾಯಾಲಯ ಸಂಕೀರ್ಣದ ವಕೀಲರ ಸಂಘದ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಾನೂನು ಸೇವಾ ಪ್ರಾಧಿಕಾರದ ಮುಖೇನ ನ್ಯಾಯದಾನಕ್ಕೆ ಮುಂದಾದಲ್ಲಿ ನೊಂದವರ ಕಣ್ಣೀರು ಒರೆಸಲು ಸಾಧ್ಯ. ಲೋಕ ಅದಾಲತ್ ಹಾಗೂ ರಥಯಾತ್ರೆ ಮೂಲಕ ಪ್ರತಿಯೊಬ್ಬರೂ ಸಾಂಘಿಕವಾಗಿ ಶ್ರಮಿಸಿದಾಗ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯದಾನ ನೀಡುವ ಮೂಲಕ ಅವರಿಗೆ ಸಂತೃಪ್ತ ಜೀವನ ನಡೆಸಲು ಅನುವು ಮಾಡಿಕೊಡಬಹುದು. ಮುಂಬರುವ 9ರಂದು ದಿಲ್ಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಅಲ್ಲಿ ಸ್ವೀಕರಿಸಲಿರುವ ಪ್ರಶಸ್ತಿಗೆ ಜಿಲ್ಲೆಯ ನೀವೆಲ್ಲರೂ ಭಾಜನರು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಸೇವಾ ಕಾನೂನು ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್. ಚಿನ್ನಣ್ಣವರ ಮಾತನಾಡಿ, ನೊಂದವರ ಕಣ್ಣೀರು ಒರೆಸಿರುವ ಹಾಗೂ ನಿಸ್ವಾರ್ಥ ಮನೋಭಾವನೆಯಿಂದ ಸೇವೆಗೈದಿರುವ ಪ್ರತಿಫಲದಿಂದಲೇ ಪ್ರಶಸ್ತಿ ದೊರಕಿದೆ. ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಹೆಚ್ಚಿಸಿದೆ. ಇದುವರೆಗಿನ ನಿಮ್ಮೆಲ್ಲರ ಸಹಕಾರಕ್ಕೆ ಅಭಿನಂದನೆಗಳು. ಮುಂಬರುವ ದಿನಗಳಲ್ಲಿಯೂ ತಾವೆಲ್ಲರೂ ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ನಿರ್ಗತಿಕರ ಬಾಳಲ್ಲಿ ಬೆಳಕನ್ನು ತುಂಬಲು ಮುಂದಾಗಬೇಕೆಂದು ಕರೆ ನೀಡಿದರು.
ಜಿಲ್ಲಾ ಕೇಂದ್ರ ಸ್ಥಾನದಿಂದ ಆಗಮಿಸಿದ್ದ ಹಿರಿಯ ನ್ಯಾಯಾಧೀಶರು ಕುಟುಂಬ ಸದಸ್ಯರೊಡಗೂಡಿ ನ್ಯಾಯಾಲಯದ ಆವರಣದಲ್ಲಿ ಗಿಡ ನೆಟ್ಟರು. ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಸಿ.ಎಂ. ಗಂಗಾಧರ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧಿಧೀಶ ಎಸ್.ವಿ. ಶ್ರೀಕಾಂತ, ಸ್ಥಳೀಯ ಹಿರಿಯ ದಿವಾಣಿ ನ್ಯಾಯಾಧಿಧೀಶೆ ಜಿ.ಕೆ. ದಾಕ್ಷಾಯಿಣಿ, ಕಿರಿಯ ದಿವಾಣಿ ನ್ಯಾಯಾ ಧೀಶ ರಾಜಶೇಖರ ತಿಳಗಂಜಿ, ತಹಶೀಲ್ದಾರ್ ಅಶೋಕ ಶಿಗ್ಗಾಂವಿ, ಸಹಾಯಕ ಸರ್ಕಾರಿ ಅಭಿಯೋಜಕಿ ಗೀತಾ ಹೊಸಗಾಣಿಗೇರ ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷ ವಿ.ಬಿ. ಶಿವನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ಲಭಿಸುವಲ್ಲಿ ಶ್ರಮಿಸಿದ ಜಿಲ್ಲೆಯ ಸಾಧಕ ಹಿರಿಯ ನ್ಯಾಯಾಧೀಶರರಾದ ಈಶಪ್ಪ ಭೂತೆ, ಆರ್.ಎಸ್. ಚಿನ್ನಣ್ಣವರ ಹಾಗೂ ಅವರ ಕುಟುಂಬ ವರ್ಗದವರನ್ನು ವಿವಿಧ ಇಲಾಖೆಗಳ ಪರವಾಗಿ ಸನ್ಮಾನಿಸಲಾಯಿತು. ಜಾನಪದ ಕಲಾವಿದ ಆರ್.ಎಂ. ತೋಟಗಂಟಿ ನಾಡಗೀತೆ ಹಾಡಿದರು. ನ್ಯಾಯವಾದಿ ಆರ್.ಎಸ್. ಉಡುಪಿ ಪ್ರಾರ್ಥಿಸಿದರು. ಮಂಜುನಾಥ ಧನಿಗೊಂಡ ಸ್ವಾಗತಿಸಿದರು. ಕೆ.ಬಿ. ಗುಡಿಹಾಳ ನಿರೂಪಿಸಿದರು. ಜಿ.ಬಿ. ನೇಕಾರ ವಂದಿಸಿದರು.