ಕೋಟ: ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಮುಖ್ಯ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರು ಫೆ. 16ರಂದು ಕೋಟ ಗಿಳಿಯಾರಿಗೆ ಭೇಟಿ ನೀಡಿ ಅಂತರಗಂಗೆ ಹತೋಟಿ ಬಗ್ಗೆ ಕೃಷಿಕರು, ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸಿದರು.
ಅಂತರಗಂಗೆ ಕಳೆ ಈ ಭಾಗದಲ್ಲಿ ಕೃಷಿಗೆ ಮಾರಕವಾಗಿದ್ದು ನೂರಾರು ಎಕ್ರೆ ಕೃಷಿ ಬೆಳೆಗಳನ್ನು ನಾಶಪಡಿಸುತ್ತಿದೆ. ಹೀಗಾಗಿ ಇದಕ್ಕೆ ಪರಿಹಾರ ಕಲ್ಪಿಸುವಂತೆ ರೈತರು ಆಗ್ರಹಿಸುತ್ತಿದ್ದು ವಿಧಾನಸಭೆ, ವಿಧಾನಪರಿಷತ್‌ನಲ್ಲೂ ಈ ವಿಷಯ ಪ್ರಸ್ತಾವವಾಗಿತ್ತು. ಆದ್ದರಿಂದ ಆಯುಕ್ತರು ನೇರವಾಗಿ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದರು.
ಈ ಸಂದರ್ಭ ಸಮಸ್ಯೆಯ ಬಗ್ಗೆ ರೈತರೊಂದಿಗೆ ಚರ್ಚೆ ನಡೆಸಿದರು. ಸಮಸ್ಯೆ ಪರಿಹಾರದ ಬಗ್ಗೆ, ಈಗಾಗಲೇ ಕೈಗೊಂಡ ವಿಧಾನಗಳ ಬಗ್ಗೆ ಕೃಷಿ ವಿಜ್ಞಾನಿಗಳು, ತಜ್ಞರೊಂದಿಗೆ ಮಾತುಕತೆ ನಡೆಸಿ ವರದಿ ಸಿದ್ಧಪಡಿಸಿದರು. ಪ್ರಾಯೋಗಿಕವಾಗಿ ಅಂತರಗಂಗೆ ಇರುವ ನೀರಿನ ಗುಂಡಿಗೆ ಜಲ ಕಳೆನಾಶಕ ಮೀನುಗಳನ್ನು ಬಿಡಲಾಯಿತು.
ಕೃಷಿ ಇಲಾಖೆಯ ರಾಜ್ಯ ಸಹಾಯಕ ನಿರ್ದೇಶಕ ವೆಂಕಟರಮಣ ರೆಡ್ಡಿ, ಜಿಲ್ಲಾ ಜಂಟಿ ನಿರ್ದೇಶಕ ಕೆಂಪೇಗೌಡ, ಜಿಲ್ಲಾ ಉಪ ನಿರ್ದೇಶಕ ಚಂದ್ರಶೇಖರ್, ಕೃಷಿ ವಿಜ್ಞಾನಿಗಳಾದ ಡಾ| ಧನಂಜಯ್, ಡಾ| ಲಕ್ಷ್ಮಣ, ಡಾ| ಸುಧೀರ್ ಕಾಮತ್, ಕೋಟ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಸುಪ್ರಭಾ, ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ್ ಶೆಟ್ಟಿ, ರೈತಧ್ವನಿ ಸಂಘಟನೆಯ ಅಧ್ಯಕ್ಷ ಜಯರಾಮ್ ಶೆಟ್ಟಿ, ರೈತ ಮುಂದಾಳು ಭರತ್ ಕುಮಾರ್ ಶೆಟ್ಟಿ, ರಾಜಾರಾಮ್ ಶೆಟ್ಟಿ, ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
ನೆಲಗಡಲೆ ತಳಿ: ಮಾಹಿತಿ
ಅಂತರಗಂಗೆ ಅಧ್ಯಯನದ ಅನಂತರ ಮಣೂರು ಕಾಸನಗುಂದಿಗೆ ಭೇಟಿ ನೀಡಿದ ಕೃಷಿ ಆಯುಕ್ತರು ರೈತರಿಗೆ ಹೊಸದಾಗಿ ಕೊಡಮಾಡಿದ ಜಿ2-5-2 ನೆಲಗಡಲೆ ತಳಿಯ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿದರು ಹಾಗೂ ಪರ್ಯಾಯ ತಳಿಗೆ ಒತ್ತು ನೀಡುವಂತೆ ತಿಳಿಸಿದರು.