ಹೊಸಪೇಟೆ: ಜೂನ್ ತಿಂಗಳೊಳಗಾಗಿ ಹೊಸಪೇಟೆ-ಕೊಟ್ಟೂರು ಪ್ಯಾಸೆಂಜರ್ ರೈಲು ಆರಂಭಿಸುವಂತೆ ಆಗ್ರಹಿಸಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳು ರೈಲ್ವೆ ಇಲಾಖೆಯ ಪ್ರಾದೇಶಿಕ ಅಧಿಕಾರಿ ಸುನೀಲ್.ಜಿ ಹಾಗೂ ರೈಲ್ವೆ ನಿಲ್ದಾಣ ಮುಖ್ಯಸ್ಥ ಉಮರ್ ಬಾನಿ ಮುಖಾಂತರ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಗುರುವಾರ ಮನವಿ ಸಲ್ಲಿಸಿದರು.
ಕ್ರಿಯಾ ಸಮಿತಿ ಅಧ್ಯಕ್ಷ ವೈ.ಯಮುನೇಶ್ ಮಾತನಾಡಿ, ಹೊಸಪೇಟೆ-ಕೊಟ್ಟೂರು-ಹರಿಹರ ನಡುವಿನ 140 ಕಿ.ಮೀ ಅಂತರದ ಮಾರ್ಗದಲ್ಲಿ ಈಗಾಗಲೇ ಹರಿಹರ-ಕೊಟ್ಟೂರು ನಡುವೆ 2014ರಲ್ಲೇ ಪ್ಯಾಸೆಂಜರ್ ಗಾಡಿ ಆರಂಭವಾಗಿದೆ.
ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕೊಟ್ಟೂರಿನಿಂದ ಹೊಸಪೇಟೆಗೆ ರೈಲು ಸಂಚಾರ ವಿಸ್ತರಣೆಯಾಗಿಲ್ಲ. ಈ ಮಾರ್ಗದ ಟಿ.ಬಿ. ಡ್ಯಾಂ, ಹಳೇ ಅಮರಾವತಿ, ವ್ಯಾಸನಕೆರೆ, ಗುಂಡಾ ಅರಣ್ಯ ಪ್ರದೇಶದಲ್ಲಿ ಹಾದುಹೋಗಿರುವ ರೈಲು ಮಾರ್ಗದ ಮೇಲೆ ಹೈಟೆನ್‌ಶನ್ ವಿದ್ಯುತ್ ತಂತಿ ಮಾರ್ಗ ಹಾದುಹೋಗಿದ್ದು, ಪ್ರಯಾಣಿಕರ ರೈಲಿನ ಸುರಕ್ಷ ಸಂಚಾರಕ್ಕೆ ಅಡ್ಡಿಯಾಗಿದೆ. ಈ ನಿಟ್ಟಿನಲ್ಲಿ ಅಧಿಕ ಸಾಮರ್ಥ್ಯದ ವಿದ್ಯುತ್ ಮಾರ್ಗವನ್ನು ಮೇಲಕ್ಕೆ ಎತ್ತರಿಸುವ ಕಾಮಗಾರಿ ಆರಂಭವಾಗಿದೆ. ಆದರೆ ಕಾಮಗಾರಿ ವಿಳಂಬ ಗತಿಯಿಂದ ಸಾಗಿರುವುದರಿಂದ ರೈಲು ಸಂಚಾರ ಮತ್ತಷ್ಟು ವಿಳಂಬವಾಗುವ ಆತಂಕ ಎದುರಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಮಾರ್ಗದ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ವಿಭಾಗಿಯ ರೈಲ್ವೆ ವ್ಯವಸ್ಥಾಪಕರಾದ ರಾಜೇಶ್ ಮೋಹನ್‌ರವರು ಮೇ ತಿಂಗಳೊಳಗಾಗಿ ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರ ರೈಲ್ವೆ ಸುರಕ್ಷತ ಆಯುಕ್ತರ ಅನುಮತಿ ಪಡೆದು ಜೂನ್ ತಿಂಗಳೊಳಗಾಗಿ ಪ್ಯಾಸೆಂಜರ್ ರೈಲು ಆರಂಭಿಸುವುದಾಗಿ ಹೇಳಿದ್ದಾರೆ. ಆದ್ದರಿಂದ 2 ದಶಕಗಳ ಬೇಡಿಕೆಯಾದ ಈ ಮಾರ್ಗದಲ್ಲಿ ವಿಳಂಬ ಮಾಡದೆ ಜೂನ್ ತಿಂಗಳೊಳಗಾಗಿ ಪ್ಯಾಸೆಂಜರ್ ರೈಲು ಆರಂಭಿಸಲು ಆಗ್ರಹಿಸಿದರು.
ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಕೆ.ಮಹೇಶ್‌ಶ್ಯಾಮಪ್ಪ ಅಗೋಲಿ, ಡಾ| ಜೋಗಳೇಕರ್, ಯು.ಆಂಜನೇಯಲು,
ರಮೇಶ್ ಗೌಡ, ತಿಪ್ಪೇಸ್ವಾಮಿ, ರಘುನಾಥ ಕೆಂದೋಳೆ, ಸಿದ್ದೇಶ್‌ಉತ್ತಂಗಿ, ಬಿ.ಜಹಂಗೀರ್, ಪೀರಾನ್ ಸಾಬ್,
ಪಿ.ಪ್ರಭಾಕರ್, ವಿಶ್ವನಾಥ್ ಕೌತಾಳ್, ಜಿ.ಸೋಮಣ್ಣ, ವೈ.ಶೇಖರ್, ಜಿ.ವೀರೇಶಪ್ಪ, ವಿಜಯಕುಮಾರ್,
ಮಹಂತೇಶ್, ಮರುಳಸಿದ್ದೇಶ್, ಎಚ್.ಪರಶುರಾಮ್, ಎಸ್.ದೇವಪ್ಪ, ಎಂ.ರಾಘವೇಂದ್ರಚಾರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.