ಹುಬ್ಬಳ್ಳಿ: ಹಿಂದುಳಿದ ಪ್ರದೇಶಗಳ ಕಾಲೋನಿಗಳಲ್ಲಿ ಮೂಲಸೌಕರ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಸೋನಿಯಾಗಾಂಧಿ ನಗರದಲ್ಲಿ 20 ಲಕ್ಷ ರೂ. ವೆಚ್ಚದ ಉದ್ಯಾನವನ, ಎಂ.ಡಿ. ಕಾಲೋನಿಯಲ್ಲಿ 30 ಲಕ್ಷ ರೂ. ವೆಚ್ಚದ ತೆರೆದ ಚರಂಡಿ, ಸೆಟ್ಲಮೆಂಟ್‌ನ ದೊಡ್ಡಮನಿ ಕಾಲೋನಿಯಲ್ಲಿ 72 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿ ಸೇರಿದಂತೆ 1.22 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕೆಲವೇ ವರ್ಷಗಳ ಹಿಂದೆ ಮೂಲಸೌಕರ್ಯಗಳಿಂದ ವಂಚಿತವಾಗಿದ್ದ ಅನೇಕ ಕಾಲೋನಿಗಳು ಅಭಿವೃದ್ಧಿ ಕಾರ್ಯಗಳಿಂದ ಈಗ ಕಂಗೊಳಿಸುತ್ತಿವೆ. ಕಡುಬಡವರೇ ಹೆಚ್ಚು ವಾಸಿಸುವ
ಪ್ರದೇಶಗಳಲ್ಲಿ ಈಗಾಗಲೇ ಯುಜಿಡಿ, ಕುಡಿಯುವ ನೀರು, ಆಸ್ಪತ್ರೆ, ಬೀದಿದೀಪ, ಸಮುದಾಯ ಭವನ ಸೇರಿದಂತೆ ಇನ್ನಿತರೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಇದೀಗ ಉದ್ಯಾನವನ, ಕಾಂಕ್ರೀಟ್ ರಸ್ತೆ ನಿರ್ಮಾಣದಿಂದ ಕಾಲೋನಿಯ ಚಿತ್ರಣವೇ ಬದಲಾಗಲಿದೆ ಎಂದರು.
ಮುತುವಲ್ಲಿ ಬಾಬಾಜಾನ್ ನಧಾಫ್, ಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮೀಬಾಯಿ ಜಾಧವ, ಯಮನೂರು ಜಾಧವ, ವಿಜುನಗೌಡ ಪಾಟೀಲ, ಬಮ್ಮಾಪುರ ಬ್ಲಾಕ್ ಅಧ್ಯಕ್ಷ ಮೆಹಮೂದ್ ಕೋಳೂರ, ಮುಖಂಡರಾದ ಮೈನುದ್ದಿನ್ ಮುಚಾಲೆ, ಭಾಷಾ ಪುಲದಿನ್ನಿ, ಸುಭಾಷ್ ಮುತ್ತಗಿ ಇದ್ದರು.