ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಸ್ಥಳಗಳಲ್ಲಿ ಸಂಚರಿಸುವಾಗ ನಿಮಗೆ ಸುಗುಣ ಫುಡ್ಸ್, ಸುಗುಣ ಚಿಕನ್ ಮಾರಾಟದ ಅಂಗಡಿ, ಜಾಹೀರಾತನ್ನು ಗಮನಿಸಿದ್ದಿರಬಹುದು. ಹೌದು ಸುಗುಣ ಫುಡ್ಸ್ ಭಾರತದ 20 ರಾಜ್ಯಗಳಲ್ಲಿ ಶಾಖೆಯನ್ನು ಹೊಂದಿದೆ. ಕೀನ್ಯಾ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿಯೂ ಸುಗುಣ ಫುಡ್ಸ್ ಹೆಸರು ಪಡೆದಿದೆ. ಅಂದಹಾಗೆ ಇದು ಕೊಯಂಬತ್ತೂರು ಮೂಲದ ಕಂಪನಿ ಕೇವಲ 5 ಸಾವಿರ ರೂಪಾಯಿಯ ಸಣ್ಣ ಮೊತ್ತದಲ್ಲಿ ಆರಂಭವಾಗಿದ್ದ ಈ ಸುಗುಣ ಫುಡ್ ಇಂದು ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಅವೆಲ್ಲಕ್ಕಿಂತ ಹೆಚ್ಚಾಗಿ ಈ ಉದ್ಯಮದ ಯಶಸ್ಸಿನ ಹಿಂದಿನ ಕಥೆ ರೋಚಕವಾಗಿದೆ…
ಮೊದಲು ಅದೃಷ್ಟ ಪರೀಕ್ಷೆಗೆ ಇಳಿದದ್ದು ಕೃಷಿ ಕ್ಷೇತ್ರಕ್ಕೆ:
ತಮಿಳುನಾಡಿನ ಉದುಮಲ್ ಪೇಟ್ ಹಳ್ಳಿಯ ಬಿ.ಸೌಂದರರಾಜನ್ ಮತ್ತು ಜಿ.ಬಿ ಸುಂದರರಾಜನ್ ಜನಿಸಿದ್ದರು. ಇವರು ಪ್ರೌಢಶಿಕ್ಷಣದ ನಂತರ ಕಾಲೇಜು ಶಿಕ್ಷಣ ಪಡೆದಿರಲಿಲ್ಲವಾಗಿತ್ತು. ತಂದೆ ಬಂಗಾರುಸಾಮಿ, ಹಿರಿಯ ಮಗ ಸೌಂದರರಾಜನ್ ಬಳಿ ಏನಾದರು ಸ್ವಂತ ಉದ್ಯಮ ಆರಂಭಿಸುವಂತೆ ಸಲಹೆ ನೀಡಿದ್ದರು. ಇವರಿಗೆ ಪೂರ್ವಜರಿಂದ ಬಂದ ಸುಮಾರು 20 ಎಕರೆ ಕೃಷಿ ಭೂಮಿ ಇತ್ತು. ಈ ಭೂಮಿಯಲ್ಲಿ ಹತ್ತಿ ಬೆಳೆಯುವ ಬದಲು ತರಕಾರಿ ಬೆಳೆಯಲು ಸೌಂದರರಾಜನ್ ನಿರ್ಧರಿಸಿದ್ದರು. ನಂತರ ಕುಟುಂಬದ ಸದಸ್ಯರು ಸ್ವಲ್ಪ ಆರ್ಥಿಕ ನೆರವನ್ನು ನೀಡಿದ್ದರು. ಸುಮಾರು ಮೂರು ವರ್ಷಗಳ ಕಾಲ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.
