ಸಕಲೇಶಪುರ: ಆಲೂರು ಪಟ್ಟಣ ಪಂಚಾಯಿತಿ ಚುನಾವಣೆಗೆ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಿಂದ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಕಸರತ್ತು ಆರಂಭಿಸಿದ್ದು ಲೋಕಸಭಾ ಚುನಾವಣೆ ಫಲಿತಾಂಶ ಪಟ್ಟಣ ಪಂಚಾಯಿತಿ ಚುನಾವಣೆ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದೆ.
5,212 ಮತದಾರರು: ರಾಜ್ಯದ ಅತ್ಯಂತ ಕಡಿಮೆ ಮತದಾರರಿರುವ ಪಟ್ಟಣ ಆಲೂರಾಗಿದ್ದು 2,617 ಪುರುಷರು, 2,595 ಮಹಿಳೆಯರು ಸೇರಿ ಒಟ್ಟು 5,212 ಮತದಾರರಿದ್ದು, ಆಲೂರು ಪಟ್ಟಣ ಪಂಚಾಯಿತಿಗೆ ಮೇ 29 ಕ್ಕೆ ಚುನಾವಣಾ ದಿನಾಂಕ ನಿಗದಿಯಾಗಿದೆ. ಮೇ 16ರಂದು ನಾಮಪತ್ರ ಸಲ್ಲಿಕೆಗೆ ಕಡೆ ದಿನವಾಗಿದೆ. ಮೇ 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮೇ 20ರಂದು ನಾಮಪತ್ರ ಹಿಂಪಡೆಯಲು ಕಡೆದಿನವಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ 11 ವಾರ್ಡುಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ಸದ್ದಿಲ್ಲದೇ ಮತದಾರರನ್ನು ಓಲೈಸಲು ಮುಂದಾಗಿದ್ದಾರೆ.
ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಸಾಮಾನ್ಯ-3, ಸಾಮಾನ್ಯ ಮಹಿಳೆ-3, ಪರಿಶಿಷ್ಟ ಜಾತಿ-2, ಪರಿಶಿಷ್ಟ ಪಂಗಡ-1, ಪರಿಶಿಷ್ಟ ಜಾತಿ ಮಹಿಳೆ-1 ಮತ್ತು ಹಿಂದುಳಿದ ವರ್ಗ (ಎ)-1 ಸ್ಥಾನಕ್ಕೆ ಮೀಸಲಾತಿ ಹೊರಬಿದ್ದಿದೆ.
ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅನುಮಾನ: ಲೋಕಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಒಂದೆಡೆ ಜನ ಕಾಯುತ್ತಿದ್ದು ಮತ್ತೂಂದೆಡೆ ಪಟ್ಟಣ ಪಂಚಾಯಿತಿ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ವಾರ್ಡುಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡು ಒಟ್ಟಾಗಿ ಕೆಲಸ ಮಾಡಿದ್ದು, ಆದರೆ ಮುಂಬರುವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆಯಾಗುವುದು ಬಹುತೇಕ ಅನುಮಾನವಾಗಿದೆ.
ವೈಯಕ್ತಿಕ ವರ್ಚಸ್ಸೇ ಪ್ರಮುಖ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಗಳ ವರ್ಚಸ್ಸಿಗಿಂತ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ಮತದಾರರನ್ನು ಸೆಳೆಯುವಲ್ಲಿ ಮುಖ್ಯ ಪಾತ್ರ ವಹಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದ 5 ವರ್ಷಗಳ ಹಿಂದೆ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿದ್ದ ಕೆಜೆಪಿ ಪಕ್ಷ, ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು 11 ಸ್ಥಾನಗಳ ಪೈಕಿ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಜೆಡಿಎಸ್ 4 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿ 1ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ರಾಜ್ಯದಲ್ಲಿ ಬಿಜೆಪಿಯೊಂದಿಗೆ ಕೆಜಿಪಿ ವಿಲೀನವಾದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಕೆಜೆಪಿ ಪಕ್ಷದಿಂದ ಗೆಲುವು ಸಾಧಿಸಿದ 6 ಮಂದಿ ಜೆಡಿಎಸ್ ಬೆಂಬಲಿಸಿದ್ದರು. ಆದರೆ ನಂತರ ಇತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವರು ಕಾಂಗ್ರೆಸ್ ಸಹ ಬೆಂಬಲಿಸಿದ್ದರು.
ಅಧಿಕಾರ ಹಂಚಿಕೆ: ಬಿಸಿಎಂ ಎ ಮಹಿಳೆಗೆ ಮೊದಲ ಅಧ್ಯಕ್ಷ ಅವಧಿಗೆ ಮೀಸಲು ಬಂದಿದ್ದರಿಂದ ಪಕ್ಷೇತರ ಅಭ್ಯರ್ಥಿ ನೀಲುಫರ್ ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು 2ನೇ ಅವಧಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ತಲಾ 8 ತಿಂಗಳಂತೆ ಜಯಣ್ಣ, ಆಶಾ ಮಲ್ಲಿಕಾರ್ಜುನ್, ನಂದೀಶ್ ಅಧಿಕಾರ ನಡೆಸಿದರು. ಮೊದಲ ಅವಧಿಯಲ್ಲಿ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು ಜಯಮ್ಮ ಮತ್ತು ಗಂಗಾಧರ್ ತಲಾ 15 ತಿಂಗಳು ಅಧಿಕಾರ ಹಂಚಿಕೊಂಡಿದ್ದು, ಎರಡನೇ ಅವಧಿಯ ಉಪಾಧ್ಯಕ್ಷ ಸ್ಥಾನ ಬಿಸಿಎಮ್-ಎಗೆ ಮೀಸಲಾಗಿದ್ದರಿಂದ ಜಾಫರ್ ಷರೀಫ್, ಮಂಜುನಾಥ್ ತಲಾ 15 ತಿಂಗಳು ಅಧಿಕಾರ ಹಂಚಿಕೊಂಡು ಆಡಳಿತ ನಡೆಸಿದ್ದರು.
ಲೋಕಸಭಾ ಚುನಾವಣೆ ಮುಗಿದ ತಕ್ಷಣ ಪಟ್ಟಣ ಪಂಚಾಯಿತಿ ಚುನಾವಣೆ ಎದುರಾಗುತ್ತದೆ ಎಂಬ ಮುನ್ಸೂಚನೆಯಿಂದ ಪಟ್ಟಣ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದ ಪ್ರಮುಖರು ಲೋಕಸಭೆ ಚುನಾವಣೆಯಲ್ಲಿ ಭರ್ಜರಿಯಾಗಿ ತೊಡಗಿಸಿಕೊಂಡಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಬಣ ರಾಜಕೀಯ ಹೆಚ್ಚಾಗಿರುವುದರಿಂದ ಜೆಡಿಎಸ್‌ಗೆ ಅನುಕೂಲವಾಗುವ ಎಲ್ಲಾ ಸಾಧ್ಯತೆಗಳಿದೆ.
● ಸುಧೀರ್ ಎಸ್.ಎಲ್