Advertisement
ಸೆಂಟ್ರಲ್ ಮಾರುಕಟ್ಟೆ ಮುಂಭಾಗ ತರಕಾರಿ ವ್ಯಾಪಾರ ನಡೆಸುತ್ತಿರುವ ಸುಮಾರು 50 ರೈತ ಮಹಿಳೆಯರು ಸಾಮಾಜಿಕ ಕಾರ್ಯಕರ್ತೆ ರೀಟಾ ನೊರೋನ್ಹಾ ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಿ ವಲಯದೊಳಗೆ ಮಂಗಳವಾರ ವ್ಯಾಪಾರ ಆರಂಭಿಸಿದ್ದಾರೆ. ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಇರದ ಕಾರಣ ಮೊದಲ ದಿನದ ವ್ಯಾಪಾರ ಕಡಿಮೆಯಾಗಿತ್ತು.
ಇಲ್ಲಿನ ವ್ಯಾಪಾರಿಗಳು ಮೊದಲ ದಿನವೇ ಬಿಸಿಲಿನ ಪೆಟ್ಟಿಗೆ ಕಂಗಾಲಾದರು. ವಲಯದೊಳಗೆ ಒಂದು ವಾರ ಕುಳಿತು ವ್ಯಾಪಾರ ಮಾಡಿದರೆ, ಎಲ್ಲ ಅಗತ್ಯ ವ್ಯವಸ್ಥೆ, ಬಿಸಿಲಿನಿಂದ ಮುಕ್ತಿ ನೀಡುವ ಸೌಕರ್ಯವನ್ನು ಕಲ್ಪಿಸುವುದಾಗಿ ಪಾಲಿಕೆ ತಿಳಿಸಿದೆಯಾದರೂ, ಒಂದು ವಾರದವರೆಗೆ ಬಿಸಿಲಿನಲ್ಲಿ ಹೇಗೆ ವ್ಯಾಪಾರ ನಡೆಸುವುದು ಎಂಬ ಪ್ರಶ್ನೆಯಲ್ಲಿದ್ದಾರೆ. ಜತೆಗೆ ವಲಯದ ಸುತ್ತಲೂ ಕಾಂಪೌಂಡ್ ಇರುವುದರಿಂದ ಹೊರಭಾಗದ ಸಾರ್ವಜನಿಕರಿಗೆ ವಲಯದ ಬಗ್ಗೆ ಗೊತ್ತಾಗುತ್ತಿಲ್ಲ. ಹೀಗಾಗಿ ವ್ಯಾಪಾರ ಆಗುತ್ತಿಲ್ಲ ಎಂಬ ಆರೋಪವೂ ಕೇಳಿ ಬಂತು. ಬುಧವಾರ ನಗರದ ಬೀದಿ ಬದಿ ವ್ಯಾಪಾರಿಗಳು ಇದೇ ವಲಯದೊಳಗೆ ವ್ಯಾಪಾರ ಆರಂಭಿಸುವ ನಿರೀಕ್ಷೆ ಇದೆ. ಈ ವಲಯದಲ್ಲಿ ಸುಮಾರು 1 ಎಕರೆಗಿಂತಲೂ ಅಧಿಕ ಸ್ಥಳವಿದ್ದು, 250 ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶವಿದೆ. ಪ್ರಸ್ತುತ ಪಾಲಿಕೆ ವತಿಯಿಂದ ಗುರುತು ಚೀಟಿ ನೀಡಲಾದ 208 ಬೀದಿ ಬದಿ ವ್ಯಾಪಾರಿಗಳ ಸಂಘದ ಸದಸ್ಯರಿಗೆ ಇಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ.
Related Articles
Advertisement
‘ವಾರದೊಳಗೆ ಮೂಲಸೌಲಭ್ಯ’ಸ್ಟೇಟ್‌ಬ್ಯಾಂಕ್‌ನ ಬೀದಿ ಬದಿ ವ್ಯಾಪಾರಿ ವಲಯದೊಳಗೆ ಗುರುತಿನ ಚೀಟಿ ಪಡೆದುಕೊಂಡವರ ಪೈಕಿ ಮಂಗಳವಾರ ಕೆಲವು ಮಹಿಳೆಯರು ವ್ಯಾಪಾರ ಆರಂಭಿಸಿದ ಬಗ್ಗೆ ತಿಳಿದಿದೆ. ಇದೇ ರೀತಿ ಗುರುತಿನ ಚೀಟಿ ಪಡೆದುಕೊಂಡವರು ಇಲ್ಲಿ ವ್ಯಾಪಾರ ನಡೆಸಿದರೆ, ಒಂದು ವಾರದೊಳಗೆ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು ಕಲ್ಪಿಸುತ್ತೇವೆ. ವ್ಯಾಪಾರಿಗಳಿಗೆ ಬಿಸಿಲಿನಿಂದ ರಕ್ಷಣೆ ಹಾಗೂ ಎದುರಿನ ಕಾಂಪೌಂಡ್ ತೆರವು ಮಾಡಲಾಗುವುದು.
– ಕವಿತಾ ಸನಿಲ್, ಮೇಯರ್