ಮುಂಜಾನೆ ಹಾಸಿಗೆ ಬಿಟ್ಟು ಏಳುವುದು ಎಲ್ಲರಿಗೂ ಕಷ್ಟದ ವಿಷಯ. ಆದರೆ ಅನಿವಾರ್ಯ ಕಾರ್ಯಗಳ ಒತ್ತಡದಿಂದ ಏಳಲೇಬೇಕು. ಜತೆಗೆ ಆರೋಗ್ಯದ ಬಗ್ಗೆ ತುಸು ಕಾಳಜಿ ಹೆಚ್ಚಿರುವವರು ಕಷ್ಟಪಟ್ಟಾದರೂ ಎದ್ದು ವ್ಯಾಯಾಮ ಮಾಡುತ್ತಾರೆ.
ಆದರೆ ಎಳುವ ಮುನ್ನ ಬೆಡ್‌ನಲ್ಲೇ ಕೆಲವು ವ್ಯಾಯಾಮಗಳನ್ನು ಮುಖ್ಯವಾಗಿ ಯೋಗ ಭಂಗಿಗಳನ್ನು ಮಾಡುವುದರಿಂದ ಸುಲಲಿತವಾಗಿ ಬೆಡ್‌ನಿಂದ ಏಳಲು ದೇಹ ಮತ್ತು ಮನಸ್ಸಿಗೆ ಪ್ರೋತ್ಸಾಹ ಸಿಗುತ್ತದೆ. ಜತೆಗೆ ಮುಂದಿನ ಕೆಲಸ ಕಾರ್ಯಗಳನ್ನು ಸುಗಮವಾಗಿ ನಡೆಸಲು ಸಾಧ್ಯವಾಗುತ್ತದೆ.
ಹಾಸಿಗೆಯಲ್ಲೇ ವ್ಯಾಯಾಮ ಪ್ರಾರಂಭಿಸುವಾಗ ಮೊದಲು ಬೆಕ್ಕು ಹಸು ಭಂಗಿ ಅಥವಾ ಮರ್ಜಾರ್ಯಾಸನ- ಬಿಟಿಲಾಸನವನ್ನು ಮಾಡುವುದು ಒಳ್ಳೆಯದು. ಇದರಿಂದ ಮನಸ್ಸು ಶಾಂತಗೊಂಡು ದೇಹ ಶಕ್ತಿಯುತವಾಗುತ್ತದೆ.
ಪ್ರತಿ ದಿನ ಈ ಭಂಗಿಯೊಂದಿಗೆ ದಿನವನ್ನು ಪ್ರಾರಂಭಿಸಿದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಒತ್ತಡ ಕಡಿಮೆಯಾಗುತ್ತದೆ. ದಿನವೀಡಿ ಶಾಂತವಾಗಿ ಇರಲು ಸಹಾಯ ಮಾಡುತ್ತದೆ.
ದಿನವೀಡಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಿಗೆ ಈ ಯೋಗ ಭಂಗಿ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಬೆನ್ನಿನ ಸ್ನಾಯುಗಳನ್ನು ಸಡಿಲಗೊಳಿಸಿ ಬೆನ್ನು ನೋವಿನಿಂದ ಮುಕ್ತಿಕೊಡುತ್ತದೆ. ಒತ್ತಡದ ಹಾರ್ಮೋನ್ ಣಅನ್ನು ಕಡಿಮೆ ಮಾಡಿ ದೈನಂದಿನ ಚಟುವಟಿಕೆಗಳನ್ನು ಸುಲಭವಾಗಿ ನಿರ್ವಹಿಸಲು ಮನಸ್ಸನ್ನು ಶಾಂತಗೊಳಿಸಲು ಈ ಯೋಗಭಂಗಿಯಿಂದ ಸಾಧ್ಯವಿದೆ. ಇದು ಸ್ವಯಂ ಅರಿವು ಮತ್ತು ಆಂತರಿಕ ಶಾಂತಿಯನ್ನು ಸುಧಾರಿಸುತ್ತದೆ.
ಬೆಕ್ಕು ಹಸುವಿನ ಭಂಗಿಯು ದೇಹದ ಭಂಗಿಯನ್ನು ಸರಿಪಡಿಸುತ್ತದೆ. ಬೆನ್ನು ಮೂಳೆಯ ನೈಸರ್ಗಿಕ ವಕ್ರತೆಯನ್ನು ಕಾಪಾಡುವಲ್ಲಿ ಪರಿಣಾಮಕಾರಿಯಾಗಿದೆ. ದೇಹದ ಸಮತೋಲನವನ್ನು ಸುಧಾರಿಸುತ್ತದೆ ಮಾತ್ರವಲ್ಲದೆ ಮನಸ್ಸಿನ ಏಕಾಗ್ರತೆಯನ್ನೂ ಹೆಚ್ಚಿಸುತ್ತದೆ.