ಬೆಂಗಳೂರು: ರಾಜ್ಯ ವಿಧಾನಮಂಡಲದ ಜಂಟಿ ಹಾಗೂ ಬಜೆಟ್ ಅಧಿವೇಶನದ ಅಧಿಸೂಚನೆ ಹೊರಬಿದ್ದಿದ್ದು, ಫೆ.5 ರಿಂದ 9 ರವರೆಗೆ ಹಾಗೂ ಫೆ.16 ರಿಂದ 22 ರವರೆಗೆ ಕಲಾಪಗಳು ನಡೆಯಲಿದೆ.
ಫೆಬ್ರವರಿ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ 2018-19 ನೇ ಸಾಲಿನ ಬಜೆಟ್ ಮಂಡಿಸಲಿದ್ದು, ಇದು ಹದಿಮೂರನೆಯ ದಾಖಲೆಯ ಬಜೆಟ್ ಸಹ ಆಗಿದೆ.
ಫೆ.5 ರಂದು ಬೆಳಗ್ಗೆ 11 ಗಂಟೆಗೆ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು ಆ ನಂತರ ನಾಲ್ಕು ದಿನಗಳ ಕಾಲ ಫೆ. 9 ರವರೆಗೆ ಸರ್ಕಾರಿ ಹಾಗೂ ಖಾಸಗಿ ಕಾರ್ಯಕಲಾಪಗಳು ನಡೆಯಲಿವೆ.
ಫೆಬ್ರವರಿ 16 ಕ್ಕೆ ಮತ್ತೆ ಅಧಿವೇಶನ ಪ್ರಾರಂಭವಾಗಲಿದ್ದು ಮೊದಲ ದಿನ ಬಜೆಟ್ ಮಂಡನೆಯಾಗಲಿದೆ. ಫೆ.19 ರಿಂದ ಬಜೆಟ್ ಮೇಲಿನ ಚರ್ಚೆ ಹಾಗೂ ಸರ್ಕಾರಿ ಮತ್ತು ಖಾಸಗಿ ಕಾರ್ಯಕಲಾಪಗಳು ನಡೆಯಲಿವೆ.
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಬಜೆಟ್ ಮಂಡನೆಯಾಗುತ್ತಿರುವುದರಿಂದ ಇದು ಚುನಾವಣಾ ಕೇಂದ್ರಿತ ಬಜೆಟ್, ಭರವಸೆ ಹಾಗೂ ಘೋಷಣೆಗಳ ಮಹಾಪೂರ ಹರಿಸಲಿರುವ ಬಜೆಟ್, ಮತದಾರರನ್ನು ಸೆಳೆಯಲು ಮಂಡಿಸುವ ಜನಪ್ರಿಯ ಬಜೆಟ್ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮುಖ್ಯಮಂತ್ರಿಯಾಗಿ ಆರನೇ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯ ಹಣಕಾಸು ಸಚಿವರಾಗಿ ಹದಿಮೂರನೇ ಬಜೆಟ್ ಮಂಡಿಸುತ್ತಿದ್ದಾರೆ. ಈ ಹಿಂದೆ ರಾಮಕೃಷ್ಣ ಹೆಗಡೆ ಅವರು 13 ಬಾರಿ ಬಜೆಟ್ ಮಂಡಿಸಿದ್ದರು.