Advertisement

ಅಗ್ಗದ ದರದ ಮೆಮು ರೈಲು ಸೇವೆಗೆ ಚಾಲನೆ

12:29 PM Jul 28, 2019 | Team Udayavani |

ಮೈಸೂರು: ಮುಂದಿನ ಒಂದು ವರ್ಷದೊಳಗೆ ದೇಶದ ಐದು ಪ್ರಮುಖ ನಗರಗಳಿಗೆ ನೇರ ರೈಲು ಸಂಪರ್ಕ ಸೇವೆ ಕಲ್ಪಿಸಲಾಗುವುದು ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು.

Advertisement

ನಗರ ರೈಲು ನಿಲ್ದಾಣದಲ್ಲಿ ಮೈಸೂರು – ಬೆಂಗಳೂರು ನಡುವೆ ವಾರದ ಆರು ದಿನ ಸಂಚರಿಸುವ ಮೆಮು ರೈಲು ಸೇವೆಗೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.

ಮೈಸೂರಿನಿಂದ ಚೆನ್ನೈಗೆ ಈಗಾಗಲೇ ನೇರ ರೈಲು ಸೇವೆ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಮೈಸೂರು-ಮುಂಬೈ, ಮೈಸೂರು-ಹೈದರಾಬಾದ್‌, ಮೈಸೂರು-ತಿರುವನಂತಪುರ ನಗರಗಳಿಗೆ ನೇರ ರೈಲು ಸೇವೆ ಒದಗಿಸಲಾಗುವುದು ಎಂದರು.

ಜಾಗದ ಕೊರತೆ: ಮೈಸೂರು ರೈಲು ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಜಾಗದ ಕೊರತೆಯಿಂದ ನಗರ ರೈಲು ನಿಲ್ದಾಣದ ವಿಸ್ತರಣೆ ಸಾಧ್ಯವಾಗದು, ಆದರೆ, ಮೈಸೂರಿನಿಂದ ಬೆಂಗಳೂರಿಗೆ ಹೋಗುವ ರೈಲುಗಳು ಕೆಂಗೇರಿ ತಲುಪಿದ ನಂತರ ಕೆಎಸ್‌ಆರ್‌ ಬೆಂಗಳೂರು ನಿಲ್ದಾಣಕ್ಕೆ ತಲುಪಲು ಸಾಕಷ್ಟು ಸಮಯಾವಕಾಶ ತೆಗೆದುಕೊಳ್ಳುತ್ತಿದೆ. ಇಂತಹ ಸಮಸ್ಯೆ ಮೈಸೂರಿನಲ್ಲಿ ಎದುರಾಗದಂತೆ ತಡೆಯಲು ನಾಗನಹಳ್ಳಿಗೆ ಸ್ಯಾಟಲೈಟ್ ರೈಲ್ವೆ ಟರ್ಮಿನಲ್ ಮಂಜೂರಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ನಡೆ ಯುತ್ತಿದೆ. ಈ ಯೋಜನೆ ಪೂರ್ಣಗೊಂಡರೆ ರೈಲು ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ರೈಲ್ವೆಯ ಎಲ್ಲಾ ಯೋಜನೆಗಳ ಪ್ರಸ್ತಾವನೆಗಳಿಗೆ ಮಂಜೂರಾತಿ ಪಡೆದುಕೊಂಡು ಕಾಮಗಾರಿ ಪೂರ್ಣಗೊಳಿಸಲಾಗು ವುದು ಎಂದು ಭರವಸೆ ವ್ಯಕ್ತಪಡಿಸಿದರು.

