Advertisement

ಮೈಷುಗರ್‌ ಖಾಸಗೀಕರಣ ಪ್ರಕ್ರಿಯೆಗೆ ಚಾಲನೆ

10:54 AM Jun 01, 2019 | Suhan S |

ಮಂಡ್ಯ: ಜಿಲ್ಲೆಯ ಆರ್ಥಿಕ ಜೀವನಾಡಿಯಾಗಿರುವ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಕಾರ್ಯೋನ್ಮುಖವಾಗಿದೆ.ಪ್ರಸಕ್ತ ಸಾಲಿನಿಂದಲೇ ಕಂಪನಿಯ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಲು ನಿರ್ಧರಿಸಿದೆ.

Advertisement

ಈಗಾಗಲೇ ಟೆಂಡರ್‌ ಮೇ 28ರಂದೇ ಕರೆಯಲಾಗಿದ್ದು, ಜೂ.3ರಂದು ಬಿಡ್‌ ಅಂತಿಮ ಗೊಳ್ಳಲಿದೆ. ಜೂ.7ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಮೈಷುಗರ್‌ ಕಂಪನಿಯ ಕೇಂದ್ರ ಕಚೇರಿಯಲ್ಲಿರುವ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಬಿಡ್‌ ತೆರೆದು ಆಯ್ಕೆ ಮಾಡಲಾಗುವುದು.

ಸರ್ಕಾರಿ ಸ್ವಾಮ್ಯದ ಕಾರ್ಖಾನೆಯನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯವಾಗದ ರಾಜ್ಯಸರ್ಕಾರ ಇದೀಗ ಖಾಸಗಿ ಕಂಪನಿಯವರಿಗೆ ಜವಾಬ್ದಾರಿ ವಹಿಸಲು ತೀರ್ಮಾನಿಸಿದೆ. 2018ರ ಡಿ.12ರಂದು ಮೈಷುಗರ್‌ ಆಡಳಿತ ಮಂಡಳಿ ಸಭೆಯಲ್ಲಿ ನೌಕರರ ಸ್ವಯಂ ನಿವೃತ್ತ ನಿರ್ಧಾರ ಕೈಗೊಳ್ಳಲಾಗಿತ್ತು. ಆಡಳಿತ ಮಂಡಳಿ ಹಾಗೂ ನೌಕರರ ಸಂಘದ ನಡುವೆ ಮಾತುಕತೆ ನಡೆದು ಕಾರ್ಮಿಕರು ಸ್ವಯಂ ನಿವೃತ್ತಿಗೆ ಒಪ್ಪಿಗೆ ನೀಡಿದ್ದರು.

ಕಳೆದ ಸಾಲಿನಲ್ಲಿ ಮೈಷುಗರ್‌ ಕಾರ್ಖಾನೆ 1 ಲಕ್ಷ ಟನ್‌ ಕಬ್ಬು ಅರೆಯುವುದಕ್ಕೆ ಮಾತ್ರ ಸಮರ್ಥ ವಾಯಿತು. ಗುಣಮಟ್ಟದ ಸಕ್ಕರೆ ಉತ್ಪಾದಿಸುವಲ್ಲಿಯೂ ವೈಫ‌ಲ್ಯ ಸಾಧಿಸಿತು. ಧೂಳಿನಿಂದ ಕೂಡಿದ ಕಂದು ಬಣ್ಣದ ಸಕ್ಕರೆ ಸಿಹಿ ತಿನಿಸು ತಯಾರಿಸುವುದಕ್ಕೂ ಅಯೋಗ್ಯವೆನಿಸಿತ್ತು.

ಕಳೆದ ಬಜೆಟ್‌ನಲ್ಲಷ್ಟೇ ಬಾಯ್ಲರ್‌, ಡಿಸ್ಟಿಲರಿ ಘಟಕ ಹಾಗೂ ಎಥನಾಲ್ ಪ್ಲಾಂಟ್ ನಿರ್ಮಾಣಕ್ಕಾಗಿ 100 ಕೋಟಿ ರೂ. ಹಣವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಈಗ ಅದಕ್ಕೆಲ್ಲಾ ಎಳ್ಳು-ನೀರು ಬಿಟ್ಟಂತಾಗಿದೆ.

Advertisement

ಸಚಿವರು-ಶಾಸಕರ ಗೈರು: ಶುಕ್ರವಾರ ಮೈಸೂರು ಸಕ್ಕರೆ ಕಾರ್ಖಾನೆಗೆ ಸಕ್ಕರೆ ಸಚಿವ ಆರ್‌.ಬಿ.ತಿಮ್ಮಾಪುರ್‌ ಭೇಟಿ ನೀಡಿ ಕಾರ್ಖಾನೆಯ ಸ್ಥಿತಿ-ಗತಿಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕಾರ್ಖಾನೆಯಲ್ಲೇ ಸಚಿವರು ಅಧಿಕಾರಿಗಳು, ರೈತ ಮುಖಂಡರೊಂದಿಗೆ ಸಭೆ ನಡೆಸಿದರು. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು, ಕ್ಷೇತ್ರದ ಶಾಸಕ ಎಂ.ಶ್ರೀನಿವಾಸ್‌ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳೂ ಸಭೆಯತ್ತ ಮುಖ ಮಾಡಲೇ ಇಲ್ಲ. ಮೈಷುಗರ್‌ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವ ಪ್ರಕ್ರಿಯೆ ಸಾಗಿದ್ದರೂ ಕೂಡ ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ದೂರವೇ ಉಳಿದಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನರು ಏಳು ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಗೆಲುವನ್ನು ತಂದುಕೊಟ್ಟರೂ ಮೈಷುಗರ್‌ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಯಾರೊಬ್ಬರೂ ಕಾರ್ಯೋನ್ಮುಖರಾಗದಿರುವುದು ದುರಂತದ ಸಂಗತಿ. ಕನಿಷ್ಠ ಪಕ್ಷ ಸಕ್ಕರೆ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸುವುದರೊಂದಿಗೆ ರೈತರು ಹಾಗೂ ಕಾರ್ಖಾನೆ ನೌಕರರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸಕ್ಕೆ ಯಾರೊಬ್ಬರೂ ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ.

● ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next