Advertisement

ಅಂಗನವಾಡಿಗಳಲ್ಲೇ ಎಲ್ಕೆಜಿ ಆರಂಭಿಸಿ

01:34 PM May 29, 2019 | Suhan S |

ರಾಮನಗರ: ರಾಜ್ಯ ಸರ್ಕಾರ ತನ್ನ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು (ಎಲ್ಕೆಜಿ, ಯುಕೆಜಿ) ಆರಂಭಿಸಲು ಉದ್ದೇಶಿಸಿದ್ದು, ಸರ್ಕಾರದ ಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದರಿ ತರಗತಿಗಳನ್ನು ಅಂಗನವಾಡಿ ಗಳಲ್ಲೇ ಆರಂಭಿಸಬೇಕು. ಅಂಗನವಾಡಿಗಳನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Advertisement

ಅಂಗನವಾಡಿಗಳನ್ನು ಬಲಹೀನಗೊಳಿಸಬೇಡಿ: ಈ ಸಂಬಂಧ ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಲೀಲಾವತಿ ಅವರು ಮಾತನಾಡಿ ಸರ್ಕಾರ ಒಂದು ಸಂಸ್ಥೆಯನ್ನು ಸಬಲಗೊಳಿಸಲು ಮತ್ತೂಂದು ಸಂಸ್ಥೆಯನ್ನು ಬಲಹೀನಗೊಳಿಸುವುದು ನ್ಯಾಯಸಮ್ಮ ತವೇ? ಎಂದು ಸರ್ಕಾರವನ್ನು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸುವುದರಿಂದ ಅಂಗನವಾಡಿ ಕೇಂದ್ರಗಳು ಮುಚ್ಚಿಹೋಗುತ್ತವೆ. ಅಂಗನವಾಡಿ ಕೇಂದ್ರಗಳಲ್ಲೇ ಈ ನೂತನ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

1975ರಲ್ಲಿ ಐಸಿಡಿಎಸ್‌ ಯೋಜನೆಯಡಿ ಆರಂಭವಾದ ಅಂಗನವಾಡಿ ಕೇಂದ್ರಗಳು ಇಂದಿಗೂ ಯಶಸ್ವಿಯಾಗಿ ನಡೆಯುತ್ತಿದೆ. ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯರೇ ಕಾರಣ. ಈ ಯೋಜನೆಯಡಿ ರಾಜ್ಯದಲ್ಲಿ ಉದ್ಯೋಗ ಪಡೆದುಕೊಂಡ ಲಕ್ಷಾಂತರ ಮಹಿಳೆಯರು ಜೀವನ ನಡೆಸುತ್ತಿದ್ದಾರೆ. ಈಗ ರಾಜ್ಯ ಸರ್ಕಾರ ಕನ್ನಡ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ಆರಂಭಿಸಿ, ಅತಿಥಿ ಶಿಕ್ಷಕರ ಮೂಲಕ ಶಿಕ್ಷಣ ನೀಡಲು ಮುಂದಾಗಿದೆ. ಇದರಿಂದ ಅಂಗನವಾಡಿ ಕೇಂದ್ರಕ್ಕೆ ಸೇರುವ ಮಕ್ಕಳೆಲ್ಲ ಸರ್ಕಾರಿ ಶಾಲೆಗೆ ಸೇರುವುದರಿಂದ ಕೇಂದ್ರದಲ್ಲಿ ಮಕ್ಕಳ ಕೊರತೆಯಾಗಿ ಮುಚ್ಚುವ ಹಂತ ತಲುಪುತ್ತದೆ ಎಂದರು.

ಅಂಗನವಾಡಿ ನಂಬಿರುವ ಕಾರ್ಯಕರ್ತೆಯರಿದ್ದಾರೆ:

Advertisement

ಈಗಾಗಲೆ ಅಂಗನವಾಡಿಗಳನ್ನೇ ನಂಬಿ ಜೀವನ ಸಾಗಿಸುತ್ತಿರುವ ಲಕ್ಷಾಂತರ ಕಾರ್ಯಕರ್ತರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ರಾಜ್ಯ ಸರ್ಕಾರ ಪೂರ್ವ ಪ್ರಾಥಮಿಕ ತರಗತಿಗಳನ್ನು ಅಂಗನವಾಡಿಗಳಲ್ಲೇ ಆರಂಭಿಸಬೇಕು ಎಂದರು. ಅಂಗನವಾಡಿ ಕಾರ್ಯಕರ್ತರು ಸಹ ವಿದ್ಯಾವಂತರೆ, ಪೂರ್ವ ಪ್ರಾಥಮಿಕ ತರಗತಿಗಳಿಗೆ ಪಾಠ ಮಾಡಲು ಸಶಕ್ತರು. ಸೂಕ್ತ ತರಬೇತಿ ಕೊಟ್ಟರೆ ಚೆನ್ನಾಗಿಯೇ ನಿಭಾಯಿಸುತ್ತಾರೆ. ಸರ್ಕಾರ ಈ ಕ್ರಮ ಕೈಗೊಂಡರೆ ಕಾರ್ಯಕರ್ತೆಯರಿಗೆ ಉದ್ಯೋಗ ಭದ್ರತೆ ಸಿಕ್ಕಂತಾಗುತ್ತದೆ ಎಂದರು.

ಸಿಎಂ ವಿರುದ್ಧ ಅಸಮಾಧಾನ: ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸುವ ಯೋಜನೆ ಜಾರಿ ಮಾಡುವ ಮೊದಲು ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರ ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದಿಲ್ಲ. ಮುಖ್ಯಮಂತ್ರಿ ಅವರ ಏಕಪಕ್ಷೀಯ ನಿರ್ಣಯದಿಂದ ಲಕ್ಷಾಂತರ ಅಂಗನವಾಡಿ ಕಾರ್ಯಕರ್ತರ ಬದುಕು ಬೀದಿಗೆ ಬರುವಂತಾಗಿದೆ ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಟಿ.ಲೀಲಾವತಿ ಆರೋಪಿಸಿದರು.

ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ: ಸರ್ಕಾರ ಉದ್ದೇಶಿಸಿರುವ ಪೂರ್ವ ಪ್ರಾಥಮಿಕ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲೇ ಆರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಇದೇ ಮೇ 30ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಾಂಕೇತಿಕ ಹೋರಾಟ ಮಾಡುವುದಾಗಿ. ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ಎಚ್ಚರಿಸಿದರು.

ಸಂಘದ ತಾಲೂಕು ಅಧ್ಯಕ್ಷೆ ಪುಷ್ಪಲತಾ, ಪ್ರಧಾನ ಕಾರ್ಯದರ್ಶಿ ಜಯಲಕ್ಷ್ಮಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಬಿ.ವಿ.ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next