ರೈಲ್ವೆ ಸಂಪರ್ಕ: ನರೇಂದ್ರ ಮೋದಿ ಪ್ರಧಾನಮಂತ್ರಿ ಯಾದ ಮೇಲೆ ರೈಲುಗಳ ಸಂಪರ್ಕ ಹೆಚ್ಚಿದೆ. 2004 ರಿಂದ 2014ರವರೆಗೆ ಮೈಸೂರಿಗೆ ಒಂದೇ ಒಂದು ಹೊಸ ರೈಲು ಸೇರ್ಪಡೆಯಾಗಿರಲಿಲ್ಲ. ಆದರೆ, ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಹೊಸ ರೈಲು ಸೇರಿದೆ ಎಂದರು. ಹಿಂದಿನ ಸರ್ಕಾರದಲ್ಲಿ ರೈಲ್ವೆ ಸಚಿವ ಪಿಯುಷ್‌ ಗೋಯಲ್ ಅವರು ನಮ್ಮ ಸಾಕಷ್ಟು ಪ್ರಸ್ತಾವನೆಗಳಿಗೆ ಒಪ್ಪಿಗೆ ಕೊಟ್ಟು ಮಂಜೂರು ಮಾಡಿ ದ್ದರು. ಈಗ ಕರ್ನಾಟಕದವರೇ ಆದ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್‌ ಅಂಗಡಿಯವರು ಈಗ ಹಲವು ಯೋಜನೆಗಳನ್ನು ಮಂಜೂರು ಮಾಡಿ ಕೊಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

Advertisement

ವಿಸ್ತರಣೆ: ಮೈಸೂರು-ಬೆಂಗಳೂರು ನಡುವೆ ಪ್ರಯಾ ಣಿಕರ ಒತ್ತಡ ಹೆಚ್ಚಿದ್ದರೂ ಸಾಕಷ್ಟು ರೈಲುಗಳ ಸೇವೆ ಇರಲಿಲ್ಲ. ಹೀಗಾಗಿ, ಬೆಂಗಳೂರಿನಿಂದ ರಾಮನಗರದ ವರೆಗಿದ್ದ ಮೆಮು ರೈಲನ್ನು ಮೈಸೂರಿಗೆ ವಿಸ್ತರಿಸ ಲಾಗಿತ್ತು. ಈಗ ಈ ರೈಲು ಸೇವೆಯನ್ನು ಭಾನುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಿಗೂ ವಿಸ್ತರಿಸಲಾಗಿದೆ ಎಂದು ಹೇಳಿದರು.

ಅಖೀಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಗೆ ಕೇಂದ್ರ ಸರ್ಕಾರ 137 ಕೋಟಿ ರೂ. ಅನುದಾನ ನೀಡಿದ್ದು, ಈ ಅನುದಾನದಿಂದ ಕೈಗೆತ್ತಿಕೊಳ್ಳಲಾಗಿರುವ ಕಟ್ಟಡ ಕಾಮಗಾರಿ ಪೂರ್ಣವಾಗುತ್ತಿದ್ದು, ಶೀಘ್ರದಲ್ಲೇ ಉದ್ಘಾಟನೆ ಮಾಡಲಾಗುವುದು. ಹಾಗೆಯೇ ಹೆಬ್ಟಾಳ್‌ನಲ್ಲಿ ಸಾಫ್ಟ್ವೇರ್‌ ಟೆಕ್ನಾಲಜಿ ಪಾರ್ಕ್‌ ಕೆಲಸ ಕೂಡ ಶೀಘ್ರ ಪೂರ್ಣಗೊಳ್ಳಲಿದೆ ಎಂದರು.

