ಹಾಸನ: ನಗರದ ಗಂಧದಕೋಠಿ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆಯ ನಿರ್ಮಾಣ ಆರಂಭವಾಗಿದೆ. ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್)ಗೆ ಸೇರಿರುವ 4 ಎಕರೆ ಪ್ರದೇಶದ ಒಂದು ಭಾಗದಲ್ಲಿ ಸೂಪರ್ ಸ್ಪೆಷಾಲಿಟ ಆಸ್ಪತ್ರೆ ನಿರ್ಮಾಣದ ಮೊದಲ ಹಂತದ 50 ಕೋಟಿ ರೂ. ಕಾಮಗಾರಿಗೆ ಶಾಸಕ ಪ್ರೀತಂ ಜೆ.ಗೌಡ ಅವರು ಶನಿವಾರ ಬೆಳಗ್ಗೆ ಭೂಮಿ ಪೂಜೆ ನೆರವೇರಿಸಿದರು.
ಹಿಂದಿನ ಸಮ್ಮಿಶ್ರ ಸರ್ಕಾರ 100 ಕೋಟಿ ರೂ. ಅಂದಾಜಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರಾತಿ ನೀಡಿ, ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಶಾಸಕರು ಭೂಮಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು.
ಹಂತ, ಹಂತವಾಗಿ ಅನುದಾನ ಬಿಡುಗಡೆ: ಈ ಸಂದರ್ಭದಲ್ಲಿ ಮಾತ ನಾಡಿದ ಶಾಸಕರು, ಮೊದಲ ಹಂತದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಮೊದಲ ಹಂತದ ಕಾಮಗಾರಿ 50 ಕೋಟಿ ರೂ. ಮಂಜೂರಾಗಿದ್ದು, ನೆಲ ಮತ್ತು ಮೊದಲ ಹಂತದ ಕಟ್ಟಡ ನಿರ್ಮಾಣವಾಗಲಿದೆ. ಮೂರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ 100 ಕೋಟಿ ರೂ. ಹಾಗೂ ಆಸ್ಪತ್ರೆಯ ಉಪಕರಣಗಳಿಗೆ ಸುಮಾರು 150 ರಿಂದ 200 ಕೋಟಿ ರೂ.ಗಳನ್ನು ಲೋಕೋಪಯೋಗಿ ಇಲಾಖೆ ಅಂದಾಜು ಮಾಡಿದೆ. ಹಂತ- ಹಂತವಾಗಿ ಅನುದಾನ ಬಿಡುಗಡೆಯಾಗಲಿದ್ದು, ಜಿಲ್ಲೆಯ ಪ್ರತಿ ನಾಗರೀಕನಿಗೆ ಅನುಕೂಲವಾಗುವಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲಿದೆ. ತ್ವರಿತವಾಗಿ ಕಾಮಾಗಾರಿ ಪೂರ್ಣಗೊಳಿಸಿ ರಾಜ್ಯದಲ್ಲೇ ಮಾದರಿ ಆಸ್ಪತ್ರೆಯನ್ನಾಗಿ ನಿರ್ಮಿಸುವ ಉದ್ದೇಶವಿದೆ ಎಂದರು.
ವೈದ್ಯಕೀಯ ಕಾಲೇಜಿಗೆ ಭೂಮಿ ಮಂಜೂರು: ಗಂಧದಕೋಠಿ ಆವರಣದ 24 ಎಕರೆಯಲ್ಲಿ 4 ಎಕರೆಯನ್ನು ವೈದ್ಯಕೀಯ ಕಾಲೇಜಿಗೆ ಮಂಜೂರು ಮಾಡಿದ್ದು, ಆ ಪ್ರದೇಶ ದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. 4 ಎಕರೆಯನ್ನು ಬಾಲಕಿಯರ ಪಿಯು ಕಾಲೇಜು ಮತ್ತು ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಮಂಜೂರು ಮಾಡಿದ್ದು, ಇನ್ನುಳಿದ ಪ್ರದೇಶದಲ್ಲಿ ಉದ್ಯಾನ ಉದ್ಯಾನವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಯವರ ಗಮನ ಸೆಳೆದು ಅನುದಾನ ಮಂಜೂರು ಮಾಡಿಸಲಾಗುವುದು ಎಂದರು. ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಬಿ.ಸಿ. ರವಿಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕೃಷ್ಣ ಮೂರ್ತಿ, ಲೋಕೋಪಯೋಗಿ ಇಲಾಖೆ ಕಾರ್ಯ ಪಾಲಕ ಎಂಜಿನಿಯರ್ ಸಿ.ಎಸ್.ಮಂಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.