ತುಮಕೂರು: ಪ್ರತಿಯೊಬ್ಬರ ಮನೆ ಬಾಗಿಲಿಗೆ ಕಾನೂನು ಹೋಗಬೇಕು ಎಂಬ ಸದುದ್ದೇಶದಿಂದ ಕಾನೂನು ಸಾಕ್ಷರತಾ ರಥಯಾತ್ರೆ ಆಯೋಜಿಸ ಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ರಾಜೇಂದ್ರ ಬಾದಾಮಿಕರ್ ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಶುಕ್ರ ವಾರ ಜಿಲ್ಲೆಯಾದ್ಯಂತ ಹಮ್ಮಿ ಕೊಂಡಿರುವ ಕಾನೂನು ಅರಿವು-ನೆರವು ಸಾಕ್ಷರತಾ ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಥಯಾತ್ರೆ ಪ್ರತಿ ತಾಲೂಕಿನಲ್ಲಿ 4 ದಿನ ಸಂಚರಿಸಲಿದ್ದು, ನಂತರ ಬೇರೆ ಜಿಲ್ಲೆಗಳಿಗೆ ತೆರಳಲಿದೆ. ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸುವುದು ಮುಖ್ಯ ಉದ್ದೇಶ. ಯಾರೂ ಕಾನೂನಿನ ಅರಿವಿಲ್ಲದೆ ಅವಕಾಶಗಳಿಂದ ವಂಚಿತ ವಾಗಬಾರದು. ಹಾಗಾಗಿ ಈ ಕಾನೂನು ಸಾಕ್ಷರತಾ ರಥ ಸಂಚರಿಸುತ್ತಿದ್ದು, ಪ್ರತಿ ಯೊಬ್ಬರೂ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಕೆ.ಅನಿಲ್ ಮಾತನಾಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಮ್ಮಿ ಕೊಂಡಿರುವ ರಥಯಾತ್ರೆಯ ಪ್ರಯೋಜನ ಸಾರ್ವಜನಿಕರು ಪಡೆದು ಕೊಳ್ಳಬೇಕು ಎಂದು ಹೇಳಿದರು.
ರಥಯಾತ್ರೆಯು ಬೆಳ್ಳಾವಿ ಗ್ರಾಪಂ, ಬುಗುಡನಹಳ್ಳಿ, ಕೋರಾ, ಕೆಸ್ತೂರು, ದೇವಲಾಪುರ, ಗೂಳೂರು, ಹೆತ್ತೇನಹಳ್ಳಿ, ಪಾಲಸಂದ್ರ, ಹೆಬ್ಬೂರು, ವನಸಿಗೆರೆ ಹಾಗೂ ನಾಗವಲ್ಲಿ ಗ್ರಾಪಂ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಸಂಚರಿಸಲಿದೆ. ಕಾನೂನು ಸೇವಾ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ನ್ಯಾ. ದಶರಥ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ದೇವರಾಜು, ವಕೀಲ ಚಂದ್ರಚೂಡಾ ಇದ್ದರು.