ಕಡಿಮೆ ದರ: ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇ ಗೌಡ ಮಾತನಾಡಿ, ಬೆಂಗಳೂರಿನಿಂದ ರಾಮನಗರದ ವರೆಗಿದ್ದ ಮೆಮು ರೈಲು ಸೇವೆಯನ್ನು ವಾರದ ಆರು ದಿನಗಳ ಕಾಲ ಮೈಸೂರಿಗೆ ವಿಸ್ತರಿಸುವುದರಿಂದ ಕಡಿಮೆ ದರದಲ್ಲಿ ಮೈಸೂರು-ಬೆಂಗಳೂರು ನಡುವೆ ಸಂಚರಿಸಲು ಪ್ರಯಾಣಿಕರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಮೈಸೂರು-ವಾರಾಣಸಿ ರೈಲನ್ನು ವಾರದ ಆರು ದಿನಗಳಿಗೆ ವಿಸ್ತರಿಸಬೇಕು. ಬೆಂಗಳೂರಿನಿಂದ ಮೈಸೂರಿಗೆ ಮಧ್ಯಾಹ್ನ 3.30ರ ಟಿಪ್ಪು ಎಕ್ಸ್‌ಪ್ರೆಸ್‌ ಬಿಟ್ಟರೆ ಸಂಜೆ 5.20ರವರೆಗೆ ಬೇರೆ ರೈಲು ಇಲ್ಲ. ಹಾಗಾಗಿ, ಸಂಜೆ 4 ರಿಂದ 4.30ರ ನಡುವೆ ಮತ್ತೂಂದು ರೈಲು ಸೇವೆ ಒದಗಿಸುವಂತೆ ಒತ್ತಾಯಿಸಿದರು.

ಮೈಸೂರಿನಿಂದ ಬೆಂಗಳೂರಿಗೆ ಹೊರಡುವ ರೈಲುಗಳು ನಿಗದಿತ ಸಮಯಕ್ಕೆ ಕೆಂಗೇರಿ ತಲುಪಿದರೂ ಅಲ್ಲಿಂದ ಕೇಂದ್ರ ನಿಲ್ದಾಣಕ್ಕೆ ತಲುಪಲು ಅರ್ಧ ಗಂಟೆ ಕಾಯಬೇಕು. ಈ ಬಗ್ಗೆ ಗಮನಹರಿಸಿ ಸೇವೆ ವ್ಯತ್ಯಯವಾಗದಂತೆ ಸುಧಾರಣೆ ತರುವಂತೆ ಅವರು ಹೇಳಿದರು.

ಮೇಯರ್‌ ಪುಷ್ಪಲತಾ ಜಗನ್ನಾಥ್‌ ಮಾತನಾಡಿ ದರು. ಶಾಸಕ ಎಲ್.ನಾಗೇಂದ್ರ, ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ್‌ ಕುಮಾರ್‌ ಸಿಂಗ್‌, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಾ ಗರ್ಗ್‌, ಎಡಿಆರ್‌ಎಂ ದೇವಸ್ವಯಂ, ರೈಲ್ವೆ ಸಲಹಾ ಸಮಿತಿ ಸದಸ್ಯ ಗಿರಿಧರ್‌ ಈ ವೇಳೆ ಹಾಜರಿದ್ದರು.

ಬಿಎಸ್‌ವೈ ಬಹುಮತ ಸಾಬೀತು ನಿಶ್ಚಿತ: ಸಂಸದ:

ರಾಜಕೀಯದಲ್ಲಿ ನಂಬರ್‌ ಗೇಮ್‌ ಮುಖ್ಯವಾಗಿರುವುದರಿಂದ ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಹುಮತ ಸಾಬೀತುಪಡಿಸುವುದು ನಿಶ್ಚಿತ ಎಂದು ಸಂಸದ ಪ್ರತಾಪ್‌ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವಿಶ್ವಾಸಮತ ಸಾಬೀತುಪಡಿಸುವುದು ನಿಶ್ಚಿತ. ಈ ವಿಚಾರದಲ್ಲಿ ಯಾವ ಅನುಮಾನವೂ ಬೇಡ ಎಂದು ಹೇಳಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಅಧಿಕಾರಕ್ಕೆ ಬರಬೇಕಿತ್ತು. ಆದರೆ, 200 ರಿಂದ 5 ಸಾವಿರ ಮತಗಳ ಅಂತರದೊಳಗೆ 29 ಕ್ಷೇತ್ರಗಳಲ್ಲಿ ಸ್ಥಾನ ಕಳೆದುಕೊಂಡಿದ್ದರಿಂದ ಸಾಧ್ಯವಾಗಿರಲಿಲ್ಲ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರೂ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ. ಬದಲಿಗೆ ಪರಸ್ಪರ ಕಚ್ಚಾಡಿಕೊಂಡು ಸರ್ಕಾರ ಬೀಳಿಸಿ ಕೊಂಡಿದ್ದು, ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾರೆ. ಬಿಜೆಪಿ 105 ಶಾಸಕರನ್ನು ಹೊಂದಿರುವುದರಿಂದ ಸದನದಲ್ಲಿ ಹಾಜರಿರುವ ಸದಸ್ಯರ ಸಂಖ್ಯಾಬಲದ ಆಧಾರದ ಮೇಲೆ ಬಹುಮತ ಸಾಬೀತುಪಡಿಸುತ್ತೇವೆ ಎಂದು ತಿಳಿಸಿದರು.
ಮೆಮು ರೈಲು ವೇಳಾಪಟ್ಟಿ:

