ಬೇತಮಂಗಲ: ಹೋಬಳಿ ವ್ಯಾಪ್ತಿಯ ಎನ್.ಜಿ.ಹುಲ್ಕೂರು ಗ್ರಾಮ ಪಂಚಾಯ್ತಿನ ಪೂಗಾನಗಳ್ಳಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣವಾಗಿ ತಿಂಗಳುಗಳೇ ಗತಿಸಿದರೂ ಆರಂಭಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.
ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರನ್ನು ಕಲ್ಪಿಸಲು ಜಿಪಂ ಯೋಜನೆ ಅಡಿಯಲ್ಲಿ ಕೈಗೊಂಡ ಘಟಕಕ್ಕೆ ಇಂದಿಗೂ ಯಂತ್ರೋಪಗಳು, ಇತರೆ ಪರಿಕರಗಳನ್ನು ಅಳವಡಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದ ಈ ಭಾಗದ ಜನತೆಗೆ ಶುದ್ಧ ನೀರು ಲಭ್ಯವಾಗುತ್ತಿಲ್ಲ. ಶುದ್ಧ ನೀರು ಬೇಕೆಂದರೆ ಪಕ್ಕದ ಗ್ರಾಮಗಳಿಗೆ ಹೋಗಿ ಹಣ ನೀರು ನೀರು ಖರೀದಿ ಮಾಡಬೇಕಾದ ಅನಿವಾರ್ಯತೆ ಇದೆ.
ಯಂತ್ರೋಪಕರಣ ಜೋಡಿಸಿಲ್ಲ: ಈಗಾಗಲೇ ಅಂತರ್ಜಲ ಬತ್ತಿಹೋಗಿ ಜನರಿಗೆ ಬೋರ್‌ವೆಲ್ ನೀರು ಕುಡಿಯಲು ಸಾಧ್ಯವಾಗುತ್ತಿಲ್ಲ. 1200 ಅಡಿ ಆಳದಿಂದ ಹೊರತೆಗೆಯುವ ನೀರು ಫ್ಲೋರೈಡ್ ಹಾಗೂ ಗಡುಸಾಗಿದ್ದು, ಈ ನೀರನ್ನು ಕುಡಿದು ಜನ ಮೂಳೆ ಸವೆತ, ಇತರೆ ರೋಗಗಳಿಂದ ಬಳಲುವಂತಾಗಿದೆ. ಹೀಗಾಗಿ ಬಡ ಜನರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಪ್ರತಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ಮುಂದಾಗಿದೆ.
ಅದರಂತೆ ಪೂಗಾನಗಳ್ಳಿಯಲ್ಲೂ ಘಟಕ ನಿರ್ಮಿಸಿದ್ದು, ಅದಕ್ಕೆ ಅಗತ್ಯ ಯಂತ್ರೋಪಕರಣ, ಸಲಕರಣೆ ಜೋಡಿಸಿಲ್ಲ. ಇದರಿಂದ ಘಟಕ ಪಾಳು ಬಿದ್ದಿದೆ.
ಗಡುಸು ನೀರೇ ಗತಿ: ಯುವಕರು ಮತ್ತು ದ್ವಿಚಕ್ರ ವಾಹನ ಬಳಸುವವರು ಸಮೀಪದ ಗ್ರಾಮವೊಂದಕ್ಕೆ ತೆರಳಿ ಶುದ್ಧ ಕುಡಿಯುವ ನೀರನ್ನು ವಾಹನಗಳ ಮೂಲಕ ಹೊತ್ತು ತರುತ್ತಾರೆ. ಆದರೆ, ವಾಹನ ಇಲ್ಲದವರು, ವೃದ್ಧಾಪ್ಯ ಜೀವನ ಸಾಗಿಸುತ್ತಿರುವ ಹಿರಿಯರಿಗೆ ಬಹುದೂರ ಹೋಗಿ ನೀರು ತರುವುದು ಕಷ್ಟವಾಗಿದೆ. ಆದ್ದರಿಂದ ವಿಧಿಯಿಲ್ಲದೇ ಗಡುಸು ನೀರನ್ನೇ ಕುಡಿಯುವ ಪರಿಸ್ಥಿತಿ ಇದೆ ಎಂದು ಯುವ ಮುಖಂಡ ಸುನಿಲ್ ಕುಮಾರ್ ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಪಕ್ಕದ ಊರಿನ ನೀರೇ ಗತಿ: ಇತ್ತೀಚಿನ ದಿನಗಳಲ್ಲಿ ಬೋರ್‌ವೆಲ್ಗಳಲ್ಲಿ ಕಲುಷಿತ ನೀರು ಬರುತ್ತವೆ ಎಂಬ ಸುದ್ದಿಯಾಗಿದೆ. ಅಂದಿನಿಂದಲೂ ಯಾವುದೇ ಗ್ರಾಮಸ್ಥರು ಕೊಳವೆಬಾವಿಗಳ ನೀರನ್ನು ಕುಡಿಯಲು ಹಿಂಜರಿಯುತ್ತಿದ್ದಾರೆ. ಗ್ರಾಮದಿಂದ ದೂರದೂರಿಗೆ ಹೋಗಿ ಕ್ಯಾನ್‌ಗೆ 20 ರೂ. ವರೆಗೂ ಹಣ ನೀಡಿ, ನೀರು ಕುಡಿಯುವ ಪರಿಸ್ಥಿತಿ ಇದೆ. ಈ ಬಗ್ಗೆ ಕೂಡಲೇ ಜಿಪಂ ಸಿಇಒ ಮತ್ತು ಜಿಲ್ಲಾಧಿಕಾರಿಗಳು ಗಮನ ಹರಿಸಿ ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಬೇಕೆಂದು ಮನವಿ ಮಾಡಿದ್ದಾರೆ.