ಶ್ರೀಹರಿಕೋಟಾ: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಇಸ್ರೋ ಆವರಣದಲ್ಲಿ ದೇಶದ ಮೊದಲ ಖಾಸಗಿ ಉಡಾವಣಾ ವಾಹಕ ಮತ್ತು ಯೋಜನಾ ನಿರ್ವಹಣೆ ಕೇಂದ್ರವನ್ನು ಉದ್ಘಾಟಿಸಲಾಯಿತು.
ಈ ಉಡಾವಣಾ ವಾಹಕವನ್ನು ಚೆನ್ನೈ ಮೂಲದ ಸ್ಪೇಸ್ ಟೆಕ್ ಸ್ಟಾರ್ಟ್ ಅಪ್ ಅಗ್ನಿಕುಲ್ ಕಾಸ್ಮೋಸ್ ವಿನ್ಯಾಸಗೊಳಿಸಿದೆ. ಈ ಕೇಂದ್ರದ ಮೂಲಕ ಉಪಗ್ರಹಗಳನ್ನು ಉಡಾವಣೆಗೊಳಿಸಲು ಅಗ್ನಿಕುಲ್ ಕಾಸ್ಮೋಸ್ ಮುಂದಾಗಿದೆ.
ಈ ವ್ಯವಸ್ಥೆಯನ್ನು ಅ.25ರಂದೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ)ದ ಅಧ್ಯಕ್ಷ ಎಸ್.ಸೋಮನಾಥ್ ಉದ್ಘಾಟಿಸಿದ್ದಾರೆ.
ಈ ಕುರಿತು ಸೋಮವಾರ ಪ್ರತಿಕ್ರಿಯಿಸಿದ ಅವರು, “ದೇಶದ ಮೊದಲ ಖಾಸಗಿ ಉಡಾವಣಾ ವಾಹಕ ಸ್ಥಾಪನೆಯಾಗಿದೆ. ಭಾರತ ಬಾಹ್ಯಾಕಾಶಕ್ಕೆ ತೆರಳಲು ಇನ್ನೊಂದು ವೇದಿಕೆ ಸಜ್ಜಾಗಿದೆ,’ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಗ್ನಿಕುಲ್ ಸಹ ಸ್ಥಾಪಕ ಮತ್ತು ಸಿಇಒ ಶ್ರೀನಾಥ್ ರವಿಚಂದ್ರನ್ ಉಪಸ್ಥಿತರಿದ್ದರು.
Related Articles
ಅಗ್ನಿಕುಲ್ ಕಾಸ್ಮಸ್ ವಿನ್ಯಾಸಗೊಳಿಸಿರುವ ಉಡಾವಣಾ ವಾಹಕವನ್ನು ಇಸ್ರೋ ಮತ್ತು ಇನ್-ಸ್ಪೇಸ್ ನೆರವಿನಲ್ಲಿ ಕಾರ್ಯಚಾಲನೆ ಮಾಡಲಾಗುತ್ತದೆ. ಉಡಾವಣಾ ವಾಹಕವು ಅಗ್ನಿಕುಲ್ ವಾಹಕ(ಎಎಲ್‌ಪಿ) ಮತ್ತು ಅಗ್ನಿಕುಲ್ ನಿರ್ವಹಣಾ ಕೇಂದ್ರ(ಎಎಂಸಿಸಿ)ವನ್ನು ಒಳಗೊಂಡಿದೆ.
ಅಗ್ನಿಕುಲ್ ಕಾಸ್ಮೋಸ್ ತನ್ನ ಮೊದಲ ಉಡಾವಣೆಯಲ್ಲಿ, ಎರಡು ಹಂತದ ಉಡಾವಣಾ ವಾಹನ, “ಅಗ್ನಿಬಾನ್’ 100 ಕೆ.ಜಿ.ಯಷ್ಟು ಪೇಲೋಡ್ ಅನ್ನು ಸುಮಾರು 700 ಕಿ.ಮೀ. ಎತ್ತರಕ್ಕೆ ಸಾಗಿಸಲು ಉದ್ದೇಶಿಸಿದೆ.