ಮೈಸೂರು – ಬೆಂಗಳೂರು ನುಡುವಿನ ಮೆಮು ರೈಲು ವೇಳಾಪಟ್ಟಿ ಪರಿಷ್ಕರಣೆ ಯಾಗಿದೆ. ವಾರದಲ್ಲಿ ನಾಲ್ಕು ದಿನ ಮಾತ್ರ ಸಂಚರಿಸುತ್ತಿದ್ದ ಮೆಮು ರೈಲು ಇನ್ನು ಮುಂದೆ ಭಾನುವಾರ ಹೊರತುಪಡಿಸಿ ವಾರದ ಆರು ದಿನವೂ ಸಂಜೆ 5.20ಕ್ಕೆ ಹೊರಟು, ರಾತ್ರಿ 8 ಗಂಟೆಗೆ ಮೈಸೂರು ತಲುಪುತ್ತದೆ. ಮತ್ತೆ ರಾತ್ರಿ 8.30ಕ್ಕೆ ಮೈಸೂರಿನಿಂದ ಹೊರಡುವ ಈ ರೈಲು ರಾತ್ರಿ 11 ಗಂಟೆಗೆ ಬೆಂಗಳೂರು ತಲುಪಲಿದೆ. ಕೇವಲ 2 ಗಂಟೆ 40 ನಿಮಿಷದ ಈ ಪ್ರಯಾಣಕ್ಕೆ 30 ರೂ. ಟಿಕೆಟ್ ದರ ನಿಗದಿ ಪಡಿಸಲಾಗಿದೆ.
ರನ್‌ ವೇ ವಿಸ್ತರಣೆ:

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಿ.ಟಿ.ದೇವೇ ಗೌಡ ಸಹಕಾರದಿಂದ ಮಂಡಕಳ್ಳಿ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಇದ್ದ ಭೂ ಸ್ವಾಧೀನ ಪ್ರಕ್ರಿಯೆ ತೊಡಕು ನಿವಾರಣೆಯಾ ಗಿದ್ದು, ಕೆಐಎಡಿಬಿಗೆ ಭೂ ಸ್ವಾಧೀನ ಹೊಣೆ ನೀಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣ ಗೊಂಡ ಕೂಡಲೇ ರನ್‌ವೇ ವಿಸ್ತರಣೆ ಕಾಮಗಾರಿ ಆರಂಭವಾಗಲಿದೆ. ಸದ್ಯ 1.7 ಕಿ.ಮೀ. ಉದ್ದ ಇರುವ ರನ್‌ ವೇಯನ್ನು 2.8 ಕಿ.ಮೀ.ಗೆ ವಿಸ್ತರಿ ಸಿದರೆ ಜೆಟ್, ಬೋಯಿಂಗ್‌ ವಿಮಾನಗಳೂ ಇಲ್ಲಿಂದ ಹಾರಾಟ ಮಾಡಬಹುದಾಗಿದೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next