ಕನ್ನಡದಲ್ಲಿ ಈಗಂತೂ ಸಾಕಷ್ಟು ಹೊಸ ಪ್ರತಿಭೆಗಳ ಸಿನಿಮಾಗಳು ಬಿಡುಗಡೆ ಮುನ್ನವೇ ಒಂದಷ್ಟು ಸದ್ದು ಮಾಡುತ್ತಿವೆ. ಅಂತಹ ಅನೇಕ ಚಿತ್ರಗಳ ಸಾಲಿಗೆ ಈಗ “ಮುಂದಿನ ನಿಲ್ದಾಣ’ ಎಂಬ ಹೊಸ ಚಿತ್ರವೂ ಕೂಡ ಬಿಡುಗಡೆ ಮೊದಲೇ ಸುದ್ದಿಯಾಗುತ್ತಿದೆ. ಚಿತ್ರದ ಮೊದಲ ಫಸ್ಟ್‌ಲುಕ್ ಹೊರಬಂದಿದ್ದು, ಎಲ್ಲೆಡೆಯಿಂದಲೂ ಮೆಚ್ಚುಗೆ ಪಡೆದಿದೆ. ಬಿಡುಗಡೆಯಾಗಿರುವ ಪೋಸ್ಟರ್‌ನ ವಿಶೇಷವೆಂದರೆ, ಈಗಾಗಲೇ ದೇಶಾದ್ಯಂತ ಪ್ರಸಿದ್ಧಗೊಂಡಿರುವ ಹನುಮಾನ್ ಪೋಸ್ಟರ್‌ನ ಕರಣ್ ಆಚಾರ್ಯ, “ಮುಂದಿನ ನಿಲ್ದಾಣ’ ಚಿತ್ರದ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ.
ಚಿತ್ರದ ಪೋಸ್ಟರ್‌ನಲ್ಲಿ ಹಸಿರು ಹೊದ್ದು ಮಲಗಿರುವ ಪ್ರಕೃತಿ ಸೌಂದರ್ಯ ನೋಡುತ್ತ, ಇಬ್ಬರು ಹುಡುಗಿಯರ ಮಧ್ಯೆ ಹುಡುಗನೊಬ್ಬ ಕುಳಿತಿದ್ದಾನೆ. ಸೂಕ್ಷ್ಮವಾಗಿ ಗಮನಿಸಿದರೆ, ಒಬ್ಬಳು ಡಾಕ್ಟರ್, ಇನ್ನೊಬ್ಬಳು ಪೇಂಟರ್, ಅವನು ಫೋಟೋಗ್ರಾಫರ್ ಎಂಬುದು ಗೊತ್ತಾಗುತ್ತೆ. ಅವರ ಬೆನ್ನ ಹಿಂದೆ ಇರುವ ಸ್ಟೆಥೋಸ್ಕೋಪ್, ಕ್ಯಾಮರಾ ಹಾಗೂ ಪೇಂಟಿಂಗ್ ಕಿಟ್ ಅದನ್ನು ಸೂಚಿಸುತ್ತದೆ. ಸದ್ಯಕ್ಕೆ ಈ ಪೋಸ್ಟರ್ ನೋಡಿದವರಿಗೆ ಅದೊಂದು ತ್ರಿಕೋನ ಪ್ರೇಮಕಥೆ ಇರಬಹುದಾ ಎಂಬ ಪ್ರಶ್ನೆ ಮೂಡಿಸುವುದಂತೂ ನಿಜ. ಇಂಥದ್ದೊಂದು ಕುತೂಹಲದ ಪೋಸ್ಟರ್ ಮಾಡಿಸಿ, ಹೊರಬಿಟ್ಟಿದ್ದು ನಿರ್ದೇಶಕ ವಿನಯ್ ಭಾರಧ್ವಾಜ್.
ಹೊಸ ಆಲೋಚನೆಯೊಂದಿಗೆ ಚಿತ್ರ ಮಾಡಿರುವುದರ ಜೊತೆಗೆ, ಚಿತ್ರದ ಫಸ್ಟ್‌ಲುಕ್ ಹೇಗಿದ್ದರೆ, ಜನರಿಗೆ ಅದು ತಲುಪುತ್ತದೆ, ಹೆಚ್ಚು ಚರ್ಚೆಗೆ ಕಾರಣವಾಗುತ್ತೆ ಎಂಬುದನ್ನು ಗಮನದಲ್ಲಿರಿಸಿಕೊಂಡೇ ಈ ಚಿತ್ರದ ಫಸ್ಟ್‌ಲುಕ್ ಹೊರಬಿಟ್ಟಿದ್ದಾರೆ. ಅದೇನೆ ಇರಲಿ, ಚಿತ್ರದ ಶೀರ್ಷಿಕೆಯೇ ಈಗಾಗಲೇ ಒಂದಷ್ಟು ಹೊಸತನಕ್ಕೆ ಸಾಕ್ಷಿಯಾಗಿರುವುದರಿಂದ ಚಿತ್ರದ ಕಥೆ, ಚಿತ್ರಕಥೆಯೂ ಅದರ ಹೊರತಾಗಿರುವುದಿಲ್ಲ ಎಂಬುದನ್ನೂ ಈ ಫಸ್ಟ್‌ಲುಕ್ ಹೇಳುವಂತಿದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ವಿನಯ್, “ಮುಂದಿನ ನಿಲ್ದಾಣ ಎಂಬುದು ಮೂವರ ಲೈಫ್ಗೆ ಸಂಬಂಧಿಸಿದ್ದು.
ಅವರ ಜೀವನದ ಜರ್ನಿಯ ಕುರಿತು ಹೇಳಲಾಗಿದೆ. ಇವತ್ತಿನ ಟ್ರೆಂಡ್ ಹಾಗೂ ಯೂತ್ಸ್ಗೆ ಇಷ್ಟವಾಗುವಂತಹ ಅಂಶಗಳೊಂದಿಗೆ ಚಿತ್ರ ಸಾಗುತ್ತದೆ’ ಎನ್ನುತ್ತಾರೆ. ಅಂದಹಾಗೆ, ಚಿತ್ರದಲ್ಲಿ “ಚೂರಿಕಟ್ಟೆ’ ಖ್ಯಾತಿಯ ಪ್ರವೀಣ್ ತೇಜ್, ರಾಧಿಕಾ ಚೇತನ್, ಅನನ್ಯ ಕಶ್ಯಪ್ ಮುಖ್ಯ ಆಕರ್ಷಣೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಅಕ್ಟೋಬರ್ ವೇಳೆಗೆ ಚಿತ್ರ ಪ್ರೇಕಷಕರ “ನಿಲ್ದಾಣ’ದ ಎದುರು ಬಂದು ನಿಲ್ಲಲಿದೆ. ಈ ಚಿತ್ರ ಕೋಸ್ಟಲ್ ಬ್ರಿಜ್ ಪ್ರೊಡಕ್ಷನ್‌ನಲ್ಲಿ ತಯಾರಾಗಿದೆ. ಚಿತ್ರದ ಆಡಿಯೋ ಹಕ್ಕನ್ನು ಪಿಆರ್‌ಕೆ ಸಂಸ್ಥೆ ಪಡೆದುಕೊಂಡಿದೆ.