ಸೌಂದರರಾಜನ್ ಗೆ ಕೃಷಿ ಕೈಹಿಡಿಯಲಿಲ್ಲವಾಗಿತ್ತು. ಬರೋಬ್ಬರಿ ಎರಡು ಲಕ್ಷ ರೂಪಾಯಿ ನಷ್ಟ ಅನುಭವಿಸಿಬಿಟ್ಟಿದ್ದರು. ಬಳಿಕ ಕೊಯಂಬತ್ತೂರಿನ ಪೀಠೋಪಕರಣ ತಯಾರಿಕೆ ಕಂಪನಿಯಲ್ಲಿ ಒಂದೂವರೆ ವರ್ಷಗಳ ಕಾಲ ಸಂಬಳ ಇಲ್ಲದೆ ಕೆಲಸ ಮಾಡಿದ್ದರು! ಇದರಿಂದ ಬೇಸತ್ತು ಸೌಂದರರಾಜನ್ ಹೈದರಾಬಾದ್ ಗೆ ತೆರಳಿ ಅಲ್ಲಿ ಕೃಷಿ ಪಂಪ್ ಮಾರಾಟ ಮಾಡುವ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಪಂಪ್ ಮಾರಾಟ ಮತ್ತು ಮಾರ್ಕೆಟಿಂಗ್ ಅವರ ಕೆಲಸವಾಗಿತ್ತು.
ಸೌಂದರರಾಜನ್ ಗೆ ತೆಲುಗು ಅಥವಾ ಇಂಗ್ಲಿಷ್ ಭಾಷೆ ಮಾತನಾಡಲು ಬರುತ್ತಿರಲಿಲ್ಲವಂತೆ. ಆದರೂ ಆಂಧ್ರಪ್ರದೇಶದಾದ್ಯಂತ ಪಂಪ್ ಮಾರಾಟ ಮಾಡಲು ಸುತ್ತಾಡಿದ್ದರು. ಇದರಿಂದಾಗಿ ಮಾರಾಟ, ಮಾರ್ಕೆಟಿಂಗ್ ಮತ್ತು ಅಕೌಂಟಿಂಗ್ ಬಗ್ಗೆ ಆಳವಾದ ಜ್ಞಾನಪಡೆಯಲು ಸಾಧ್ಯವಾಗಿತ್ತಂತೆ. ಏತನ್ಮಧ್ಯೆ ರೈತರ ಪ್ರತಿಭಟನೆಯಿಂದ ಕಂಪನಿಯ ವ್ಯಾಪಾರದ ಮೇಲೆ ಪರಿಣಾಮ ಬೀರಿತ್ತು. ಇದರಿಂದಾಗಿ ಮಾರುಕಟ್ಟೆಯಲ್ಲಿ ಪಂಪ್ ಮಾರಾಟ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ಇಷ್ಟೆಲ್ಲಾ ಆದರೂ ತಾನು ಸ್ವಂತವಾಗಿ ಏನಾದರೂ ಮಾಡಲೇಬೇಕೆಂಬ ಸೌಂದರರಾಜನ್ ಒಳಗಿನ ಕನಸು ಜೀವಂತವಾಗಿಯೇ ಇತ್ತು. ಇದರ ಪರಿಣಾಮ 1986ರಲ್ಲಿ ಆಂಧ್ರದಿಂದ ಮತ್ತೆ ತಮ್ಮ ಹಳ್ಳಿಗೆ ವಾಪಸ್ ಆಗಿದ್ದರು.
