ಧಾರವಾಡ: ನಗರದಲ್ಲಿ ಹಿಂದೆ ಸಾವಿರ ಕೆರೆಗಳಿದ್ದವು ಈಗ ಎಲ್ಲಾ ಗತಿಸಿ ಹೋಗಿ ಬೆರಳೆಣಿಕೆಯಷ್ಟೆ ಉಳಿದಿವೆ. ಮನೆಯ ಮುಂದಿನ ಮರದ ಜಾಗವನ್ನು ವಾಹನಗಳು ಅತಿಕ್ರಮಿಸಿವೆ. ಇದು ಹೀಗೆ ಮುಂದುವರಿದರೆ ಮುಂದಿನ ಪೀಳಿಗೆಗೆ ಚಿತ್ರದ ಮೂಲಕ ಗಿಡಮರಗಳನ್ನು ತೋರಿಸುವ ಸಂದರ್ಭ ಬರಲಿದೆ ಎಂದು ಪರಿಸರವಾದಿ, ನಟ ಸುರೇಶ ಹೆಬ್ಳೀಕರ ಹೇಳಿದರು.
ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ, ಏಕಸ್ ಪ್ರತಿಷ್ಠಾನ, ಹು-ಧಾ ಮಹಾನಗರ ಪಾಲಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಹಸಿರು ಸಿರಿ ನಗರ ಧಾರವಾಡ ನಿವಾಸಿಗಳ ಸಂಘದಿಂದ ರವಿವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೀರು, ಮಣ್ಣು, ಗಾಳಿ ಹೀಗೆ ಮಾನವನ ಬದುಕಿಗೆ ಪ್ರಮುಖವಾದ ಸಂಪತ್ತನ್ನು ನಾಶ ಮಾಡುತ್ತಿದ್ದೇವೆ. ಹವಾಮಾನ ವೈಪರಿತ್ಯ ಉಂಟಾಗಿ ಪರಿಸರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದರು.
ದೇಶದ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುವ ಕೃಷಿ, ಹೈನುಗಾರಿಕೆ, ತೋಟಗಾರಿಕೆಯನ್ನು ಮರೆಯುತ್ತಿದ್ದು, ಅನ್ಯದೇಶಿಯ ವ್ಯವಸ್ಥೆಗೆ ಮಾರು ಹೋಗುತ್ತಿದ್ದೇವೆ. ನಮ್ಮಲ್ಲಿ ಬೆಳೆಯುವ ಬೆಳೆಗಳನ್ನು ಬೇರೆ ದೇಶಕ್ಕೆ ರಫ್ತು ಮಾಡುತ್ತಿದ್ದ ನಾವೇ ಆಮದು ಮಾಡಿಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯಾನವನಗಳು ಮಕ್ಕಳಿಗೆ ಹಾಗೂ ಸಮುದಾಯ ಜನತೆಗೆ ಉಪಯುಕ್ತವಾಗಿದ್ದು ಇದರ ಸದುಪಯೋಗ ಪಡೆಯುವುದಲ್ಲದೆ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಮಾಜಿ ಮಹಾಪೌರ ಪೂರ್ಣಾ ಪಾಟೀಲ ಮಾತನಾಡಿ, ಪರಿಸರ ನಮ್ಮ ಸಂಪತ್ತಾಗಿದ್ದು, ಅದನ್ನು ಉಳಿಸಿ-ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಬಡಾವಣೆಯಲ್ಲಿ ನಿರ್ಮಿಸಿರುವ ಉದ್ಯಾನವನ್ನು ಅಚ್ಚುಕಟ್ಟಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕಾರ್ಯ ಎಂದರು.
ರಾಮಜೀ ರಾಘವನ್ ಮಾತನಾಡಿದರು.ಪ್ರತಿಷ್ಠಾನದ ಪ್ರಾದೇಶಿಕ ಮುಖ್ಯಸ್ಥ ಡಾ|ಎಂ.ಪಿ. ಬಬಿತಾ, ವಾಲ್ಮಿ ನಿರ್ದೇಶಕ ಡಾ| ರಾಜೇಂದ್ರ ಪಾಟೀಲ, ಸುಧಿಧೀರ ಪಾಟೀಲ, ಬಾಲಾಜಿ ನಾಡಕರ್ಣಿ,ಅರವಿಂದ ಜಮಖಂಡಿ, ಶಿವಾನಂದ ಚಲವಾದಿ ಇನ್ನಿತರರಿದ್ದರು.
ಇದೇ ಸಂದರ್ಭದಲ್ಲಿ ಹಸಿರು ಸಿರಿ ನಗರದ ನಿವಾಸಿಗಳು ಭಾಗವಹಿಸಿದ ಎಲ್ಲ ಮಕ್ಕಳಿಗೆ ನೋಟ್ಬುಕ್-ಪೆನ್ ವಿತರಿಸಿದರು. ಶಿವಾನಂದ ಚಲವಾದಿ ನಿರೂಪಿಸಿ, ವಂದಿಸಿದರು.