ಕೋಳಿ ಮಾರಾಟ ಉದ್ಯಮ ಆರಂಭ:
ಸೌಂದರರಾಜನ್ ಅವರು ಕೊಯಂಬತ್ತೂರಿನಲ್ಲಿ ತಮ್ಮ ಸಹೋದರ ಜಿಬಿ ಸುಂದರರಾಜನ್ ಅವರ ಜತೆಗೂಡಿ ಚಿಕ್ಕದಾದ ಕೋಳಿ ಮಾರಾಟ ಕಂಪನಿ(ಸುಗುಣ ಫುಡ್ಸ್ ಪ್ರೈ. ಲಿಮಿಟೆಡ್)ಯನ್ನು ಆರಂಭಿಸಿದ್ದರು. ಇದಕ್ಕೆ ಹೂಡಿದ್ದ ಬಂಡವಾಳ 5 ಸಾವಿರ ರೂಪಾಯಿ ಮಾತ್ರ. ಕೋಳಿಗಳಿಗೆ ಬೇಕಾದ ಆಹಾರ, ಕೋಳಿ ಮರಿಯನ್ನು ಇತರ ಕೋಳಿ ಮಾರಾಟ ಕಂಪನಿಗಳಿಗೆ ಸರಬರಾಜು ಮಾಡುತ್ತಿದ್ದರು.
ಮೂರು ವರ್ಷಗಳ ವ್ಯಾಪಾರದಲ್ಲಿ ಸಹೋದರರಿಗೆ ತಿಳಿದು ಬಂದಿದ್ದು ಏನೆಂದರೆ ಹಲವಾರು ರೈತರು ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದು ಕೃಷಿಯನ್ನು ಬಿಡುತ್ತಿದ್ದಾರೆ ಎಂಬುದು! ಆಗ ಇವರಿಗೆ ಹೊಳೆದ ಉಪಾಯ ಕಾಂಟ್ರಾಕ್ಟ್ ಫಾರ್ಮಿಂಗ್(ಕೋಳಿ ಸಾಕಣೆ ಗುತ್ತಿಗೆ). ಅಂದರೆ ಇದು ಕೃಷಿ ಚಟುವಟಿಕೆ ರೀತಿಯೇ ಇರುವ ಉತ್ಪಾದನೆ. ರೈತರು ಮತ್ತು ಖರೀದಿದಾರರ ನಡುವೆ ಒಪ್ಪಂದ ಮಾಡಿಕೊಳ್ಳುವುದು ಎಂಬುದು ಸುಗುಣ ಫುಡ್ಸ್ ಯೋಚಿಸಿತ್ತು. ಇದರಿಂದ ಮಧ್ಯವರ್ತಿಗಳಿಗೂ ಕಡಿವಾಣ ಬೀಳಲಿದೆ ಎಂಬುದನ್ನು ಸೌಂದರರಾಜನ್ ಸಹೋದರರು ಮನಗಂಡಿದ್ದರು.
1990ರಲ್ಲಿ ಸುಗುಣ ಫುಡ್ಸ್ ಮೂರು ಕೋಳಿ ಸಾಕಣೆ ಫಾರಂಗಳನ್ನು ಹೊಂದಿತ್ತು. ಹೀಗೆ ಕೋಳಿ ಸಾಕಣೆ ಗುತ್ತಿಗೆ ಒಪ್ಪಂದ ಆರಂಭಿಸಿತ್ತು. ಇವರು ರೈತರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತಿದ್ದರು. ಕೋಳಿ ಮರಿ, ಆಹಾರ, ಔಷಧವನ್ನು ಒದಗಿಸುತ್ತಿದ್ದರು. ನಂತರ ಕೋಳಿ ಬೆಳೆದ ಕೂಡಲೇ ರೈತರು ಸುಗುಣ ಫುಡ್ಸ್ ಗೆ ನೀಡಬೇಕಾಗಿತ್ತು. ಈ ನಿರ್ಧಾರ ಕೇಳಿ ಆರಂಭದಲ್ಲಿ ಎಲ್ಲರೂ ತಮಾಷೆ ಮಾಡಿದ್ದರಂತೆ. ಈ ಯೋಜನೆ ಯಾವತ್ತು ಯಶಸ್ವಿಯಾಗುವುದಿಲ್ಲ ಎಂದು ಆಡಿಕೊಂಡಿರುವುದಾಗಿ ಸೌಂದರರಾಜನ್ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.
ಈ ಕೋಳಿ ಮಾಂಸ ಮಾರಾಟ, ಕೋಳಿ ಮಾರಾಟದ ಉದ್ಯಮ ಯಶಸ್ವಿಯಾಗಲ್ಲ ಎಂದು ಟೀಕಿಸಿದವರು 1997ರಲ್ಲಿ ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿಪಡುವಂತಾಗಿತ್ತು. ಯಾಕೆಂದರೆ ಸುಗುಣ ಫುಡ್ಸ್ ಕಂಪನಿ ಬರೋಬ್ಬರಿ 7 ಕೋಟಿ ರೂಪಾಯಿ ವಹಿವಾಟು ನಡೆಸಿತ್ತು! ಅಷ್ಟೇ ಅಲ್ಲ ಮೂರು ವರ್ಷಗಳಲ್ಲಿ ರೈತರು ಕೂಡಾ ಹೆಚ್ಚುವರಿಯಾಗಿ ಮಾಡಿದ್ದ ಸಾಲವನ್ನು ತೀರಿಸಿದ್ದರು.
ಕಾಂಟ್ರಾಕ್ಟ್ ಫಾರ್ಮಿಂಗ್ ಮಾದರಿ ಅನುಸರಿಸುವ ಮೂಲಕ 40 ಸಾವಿರಕ್ಕಿಂತಲೂ ಅಧಿಕ ರೈತರ ಆದಾಯಕ್ಕೆ ಸುಗುಣ ಫುಡ್ಸ್ ಅನುಕೂಲ ಕಲ್ಪಿಸಿಕೊಟ್ಟಿತ್ತು. ಆರಂಭದಲ್ಲಿಯೇ ಸುಗುಣ ಫುಡ್ಸ್ ಉತ್ತಮ ಗುಣಮಟ್ಟದ ಕೋಳಿ, ಕೋಳಿ ಮಾಂಸ, ಫುಡ್ ಪ್ರಾಡಕ್ಟ್ಸ್ ಗೆ ಹೆಚ್ಚು ಒತ್ತು ನೀಡಿತ್ತು. ಸುಗುಣ ಫುಡ್ಸ್ ದೇಶಾದ್ಯಂತ 66 ಆಹಾರೋತ್ಪನ್ನ ಮಿಲ್ ಗಳನ್ನು ಹೊಂದಿದೆ. ಈ ಸಹೋದರರ ಉದ್ಯಮ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗಮನ ಸೆಳೆದಿತ್ತು. ಇಂಟರ್ ನ್ಯಾಶನಲ್ ಫೈನಾನ್ಸ್ ಕಾರ್ಪೋರೇಶನ್ ಇವರನ್ನು ಸಂಪರ್ಕಿಸಿತ್ತು. ಇದರಿಂದಾಗಿ 2017ರಲ್ಲಿ ಐಎಫ್ ಸಿ ಕಂಪನಿಯಲ್ಲಿ ಭಾರೀ ಮೊತ್ತದ ಹಣವನ್ನು ಹೂಡಿಕೆ ಮಾಡಿತ್ತು.
ನಮ್ಮದು ಯಾವುದೇ ಕಾರಣಕ್ಕೂ ಪಬ್ಲಿಕ್ ಕಂಪನಿಯನ್ನಾಗಿ ಮಾಡುವ ಉದ್ದೇಶ ಇಲ್ಲ, ಇದೊಂದು ಕುಟುಂಬದ ವ್ಯವಹಾರವಾಗಿ ಮುಂದುವರಿಸಲಿದ್ದೇವೆ. ಇದೀಗ ಸುಗುಣ ಫುಡ್ಸ್ ಕಂಪನಿಯ ವಹಿವಾಟು 8,700 ಕೋಟಿ ರೂಪಾಯಿ!
*ನಾಗೇಂದ್ರ ತ್ರಾಸಿ